ಯಾವ ಯಾವ ವಿಚಾರಕ್ಕೋ ಜಗಳವಾಡಿ ಪೊಲೀಸ್ ಮೆಟ್ಟಲು ಹತ್ತುವ ಪ್ರಕರಣಗಳನ್ನು ನೋಡಿರುತ್ತೀರಿ. ಆದರೆ ಈಗ ಕೇವಲ ಒಂದು ಪ್ಯಾಕೇಟ್ ಕುರ್ ಕುರೆ ಸಲುವಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ಜಗಳವೇ ನಡೆದುಹೋಗಿದೆ. ಹೊನ್ನೇಬಾಗಿಯ ಅತೀಫ್ ಉಲ್ಲಾ ಫ್ಯಾಮಿಲಿ ಹಾಗೂ ಸದ್ದಾಂ ಎಂಬ ಫ್ಯಾಮಿಲಿ ನಡುವೆ ಮಾರಾಮಾರಿ ಜಗಳವಾಗಿದ್ದು, ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೊನ್ನೇಬಾಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಅತೀಪ್ ಉಲ್ಲಾ ಎಂಬುವಾತ ಈ ಗ್ರಾಮದಲ್ಲಿ ಸಣ್ಣದೊಂದು ಕಿರಾಣಿ ಅಂಗಡಿ ಇಟ್ಟುಕೊಂಡಿದ್ದರು. ಸದ್ದಾಂ ಕುಟುಂಬದ ಮಕ್ಕಳು ಅತೀಫ್ ಉಲ್ಲಾರವರ ಅಂಗಡಿಯಲ್ಲಿ ಕುರ್ಕುರೆ ಖರೀದಿ ಮಾಡಿದ್ದರು. ಎಕ್ಸ್ ಪೆರಿಯಾದ ಕುರ್ಕುರೆ ಮಾರಾಟ ಮಾಡಿದ್ದೀಯಾ ಬೇರೆಯದ್ದನ್ನ ಕೊಡು ಎಂದು ಕೇಳಿದ್ದಕ್ಕೆ ಎರಡು ಕುಟುಂಬಸ್ಥರ ನಡುವೆ ಗಲಾಟೆಯಾಗಿದೆ ಎಂದು ಆರೋಪಿಸಲಾಗಿದೆ. ಈ ಸಮಯದಲ್ಲಿ ಅತೀಫ್ ಹಾಗೂ ಸದ್ದಾಂ ಕುಟುಂಬಸ್ಥರು ನಡುವೆ ವಾಗ್ವಾದ ನಡೆದಿದ್ದು, ಮಾತು ಮಿತಿ ಮೀರಿ ಎರಡು ಕುಟುಂಬಸ್ಥರು ಪರಸ್ಪರ ಜಗಳಕ್ಕೆ ಬಿದ್ದಿದ್ದು, ಹೊಡೆದಾಟವೂ ನಡೆದಿದೆ.
ಸದ್ದಾಂ ಎಂಬುವಾತ ಅತೀಫ್ ಮೇಲೆ ವಾಗ್ವಾದ ಮತ್ತು ಗಲಾಟೆಯ ಹಿನ್ನೆಲೆಯಲ್ಲಿ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅದೇ ದ್ವೇಷ ಇಟ್ಟುಕೊಂಡು ಅತೀಫ್ ಕುಟುಂಬದ 30ಕ್ಕೂ ಹೆಚ್ವು ಜನರಿಂದ ಸದ್ದಾಂ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಲಾಗಿದೆ. ಹೋಟೆಲ್ ಧ್ವಂಸ ಮಾಡಿರೋದಾಗಿ ಆರೋಪ ಕೇಳಿಬಂದಿದೆ. ಗಲಾಟೆಯನ್ನು ಬಿಡಿಸಲು ಬಂದವರ ಮೇಲೆಯೂ ಹಲ್ಲೆ ಮಾಡಲಾಗಿದೆ. ಎರಡು ಕಡೆಯವರಿಂದ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳದಲ್ಲಿ ಪೊಲೀಸರ ಭಿಗಿ ಭದ್ರತೆಯೂ ಸಹ ಇದ್ದು, ಬಂಧನ ಭೀತಿಯಿಂದ 25ಕ್ಕೂ ಹೆಚ್ಚು ಜನ ಊರನ್ನು ಬಿಟ್ಟು ಎಸ್ಕೇಪ್ ಆಗಿದ್ದಾರೆ. ಕೂಡಲೇ ಹಲ್ಲೆ ಮಾಡಿದವರನ್ನು ಬಂಧಿಸಿ ಶಿಕ್ಷೆ ಕೊಡಿಸುವಂತೆ ಸ್ಥಳೀಯರಿಂದ ಆಗ್ರಹ ಕೂಡ ಕೇಳಿಬಂದಿದೆ.