ಕಾಂಗ್ರೆಸ್ ಸರ್ಕಾರದ ಸಚಿವ ಪ್ರಿಯಾಂಕ್ ಖರ್ಗೆ ಹೆಸರು ಗುತ್ತಿಗೆದಾರ ಸಚಿನ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ತುಳುಕು ಹಾಕಿಕೊಂಡಿರುವ ಹಿನ್ನೆಲೆಯಲ್ಲಿ ವಿರೋಧ ಪಕ್ಷ ಬಿಜೆಪಿಯ ನಾಯಕರು ತೀವ್ರವಾಗಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ದ ವಾಗ್ದಾಳಿ ನಡೆಸಿದ್ದರು. ಈ ಒಂದು ಏಟಿಗೆ ಇಂದು ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದರು. ಬಿಜೆಪಿ ಸರಿಯಾಗಿ ಹೋಮ್ ವರ್ಕ್ ಮಾಡಿಲ್ಲ ಎಂದು ಬಿಜೆಪಿ ಗೆ ಟಾಂಗ್ ಕೊಟ್ಟಿದ್ದರು. ಆದರೆ ಇದೀಗ ಪ್ರಿಯಾಂಕ ಖರ್ಗೆ ಅವರ ನೋಟಿಸಿನಲ್ಲಿ ಜೀವ ಇಲ್ಲ; ನಿಶ್ಶಕ್ತ ನೋಟಿಸನ್ನು ಕೊಟ್ಟಿದ್ದಾಗಿ ಸ್ವತಃ ಪ್ರಿಯಾಂಕ ಖರ್ಗೆಯವರು ಒಪ್ಪಿಕೊಂಡಂತಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ವಿಶ್ಲೇಷಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಪ್ರಿಯಾಂಕ ಖರ್ಗೆಯವರ ನೋಟಿಸಿಗೆ ನಾನು ಯಾವುದೇ ಪ್ರಾಮುಖ್ಯತೆ ಕೊಟ್ಟಿಲ್ಲ. ಇಲ್ಲಿನವರೆಗೆ ಅವರ ನೋಟಿಸ್ ಮೇಲೆ ಏನೇ ಕ್ರಮ ತೆಗೆದುಕೊಳ್ಳಲು ಅವರಿಗೆ ಆಗಿಲ್ಲವೆಂದಾದರೆ ಆ ನೋಟಿಸಿಗೆ ಮೌಲ್ಯವಿಲ್ಲ ಎಂದು ಅವರೇ ಒಪ್ಪಿಕೊಂಡಂತಾಗಿದೆ ಎಂದು ವಿಶ್ಲೇಷಿಸಿದರು. ಒಂದು ವರ್ಷದ ಹಿಂದೆ ನೋಟಿಸ್ ನೀಡಿದ್ದಾಗಿ ಪ್ರಿಯಾಂಕ ಖರ್ಗೆ ಹೇಳಿಕೊಂಡರು. ಒಂದು ವರ್ಷದ ಹಿಂದೆ ಕೊಟ್ಟ ನೋಟಿಸಿಗೆ ನಾನು ಒಂದು ಚೂರೂ ಅಲುಗಾಡಿಲ್ಲ (ಶೇಕ್ ಆಗಿಲ್ಲ) ಎಂದರು. ಪ್ರಿಯಾಂಕ ಖರ್ಗೆಯವರೇ ಯಾವಾಗ ನೀವು ರಾಜೀನಾಮೆ ಕೊಟ್ಟು ಗೌರವ ಉಳಿಸಿಕೊಳ್ಳುತ್ತೀರಿ; ಅಷ್ಟೇ ಹೇಳಿ ಎಂದು ಪ್ರಶ್ನೆ ಹಾಕಿದರು.