ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಪ್ರಮುಖ ಆರೋಪಿಗಳಾದ ನಟ ದರ್ಶನ್ ಹಾಗೂ ಪವಿತ್ರಾ ಗೌಡ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಕೊಲೆ ಪ್ರಕರಣ ಬಯಲಿಗೆ ಬಂದ ಬಳಿಕ ಜೈಲು ಸೇರಿದ್ದ ದರ್ಶನ್ ಹಾಗೂ ಪವಿತ್ರಾ ಗೌಡ, ಇದೇ ಮೊದಲ ಬಾರಿಗೆ ಮುಖಾಮುಖಿಯಾಗಿದ್ದರು. ಈ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಹಾಗೂ ಎ2 ಆರೋಪಿ ದರ್ಶನ್, ಬೆಂಗಳೂರಿನ ಸೆಷನ್ಸ್ ನ್ಯಾಯಾಲಯಕ್ಕೆ ಆಗಮಿಸಿದ್ದರು.
ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಈಗಾಗಲೇ ಜಾಮೀನು ಪಡೆದಿರುವ ಎಲ್ಲ ಆರೋಪಿಗಳು ನ್ಯಾಯಾಲಯದ ತೀರ್ಪಿನ ಅನ್ವಯ ಪ್ರತಿ ತಿಂಗಳೂ ನ್ಯಾಯಾಲಯಕ್ಕೆ ಹಾಜರಾಗಬೇಕಿದೆ. ಈ ಪ್ರಕ್ರಿಯೆ ಹಿನ್ನೆಲೆಯಲ್ಲಿ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ನಲ್ಲಿ ವಿಚಾರಣೆ ನಡೆಯಿತು. ಈ ವೇಳೆ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯಕ್ಕೆ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಮತ್ತು ಪವಿತ್ರಗೌಡ ಸೇರಿದಂತೆ ಎಲ್ಲಾ 17 ಮಂದಿ ಆರೋಪಿಗಳು ಹಾಜರಾಗಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್, ವಿಚಾರಣೆಯನ್ನು ಮುಂದೂಡಿಕೆ ಮಾಡಿತು. ಫೆಬ್ರವರಿ 25ಕ್ಕೆ ಪ್ರಕರಣದ ಮುಂದಿನ ವಿಚಾರಣೆಯನ್ನ ನ್ಯಾಯಾಲಯ ಮುಂದೂಡಿಕೆ ಮಾಡಿದೆ. ಈ ಮೂಲಕ ಕೊಲೆ ಪ್ರಕರಣದ ಎಲ್ಲ ಆರೋಪಿಗಳಿಗೂ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ನಟ ದರ್ಶನ್ ಅವರನ್ನು ಅವರ ಆಪ್ತ ಧನ್ವೀರ್ ತಮ್ಮ ಕಾರಿನಲ್ಲಿ ಕರೆದುಕೊಂಡು ಬಂದಿದ್ದರು. ನ್ಯಾಯಾಲಯದ ವಿಚಾರಣೆ ಮುಕ್ತಾಯಗೊಂಡ ಬಳಿಕ ನಟ ದರ್ಶನ್, ಅದೇ ವಾಹನದಲ್ಲಿ ನ್ಯಾಯಾಲಯದಿಂದ ಮನೆಗೆ ವಾಪಸ್ ತೆರಳಿದರು.
ಕೋರ್ಟ್ ಹಾಲ್ನಲ್ಲಿ ದರ್ಶನ್ – ಪವಿತ್ರಾ ಗೌಡ ಭಾವುಕ!
ನ್ಯಾಯಾಲಯಕ್ಕೆ ವಿಚಾರಣೆಗೆ ಆಗಮಿಸಿದ ವೇಳೆ ನಟ ದರ್ಶನ್ ಅವರನ್ನು ನೋಡಿ ಪವಿತ್ರಾ ಗೌಡ ಭಾವುಕರಾಗಿ, ಕಣ್ಣೀರಿಟ್ಟರು. ಈ ಭಾವನಾತ್ಮಕ ಸನ್ನಿವೇಶಕ್ಕೆ ನ್ಯಾಯಾಲಯ ಸಾಕ್ಷಿಯಾಯ್ತು. ದರ್ಶನ್ ಬರುವವರೆಗೂ ಪವಿತ್ರಾ ಗೌಡ ಅವರು ನ್ಯಾಯಾಲಯದ ಬಾಗಿಲ ಕಡೆಯೇ ನೋಡುತ್ತಾ ನಿಂತಿದ್ದರು. ಬಳಿಕ ದರ್ಶನ್ ಅವರ ದರ್ಶನ ಆಗುತ್ತಿದ್ದಂತೆಯೇ ಕಣ್ಣೀರಿಟ್ಟರು. ಬಳಿಕ ಪವಿತ್ರಾ ಗೌಡ ಅವರ ಬಳಿ ಬಂದ ದರ್ಶನ್ ಅವರ ಕಿವಿಯಲ್ಲಿ ಪವಿತ್ರಾ ಗೌಡ ಪಿಸುಗುಟ್ಟಿದ್ದೂ ಕಂಡು ಬಂತು.
ಹೊರ ರಾಜ್ಯದ ದೇವಸ್ಥಾನಕ್ಕೆ ಹೋಗಬೇಕು ಎಂದು ದರ್ಶನ್ & ಟೀಂ ಕೋರ್ಟ್ಗೆ ಅರ್ಜಿ ಹಾಕಿದೆ. ಬೇರೆ ರಾಜ್ಯಗಳಿಗೆ ಸಿನಿಮಾ ಶೂಟಿಂಗ್ ಉದ್ದೇಶಕ್ಕಾಗಿ ಅಲ್ಲ, ಕೇವಲ ದೇವಸ್ಥಾನಗಳಿಗೆ ಭೇಟಿ ನೀಡಬೇಕಾದ ಉದ್ದೇಶದಿಂದ ತೆರಳಲು ಅವಕಾಶ ಕೋರಿ ಕೋರ್ಟ್ಗೆ ಅರ್ಜಿ ಹಾಕಲಾಗಿದೆ. ಈ ಕುರಿತಾಗಿ ಕೋರ್ಟ್ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಅನ್ನೋ ಮಾಹಿತಿಯೂ ಸಿಕ್ಕಿದೆ.