“ಬೆಂಗಳೂರು ಕನಕಪುರ ರಸ್ತೆ ಹಿಂದೆ ಹೇಗಿತ್ತು, ಈಗ ಹೇಗಿದೆ? ರಸ್ತೆ, ನೀರಾವರಿ, ಒಳಚರಂಡಿ, ಹಳ್ಳಿಗಳಲ್ಲಿ ಕಾಂಕ್ರೀಟ್ ರಸ್ತೆ ಮಾಡಿಸಿದ್ದೇನೆ. ನೀವು ಪಕ್ಕದ ಮದ್ದೂರು, ಮಳವಳ್ಳಿ, ಚನ್ನಪಟ್ಟಣಕ್ಕೆ ಹೋಗಿ ನೋಡಿ, ಪರಿಸ್ಥಿತಿ ಗೊತ್ತಾಗುತ್ತದೆ. ಕುಮಾರಸ್ವಾಮಿ ಚನ್ನಪಟ್ಟಣದಿಂದ ಎರಡು ಬಾರಿ ಸಿಎಂ, ದೇವೇಗೌಡರು ಪ್ರಧಾನ ಮಂತ್ರಿಯಾಗಿದ್ದರು. ನಾನು ಅಲ್ಲಿಗೆ ಹೋದಾಗ ಮೂಗು ಮುಚ್ಚಿಕೊಂಡು ಹೋಗಬೇಕಾಯಿತು. ಈಗ ಸಿದ್ದರಾಮಯ್ಯ ಅವರಿಗೆ ಹೇಳಿ, ಸುಮಾರು 700-800 ಕೋಟಿ ಅನುದಾನವನ್ನು ಆ ಕ್ಷೇತ್ರಕ್ಕೆ ನೀಡಲಾಗಿದೆ. ಅಲ್ಲಿಗೆ ಹೋಗಿ ನೋಡಿದಾಗ ನಾಚಿಕೆಯಾಯಿತು. ಅಲ್ಲಿನ ಜನರಿಗೆ ಒಂದು ಮನೆ, ನಿವೇಶನ ನೀಡಿಲ್ಲ. ನಾನು ಸುಮಾರು 200 ಎಕರೆ ಜಮೀನು ಗುರುತಿಸಿ ನಿವೇಶನ ಹಂಚಿಕೆ ಮಾಡಲು ಸೂಚಿಸಿದ್ದೇನೆ. ಇದೆಲ್ಲವನ್ನು ಅರಿತ ಜನ ಕಳೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡಿ 25 ಸಾವಿರ ಮತಗಳಿಂದ ಗೆಲ್ಲಿಸಿದ್ದಾರೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಕುಮಾರಸ್ವಾಮಿ, ಮಂಜುನಾಥ್ ಒಂದು ಎಕರೆ ದಾನ ಮಾಡಿದ್ದಾರಾ?
“ಈ ಕ್ಷೇತ್ರದಲ್ಲಿ ಸೋಲಾರ್ ಪ್ಲಾಂಟ್ ತಂದಿದ್ದೇನೆ. ಅದರ ಪಕ್ಕದಲ್ಲಿ ವಿದ್ಯಾರ್ಥಿ ವಸತಿ ನಿಲಯಕ್ಕೆ ಜಮೀನು ನೀಡಿದ್ದೇನೆ, ನಮ್ಮ ಅಜ್ಜಿ ಹೆಸರಿನಲ್ಲಿ ಖರೀದಿ ಮಾಡಿದ್ದ ಜಮೀನನ್ನು ಶಾಲೆಗೆ ಬರೆದುಕೊಟ್ಟಿದ್ದೇನೆ. ಕುಮಾರಸ್ವಾಮಿ ಅಥವಾ ಸಂಸದ ಮಂಜುನಾಥ್ ಅವರು ರಾಜ್ಯದಲ್ಲಿ ಯಾರಿಗಾದರೂ ಒಂದು ಎಕರೆ ದಾನ ಮಾಡಿದ್ದಾರಾ?” ಎಂದು ಪ್ರಶ್ನಿಸಿದರು.
“ನೀವು ನನ್ನನ್ನು ಬೆಳೆಸಿದ್ದೀರಿ, ಜಿಲ್ಲಾ ಪಂಚಾಯಿತಿ ಸದಸ್ಯ, ಶಾಸಕ, ಮಂತ್ರಿ ಹಾಗೂ ಉಪಮುಖ್ಯಮಂತ್ರಿ ಮಾಡಿದ್ದೀರಿ, ಸುರೇಶ್ ಅವರನ್ನು ಸಂಸದರನ್ನಾಗಿ ಮಾಡಿದ್ದೀರಿ ಎಂಬ ಕಾರಣಕ್ಕೆ ನಿಮ್ಮ ಋಣ ತೀರಿಸಲು ನಾನು ಈ ಕೆಲಸ ಮಾಡಿದ್ದೇನೆ. ನಮ್ಮ ಜತೆಯಲ್ಲಿದ್ದುಕೊಂಡು ತಟ್ಟೆಮರೆ ಏಟು ಕೊಟ್ಟವರಿಗೆ ನೀವು ಈ ವಿಚಾರ ತಿಳಿಸಿ, ಮುಂದೆ ನೀವು ಆತ್ಮಸಾಕ್ಷಿಗೆ ಮತ ಹಾಕುವಂತೆ ಹೇಳಬೇಕು” ಎಂದು ತಿಳಿಸಿದರು.
ಕನಕಪುರ ರಾಜ್ಯಕ್ಕೆ ಮಾದರಿ:
“ಡಿ.ಕೆ. ಸುರೇಶ್ ಸಂಸದರಾದ ನಂತರ ಇಡೀ ದೇಶದಲ್ಲಿ ನರೇಗಾ ಯೋಜನೆ ಅತಿಹೆಚ್ಚು ಅನುದಾನವನ್ನು ಬಳಸಿಕೊಂಡಿದ್ದೆವು. ಪ್ರತಿ ಪಂಚಾಯ್ತಿ ವ್ಯಾಪ್ತಿಯಲ್ಲಿ 3-5 ಕೋಟಿಯಂತೆ ಸುಮಾರು 200-300 ಕೋಟಿ ಅನುದಾನ ಬಳಸಿಕೊಳ್ಳಲಾಗಿತ್ತು. ಈ ಯಶಸ್ಸಿಗೆ ಕೇಂದ್ರ ಸರ್ಕಾರ ಪ್ರಶಸ್ತಿ ನೀಡಬೇಕಿತ್ತು. ಕ್ಷೇತ್ರದ ಶಾಸಕನಾದ ನನಗೆ ಪ್ರಶಸ್ತಿ ನೀಡಬೇಕು ಎಂಬ ಕಾರಣಕ್ಕೆ ಹಿಂದೆ ಮುಂದೆ ನೋಡಿದರು. ಇಷ್ಟು ಅನುದಾನ ಬಳಕೆ ನೋಡಿ ನಮ್ಮ ಮೇಲೆ ಅನುಮಾನ ಪಟ್ಟು ಕೇಂದ್ರದಿಂದ ಅಧಿಕಾರಿಗಳನ್ನು ಕಳುಹಿಸಿ ತನಿಖೆ ಮಾಡಿಸಿದರು. ನಂತರ ಪಂಚಾಯ್ತಿ ಅಧ್ಯಕ್ಷರಾದ ವೈ.ಡಿ ಭೈರೇಗೌಡರನ್ನು ಕಳುಹಿಸಿ ಪ್ರಶಸ್ತಿ ಪಡೆಯುವಂತೆ ಹೇಳಿದೆ. ಇದು ಕನಕಪುರದ ಸಾಧನೆ” ಎಂದು ತಿಳಿಸಿದರು.
“ಸುರೇಶ್ ಅವರು ಸಂಸದರಾಗಿದ್ದಾಗ ಅವರ ಕ್ಷೇತ್ರದಲ್ಲಿ ಹೆಚ್ಚು ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ನಮ್ಮ ತಾಲೂಕಿನಲ್ಲಿ 120ಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಈ ಭಾಗದ ಜನರಲ್ಲಿ ಹೆಚ್ಚು ಕ್ಯಾನ್ಸರ್ ರೋಗ ಪತ್ತೆಯಾಗುತ್ತಿದೆ ಎಂದು ವೈದ್ಯರು ಹೇಳಿದಾಗ ಇದನ್ನು ತಪ್ಪಿಸಲು ಈ ಕುಡಿಯುವ ನೀರಿನ ಘಟಕ ಸ್ಥಾಪಿಸಿದೆವು” ಎಂದರು.
“ನಾನು ಇಂಧನ ಸಚಿವನಾಗಿದ್ದಾಗ ಸುರೇಶ್ ಸಂಸದರಾಗಿದ್ದಾಗ ಈ ಭಾಗದ ಪ್ರತಿ ಇಬ್ಬರು ರೈತರಿಗೆ ಪ್ರತ್ಯೇಕವಾಗಿ ಟ್ರಾನ್ಸ್ ಫಾರ್ಮ್ ಅಳವಡಿಸಿದ್ದೆವು. ಈ ಲೋಕಸಭಾ ಕ್ಷೇತ್ರದಲ್ಲಿ ಮಾತ್ರ ಇಂತಹ ಯೋಜನೆ ಮಾಡಲಾಗಿದ್ದು, ರಾಜ್ಯದ ಬೇರೆ ಯಾವುದೇ ಜಿಲ್ಲೆಯಲ್ಲಿ ಹಾಗೂ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ದೇಶದಲ್ಲಿ ಎಲ್ಲಿಯೂ ಇಂತಹ ಯೋಜನೆ ಮಾಡಿಲ್ಲ” ಎಂದು ಹೇಳಿದರು.
ಮೆಡಿಕಲ್ ಕಾಲೇಜು ಆರಂಭಿಸುವುದು ಗೊತ್ತಿದೆ:
ರಾಮನಗರ ಆಸ್ಪತ್ರೆಯಲ್ಲಿ ಮೆಡಿಕಲ್ ಕಾಲೇಜು ನಡೆಯುತ್ತಿದೆ. ಕನಕಪುರಕ್ಕೆ ಮೆಡಿಕಲ್ ಕಾಲೇಜು ತರುವಾಗ ನಮ್ಮ ಕಾಲೇಜು ಕಿತ್ತುಕೊಳ್ಳುತ್ತಿದ್ದಾರೆ ಎಂದು ಗಲಾಟೆ ಮಾಡಿದರು. ಹೀಗಾಗಿ ನಿಮ್ಮ ಕಾಲೇಜು ಅಲ್ಲೇ ನಡೆಯಲಿ ಎಂದು ಬಿಟ್ಟೆ. ಕನಕಪುರದಲ್ಲಿ ಯಾವಾಗ ಮೆಡಿಕಲ್ ಕಾಲೇಜು ಆರಂಭಿಸಬೇಕು ಎಂದು ನನಗೆ ಗೊತ್ತಿದೆ. ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಅವರ ಕಾಲದಲ್ಲಿ ಘೋಷಣೆಯಾಗಿದ್ದ ಕಾಲೇಜನ್ನು ತಪ್ಪಿಸಿದರು. ಇದೊಂದು ಕೆಲಸ ಬಾಕಿ ಇದೆ. ಮುಂದಿನ ದಿನಗಳಲ್ಲಿ ಇನ್ನು ಅನೇಕ ಯೋಜನೆ ಹಾಕಿಕೊಳ್ಳುತ್ತೇವೆ.
ಲೋಕಸಭೆ ಚುನಾವಣೆ ಫಲಿತಾಂಶ ನಿಮ್ಮ ಆತ್ಮಸಾಕ್ಷಿಗೆ ಬಿಡುತ್ತೇನೆ:
“ಸಂಸತ್ ಚುನಾವಣೆ ಫಲಿತಾಂಶ ಈ ರೀತಿ ಯಾಕೆ ಆಯಿತು ಎಂದು ನಾನು ನಿಮ್ಮ ಆತ್ಮಸಾಕ್ಷಿಗೆ ಬಿಡುತ್ತೇನೆ. ಬೇರೆಯವರಿಗೆ ಮತ ಹಾಕಿ ಗೆಲ್ಲಿಸಿದ್ದೀರಿ. ನನ್ನ ಕ್ಷೇತ್ರದಲ್ಲೂ ತಟ್ಟೆಮರೆ ಏಟು ಬಿದ್ದಿದೆ. ಹೊಸದಾಗಿ ಬಂದಿರುವ ಸಂಸದರು ದಿನಬೆಳಗಾದರೆ ನಿಮಗೆ ಸೇವೆ ಮಾಡುತ್ತಿರಬೇಕಲ್ಲವೇ. ಬಹಳ ಸಂತೋಷ, ಅವರಿಗೆ ಮತ ಹಾಕಿರುವವರು ಸಂತೋಷವಾಗಿರಲಿ” ಎಂದರು.
“ನೀವು ದಳಕ್ಕೆ ಮತ ಹಾಕಿದರೂ, ಬಿಜೆಪಿಗೆ ಮತ ಹಾಕಿದರೂ ಎಲ್ಲರಿಗೂ ಅನುಕೂಲವಾಗುವಂತೆ ನಾವು ಕಾರ್ಯಕ್ರಮ ಮಾಡುತ್ತಿದ್ದೇವೆ. ಇದು ನಿಮ್ಮ ಆತ್ಮಸಾಕ್ಷಿಗೆ ಅರ್ಥವಾದರೆ ಸಾಕು” ಎಂದರು.
“ಸಂಸತ್ ಚುನಾವಣೆ ಬಳಿಕ ವಿಧಾನಸಭೆ ಚುನಾವಣೆಗೆ ಸಿದ್ಧವಾಗಲು ಅನೇಕ ಗಂಡುಗಳು ಸಿದ್ಧರಾಗಿದ್ದರು. ನಂತರ ಚನ್ನಪಟ್ಟಣ ಚುನಾವಣೆ ಬಂತು. ನಾನು ಸಂಸತ್ ಚುನಾವಣೆ ಮುಗಿದ ಬಳಿಕ ಇಡೀ ಸರ್ಕಾರವನ್ನು ಆ ಕ್ಷೇತ್ರ ಜನರ ಮನೆ ಬಾಗಿಲಿಗೆ ತೆಗೆದುಕೊಂಡು ಹೋದೆ. ಅವರ ಮನೆಗೆ ಅರ್ಜಿ ತಲುಪಿಸಿ ಅವರ ಅಹವಾಲು ಕೇಳಿದೆ. ಸುಮಾರು 26 ಸಾವಿರ ಜನ ನಮಗೆ ಅರ್ಜಿ ಹಾಕಿದರು” ಎಂದರು.