ಸ್ಯಾಂಡಲ್ ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ದಂಪತಿಯ ಆಸ್ತಿ ಮತ್ತು ಅವರು ಮಾಡಿಕೊಂಡಿರುವ ಸಾಲದ ಬಗ್ಗೆ ಕೇಳಿದ್ರೆ ನೀವು ದಂಗಾಗೋದು ಗ್ಯಾರಂಟಿ. ಹೌದು! ಶಿವಮೊಗ್ಗ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿರುವ ಗೀತಾ ಶಿವರಾಜ್ ಕುಮಾರ್ ಬರೋಬ್ಬರಿ 40.04 ಕೋಟಿ ರೂಪಾಯಿ ಆಸ್ತಿ ಘೋಷಿಸಿಕೊಂಡಿದ್ದಾರೆ. ಪತಿ ಶಿವರಾಜ್ ಕುಮಾರ್ ಬಳಿ 49 ಕೋಟಿ ರೂಪಾಯಿ ಆಸ್ತಿ ಇರುವುದಾಗಿ ಅವರು ಅಫಿಡವಿಟ್ನಲ್ಲಿ ತಿಳಿಸಿದ್ದು, ಒಟ್ಟಾರೆ ಪತಿ-ಪತ್ನಿ ಬಳಿ 89.04 ಕೋಟಿ ರೂಪಾಯಿ ಆಸ್ತಿ ಇರುವುದಾಗಿ ಹೇಳಿದ್ದಾರೆ. 54 ಕೋಟಿ ಮೌಲ್ಯದ ಐಷಾರಾಮಿ ಮನೆ, 11 ಕೋಟಿ ಮೊತ್ತದ ಚಿನ್ನ, 1 ಕೋಟಿ ಬೆಲೆ ಬಾಳುವ ಕಾರುಗಳನ್ನು ದಂಪತಿ ಹೊಂದಿದ್ದಾರೆ. 2022-23ರಲ್ಲಿ ತಮ್ಮ ವಾರ್ಷಿಕ ಆದಾಯ 1.48 ಕೋಟಿ ಎಂದು ಗೀತಾ ಶಿವರಾಜ್ ಕುಮಾರ್ ಹೇಳಿದ್ದು, ಪತಿ ಆದಾಯ 2.97 ಕೋಟಿ ಎಂದು ತಿಳಿಸಿದ್ದಾರೆ. ತಮ್ಮ ಮೇಲೆ ಯಾವುದೇ ಪ್ರಕರಣಗಳಿಲ್ಲ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಪತಿ-ಪತ್ನಿ ಬರೋಬ್ಬರಿ 24.6 ಕೋಟಿ ರೂ. ಸಾಲ ಮಾಡಿಕೊಂಡಿದ್ದು, ಇದರಲ್ಲಿ ಶಿವರಾಜ್ ಕುಮಾರ್ 17.5 ಕೋಟಿ ಸಾಲ ಹೊಂದಿದ್ದರೆ, ಗೀತಾ ಶಿವರಾಜ್ ಕುಮಾರ್ 7.1 ಕೋಟಿ ಸಾಲ ಹೊಂದಿದ್ದಾರೆ. ಇದಲ್ಲದೇ ನಟ ಶಿವರಾಜ್ ಕುಮಾರ್ 95.5 ಲಕ್ಷ ತೆರಿಗೆ ಬಾಕಿ ಉಳಿಸಿಕೊಂಡಿದ್ದು, 63.49 ಲಕ್ಷ ಆದಾಯ ತೆರಿಗೆಗೆ ಸಂಬಂಧಿಸಿದಂತೆ ವಿವಾದ ಇರುವುದಾಗಿಯೂ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ತಮ್ಮ ಆದಾಯದ ಅಫಿಡವಿಟ್ನಲ್ಲಿ ಘೋಷಿಸಿಕೊಂಡಿದ್ದಾರೆ.