“ಕಂದಾಯ ಇಲಾಖೆಯಿಂದ 30-40 ಸಿಬ್ಬಂದಿ ಒದಗಿಸಿದರೆ ನಾನೇ ಮುಂದೆ ನಿಂತು ಮುಂದಿನ ನಾಲ್ಕು ತಿಂಗಳಲ್ಲಿ ತಾಲೂಕಿನಲ್ಲಿ ಮರು ಭೂಮಾಪನ ಯೋಜನೆ ಪೂರ್ಣಗೊಳಿಸುತ್ತೇನೆ” ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಕಂದಾಯ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿದರು.
ಕನಕಪುರದ ದೊಡ್ಡಆಲಹಳ್ಳಿಯಲ್ಲಿ ಭಾನುವಾರ ನಡೆದ ಮರು ಭೂಮಾಪನ ಯೋಜನೆಯಡಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಸೃಜಿಸಲಾದ ಕರಡು ಆರ್ ಟಿಸಿ ದಾಖಲೆಗಳ ವಿತರಣೆ ಕಾರ್ಯಕ್ರಮದಲ್ಲಿ ಸುರೇಶ್ ಅವರು ಭಾಗವಹಿಸಿ ಮಾತನಾಡಿದರು.
![May be an image of 3 people, dais and text](https://scontent.fblr25-1.fna.fbcdn.net/v/t39.30808-6/473134362_1144222573729561_9123871462505268409_n.jpg?_nc_cat=103&ccb=1-7&_nc_sid=833d8c&_nc_ohc=hgpuXcBLoXEQ7kNvgG5rbZF&_nc_zt=23&_nc_ht=scontent.fblr25-1.fna&_nc_gid=A4Jk8IANEW27Ez1Ba-faCUr&oh=00_AYAHz_Dnhx1SAhQdH_olCjdCYKR1bh_XQVXhIh6NrtMZKA&oe=6789A5D4)
“ಕಂದಾಯ ಇಲಾಖೆಯಲ್ಲಿ ಇದೊಂದು ಐತಿಹಾಸಿಕ ದಿನ. 100 ವರ್ಷಕ್ಕೂ ಹೆಚ್ಚು ಕಾಲ ಅಳವಡಿಸಿಕೊಂಡಿದ್ದ ಭೂಮಾಪನ ಪದ್ಧತಿ ಹೊರತಾಗಿ ಈಗ ಹೊಸ ಮಾದರಿಯ ಮಾಪನ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ. ಆಮೂಲಕ ದೊಡ್ಡಆಲಹಳ್ಳಿಯಲ್ಲಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ರಾಜ್ಯಕ್ಕೆ ಹಾಗೂ ದೇಶಕ್ಕೆ ಮಾದರಿಯಾಗುವ ಕಾರ್ಯಕ್ರಮ ಮಾಡಲಾಗಿದೆ” ಎಂದರು.
“ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು, ಸರ್ವೇ ಇಲಾಖೆ, ಜಿಲ್ಲಾಡಳಿತಕ್ಕೆ ಧನ್ಯವಾದ ತಿಳಿಸುತ್ತೇನೆ. ಸರ್ವೇ ಕಚೇರಿ ಎಂದರೆ ರೈತರ ಪಾಲಿನ ಸಿಂಹಸ್ವಪ್ನ. ಇದಕ್ಕೆ ಪರಿಹಾರ ನೀಡಲು ಕರ್ನಾಟಕ ಸರ್ಕಾರ ಈ ಪ್ರಾಯೋಗಿಕ ಪ್ರಯತ್ನ ಮಾಡಿದೆ” ಎಂದು ಹೇಳಿದರು.
“ಮೊದಲು ಯಾವ ಜಿಲ್ಲೆಯಲ್ಲಿ ಮಾಡಬೇಕು ಎಂದು ಚಿಂತನೆ ನಡೆಸುವಾಗ ನಾನು ನಮ್ಮ ರಾಮನಗರ ಜಿಲ್ಲೆಯ ನಮ್ಮ ಕ್ಷೇತ್ರದಲ್ಲೇ ಮಾಡಿ ಎಂದು ಕಂದಾಯ ಸಚಿವರಿಗೆ ಮನವಿ ಮಾಡಿದೆ.
![May be an image of 13 people, dais and text](https://scontent.fblr25-1.fna.fbcdn.net/v/t39.30808-6/473141383_1144222490396236_4789883384464967526_n.jpg?_nc_cat=111&ccb=1-7&_nc_sid=833d8c&_nc_ohc=RgaCLPh-ImAQ7kNvgFUX6H4&_nc_zt=23&_nc_ht=scontent.fblr25-1.fna&_nc_gid=AZwgdN1mKAD-3nOvfPY8uBB&oh=00_AYDuBxR84Z3GZBSLnPjEexvPhbNv9XrG4PRlkhX33OArrA&oe=6789B82F)
ಉಯ್ಯಂಬಳ್ಳಿ ಹೋಬಳಿಯಲ್ಲಿ 35 ಕಂದಾಯ ಗ್ರಾಮಗಳಿದ್ದು, 33 ಗ್ರಾಮಗಳಲ್ಲಿ 23,469 ರೈತರ ಭೂಮಿಯ ಸರ್ವೇ ಮಾಡಲಾಗಿದೆ. ಕೆಲವರು ಸರಪಳಿ ಹಾಕಿ ಅಳತೆ ಮಾಡಿದರೆ ಮಾತ್ರ ಸರ್ವೇ ಎಂದು ಭಾವಿಸಿದ್ದಾರೆ. ಹೀಗಾಗಿ ಅನೇಕರು ನಮ್ಮ ಜಮೀನು ಸರ್ವೇ ಆಗಿದೆ ಎಂದರೆ ನಂಬುತ್ತಿಲ್ಲ” ಎಂದು ತಿಳಿಸಿದರು.
“ರೋವರ್ ತಂತ್ರಜ್ಞಾನದ ಮೂಲಕ ಬಹಳ ಸರಳೀಕರಣವಾಗಿ, ಬಹಳ ನಿಖರವಾಗಿ ಭೂ ಮಾಪನ ಮಾಡಲಾಗಿದೆ. ಈ ತಂತ್ರಜ್ಞಾನ ಮೂಲಕ ಅಳತೆಯಲ್ಲಿ ವ್ಯತ್ಯಾಸ ಕಂಡುಬರುವುದು ಕೇವಲ 1 ಸೆ.ಮೀ ಮಾತ್ರ. ಈ ರೀತಿ 97 ಸಾವಿರ ಎಕರೆ ಜಮೀನು ಸರ್ವೇ ಮಾಡಲಾಗಿದೆ” ಎಂದರು.
“ಪಹಣಿಯಲ್ಲಿ ನಕ್ಷೆ, ನಕಾಶೆ, ಕ್ಯೂಆರ್ ಕೋಡ್ ಇರುತ್ತದೆ. ಇದನ್ನು ಸ್ಕ್ಯಾನ್ ಮಾಡಿದರೆ ಭೂಮಿಯ ಅಳತೆ ದಾಖಲೆ ಮಾಹಿತಿ ಲಭ್ಯವಾಗುತ್ತದೆ. ರೈತರಿಗೆ ಜಮೀನಿನಲ್ಲಿ ವ್ಯತ್ಯಾಸ ಕಂಡು ಬಂದರೆ ಅದನ್ನು ಸರಿಪಡಿಸಿಕೊಳ್ಳಲು ಅವಕಾಶವಿದೆ. ಒಂದೇ ಪಹಣಿಯಲ್ಲಿ ಹಲವಾರು ಹೆಸರುಗಳಿದ್ದು, ಅದನ್ನು ಸರಿಪಡಿಸಲು ಅವಕಾಶವಿದೆ. ಆಕ್ಷೇಪಗಳಿದ್ದರೆ ಅದನ್ನು ಉಚಿತವಾಗಿ ಸರಿಪಡಿಸಲು 1 ತಿಂಗಳು ಕಾಲಾವಕಾಶವಿದೆ. ಒಂದು ತಿಂಗಳ ನಂತರ ಇದಕ್ಕೆ ಶುಲ್ಕ ಪಾವತಿಸಬೇಕು” ಎಂದು ತಿಳಿಸಿದರು.
“ಈ ಹೋಬಳಿಯಲ್ಲಿ 5 ಸಾವಿರ ಸರ್ವೇ ನಂಬರ್ ಗಳು ಇದ್ದವು. ಈ ಕಾರ್ಯಕ್ರಮದ ನಂತರ ಸರ್ವೇ ನಂಬರ್ ಗಳ ಸಂಖ್ಯೆ 23 ಸಾವಿರಕ್ಕೆ ಏರಿಕೆಯಾಗಿವೆ.
![May be an image of 4 people and dais](https://scontent.fblr25-1.fna.fbcdn.net/v/t39.30808-6/473565484_1144222263729592_6178637915741054028_n.jpg?_nc_cat=105&ccb=1-7&_nc_sid=833d8c&_nc_ohc=N8cBqcVabJ4Q7kNvgHmCQ1c&_nc_zt=23&_nc_ht=scontent.fblr25-1.fna&_nc_gid=AMkMtFeX9bHpGBdabjn7v2s&oh=00_AYDrdFGKQfsS5CwGXkQ1SAB6YAVXTI14Jh46n8Z0RkZ8tQ&oe=6789A128)
“ಈ ಸೌಲಭ್ಯವನ್ನು ಇಡೀ ತಾಲೂಕು ಹಾಗೂ ಜಿಲ್ಲೆಗೆ ವಿಸ್ತರಿಸಬೇಕು ಎಂದು ಉಪಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ. ಕಂದಾಯ ಇಲಾಖೆ ಸಚಿವರಾದ ಕೃಷ್ಣ ಭೈರೇಗೌಡ ಅವರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಬಂದಿಲ್ಲ. ಇಂದು ಬೆಳಗ್ಗೆ ಅವರಿಗೆ ಕರೆ ಮಾಡಿ ಮಾತನಾಡುವಾಗ ನಮ್ಮ ಬೇಡಿಕೆ ಇನ್ನು ಇವೆ ಎಂದು ಕೇಳಿದೆ. ಅವರು ನಿಮ್ಮ ಬೇಡಿಕೆ ಏನೇ ಇದ್ದರೂ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು” ಎಂದರು.
“ಇನ್ನು ಈ ಆರ್ ಟಿಸಿ ಒಳಗೆ ಜಮೀನು ಮಾಲೀಕರ ಹೆಸರಿನ ಜತೆಗೆ ಅವರ ಫೋಟೋ ಹಾಗೂ ಆಧಾರ್ ಕಾರ್ಡ್ ಸಂಖ್ಯೆಯನ್ನು ಸೇರಿಸುವ ಕೆಲಸ ಮಾಡಬೇಕು. ಆಗ ಒಂದೇ ಹೆಸರಿನ ಹಲವು ವ್ಯಕ್ತಿಗಳಿದ್ದರೂ ಗೊಂದಲ ಆಗುವುದಿಲ್ಲ” ಎಂದು ಸಲಹೆ ನೀಡಿದರು.
ಬಸ್ ನಿಲ್ದಾಣಕ್ಕೆ ಮನವಿ:
“ಸರ್ಕಾರಿ ಕಿರಿಯ ಪ್ರಾಥಮಿಕ . ಪಾಠಶಾಲೆ ನಾನು ಆಟವಾಡಿ ಬೆಳೆದ ಆಟದ ಮೈದಾನ. ಇಲ್ಲಿ ಸರ್ಕಾರಿ ಬಸ್ ಗಳು ಬಂದರೆ ಮತ್ತೆ ವಾಪಸ್ ಹೋಗಲು ರಸ್ತೆಯಲ್ಲಿ ಬಸ್ ಹಿಂದಿರುಗಿಸಲು ಕಷ್ಟವಾಗುತ್ತಿದೆ. ಹೀಗಾಗಿ ಈ ಮೈದಾನದಲ್ಲೇ ಸರ್ಕಾರಿ ಬಸ್ ನಿಲ್ದಾಣ ಮಾಡಿಕೊಡಬೇಕು” ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಮನವಿ ಮಾಡಿದರು. ಈ ಮನವಿಗೆ ರಾಮಲಿಂಗಾ ರೆಡ್ಡಿ ಅವರು ಸಮ್ಮತಿ ಸೂಚಿಸಿದರು.
![May be an image of 10 people, temple, dais and text](https://scontent.fblr25-1.fna.fbcdn.net/v/t39.30808-6/473421204_1144222393729579_3421613319261865748_n.jpg?_nc_cat=105&ccb=1-7&_nc_sid=833d8c&_nc_ohc=Us19tCqgbSMQ7kNvgGm-pf7&_nc_zt=23&_nc_ht=scontent.fblr25-1.fna&_nc_gid=ASq8nloaKEfMwUUPVmQdQhq&oh=00_AYAXgAhAXL9TiRfgTsmbKn6vqhKwZ0CfKhD98YHppSgDzQ&oe=67899544)
ರೈತರ ಸಮಸ್ಯೆಗೆ ಪರಿಹಾರ ಕೊಡಿ:
“ರಾಜ್ಯ ಸರ್ಕಾರ ಈಗ ಕೇವಲ ಬಗರ್ ಹುಕುಂ ಸಾಗುವಳಿ ಜಮೀನಿಗೆ ಮಾತ್ರ ಮಾರ್ಗಸೂಚಿ ಹೊರಡಿಸಿದ್ದು, ಅದಕ್ಕೂ ಮುಂಚಿತವಾಗಿ ಆಗಿರುವ ಜಮೀನುಗಳಿಗೆ ಪರಿಹಾರ ಕಂಡುಹಿಡಿಯಬೇಕು. ಈ ವಿಚಾರವಾಗಿ ಉಪಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರು ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪ ಮಾಡಬೇಕು” ಎಂದು ಮನವಿ ಮಾಡಿದರು.
“ಐಎಲ್, ಆರ್ ಆರ್, ಹರಾಜು ಮೂಲಕ ಬಂದಿರುವ ಜಮೀನು, ಹಂಗಾಮಿ ಸಾಗುವಳಿ ಜಮೀನು ಪಡೆದವರು ಈಗಾಗಲೇ ಮೂರ್ನಾಲ್ಕು ಕೈ ಬದಲಾಗಿದೆ. 1964ರಿಂದ ಆರ್ ಟಿಸಿ ಮಾಡಿಕೊಂಡು ಬಂದವರನ್ನು ಪರಿಗಣಿಸಬೇಕು. ತಾಲೂಕು ಕಚೇರಿಗಳಲ್ಲೇ ಭೂಮಿಯ ದಾಖಲೆಗಳು ಇಲ್ಲವಾಗಿವೆ. ಇಡೀ ರಾಜ್ಯದಲ್ಲಿ ಇಂತಹ ಸಮಸ್ಯೆಗಳಿವೆ. ಹೀಗಾಗಿ ರೈತರ ಬಳಿ ಇರುವ ಮೂಲ ದಾಖಲೆ ಹಾಗೂ ಸ್ಥಳ ಪರಿಶೀಲನೆ ಮಾಡಿ ಅವರಿಗೆ ಜಮೀನಿನ ದಾಖಲೆ ನೀಡಬೇಕು. ಈ ಪ್ರಕ್ರಿಯೆಯನ್ನು ಸರಳೀಕರಣ ಮಾಡಬೇಕು” ಎಂದು ಮನವಿ ಮಾಡಿದರು.