ಕ್ರಿಕೆಟ್ ಲೋಕದಲ್ಲಿ ಟೀಂ ಇಂಡಿಯಾ ಅಂದ್ರೆ ಪುರುಷರ ತಂಡ ಕಣ್ಮುಂದೆ ಬರುತ್ತೆ. ಆದರೆ ಟೀಂ ಇಂಡಿಯಾ ಅಂದ್ರೆ ಹೆಣ್ಮಕ್ಳೂ ಇದ್ದಾರೆ. ಅವರೀಗ ಗಂಡು ಮಕ್ಕಳ ದಾಖಲೆಯನ್ನ ನುಚ್ಚು ನೂರು ಮಾಡಿ ದಾಖಲೆ ಬರೆದಿದ್ದಾರೆ.
ಭಾರತದ ಮಹಿಳಾ ತಂಡವು ಬುಧವಾರ ಐರ್ಲೆಂಡ್ ವಿರುದ್ಧ ನಡೆದ ಮಹಿಳೆಯರ ಏಕದಿನ ಕ್ರಿಕೆಟ್ ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯವನ್ನೂ ಗೆದ್ದು ಕ್ಲೀನ್ ಸ್ವೀಪ್ ಮಾಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಮಹಿಳಾ ತಂಡವು 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 435 ರನ್ ಗಳಿಸಿತು. ಈ ಮೂಲಕ ಏಕದಿನ ಕ್ರಿಕೆಟ್ನಲ್ಲಿ 400 ರನ್ಗಳನ್ನು ದಾಟಿದ ಮೊದಲ ಏಷ್ಯನ್ ತಂಡ ಎಂಬ ದಾಖಲೆ ಬರೆದಿದೆ. ಪುರುಷರ ದಾಖಲೆಗಳನ್ನ ಮಹಿಳಾ ತಂಡ ಪುಡಿ ಪುಡಿ ಮಾಡಿ ಹೊಸ ದಾಖಲೆ ನಿರ್ಮಿಸಿದೆ.
ಈ ಪಂದ್ಯದಲ್ಲಿ ಇಬ್ಬರು ಸ್ಟಾರ್ ಆಟಗಾರರು ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಟೀಂ ಇಂಡಿಯಾ ನಾಯಕಿಯಾಗಿದ್ದ ಸ್ಮೃತಿ ಮಂದಾನ ಹಾಗೂ ಪ್ರತಿಕಾ ರಾವಲ್ ಶತಕ ಸಿಡಿಸಿ ಅಬ್ಬರಿಸಿದ್ದಾರೆ. 154 ರನ್ ಗಳಿಸಿದ ಪ್ರತಿಕಾ ರವಲ್, ಈ ಒಂದು ಬೃಹತ್ ಮೊತ್ತ ಕಲೆಹಾಕುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಇನ್ನು ಟೀಂ ಇಂಡಿಯಾದ ನಾಯಕಿ ಸ್ಮೃತಿ ಮಂದಾನ ಕೂಡ ಕೇವಲ 70 ಬಾಲ್ ಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿ ಬೊಬ್ಬಿರಿದ್ದಾರೆ. ಇಬ್ಬರ ಈ ಆಟ ಟೀಂ ಇಂಡಿಯಾ ವನ್ನ ದಾಖಲೆಯ ಗೆಲುವಿಗೆ ಕರೆದೊಯ್ದಿದ್ದಾರೆ. ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಭಾರತ 304 ರನ್ಗಳ ಭರ್ಜರಿ ಜಯ ದಾಖಲಿಸಿದೆ.
ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 435 ರನ್ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಈ ರನ್ಗಳು ಏಕದಿನ ಕ್ರಿಕೆಟ್ನಲ್ಲಿ ಭಾರತ ಅತ್ಯಧಿಕ ರನ್ ಎಂಬ ದಾಖಲೆಯನ್ನ ನಿರ್ಮಿಸಿದೆ. ಟೀಂ ಇಂಡಿಯಾದ ವಿಕೆಟ್ ಕೀಪರ್ ರಿಚಾ ಘೋಷ್ ಅವರು ಕೂಡ 59 ರನ್ ಸಿಡಿಸಿ ಗಮನ ಸೆಳೆದರು. ಐರ್ಲೆಂಡ್ನ ವೇಗದ ಬೌಲರ್ ಓರ್ಲಾ ಎರಡು ವಿಕೆಟ್ ತೆಗೆದುಕೊಂಡರು. ಬೃಹತ್ ಮೊತ್ತದ ಬೆನ್ನಿತ್ತಿದ ಐರ್ಲೆಂಡ್ ಕೇವಲ 31.4 ಓವರ್ಗಳಲ್ಲಿ ಆಲ್ ಔಟ್ ಆಗಿ ಕೇವಲ 131 ರನ್ಗಳಿಸಿ ಸೋಲೊಪ್ಪಿಕೊಂಡಿತು. ಸರಾಹ 41, ಓರ್ಲಾ 36 ರನ್ಗಳಿಸಿದರು. ಉಳಿದ ಬ್ಯಾಟರ್ಗಳು ಟೀಂ ಇಂಡಿಯಾದ ವೀರ ವನಿತೆಯರ ಅಬ್ಬರದ ಬೌಲಿಂಗ್ ಗೆ ಶೇಕ್ ಆದರು. ಈ 3 ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 3 ಪಂದ್ಯಗಳನ್ನು ಗೆದ್ದು ಸರಣಿಯನ್ನ ಕ್ಲೀನ್ ಸ್ವೀಪ್ ಮಾಡಿತು.