ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣವನ್ನು ದಕ್ಷಿಣ ಭಾರತದ ಪ್ರಮುಖ ಏವಿಯೇಷನ್ ಹಬ್ (ವಾಯುಯಾನ ಕೇಂದ್ರ) ಆಗಿ ಅಭಿವೃದ್ಧಿಪಡಿಸುವುದಾಗಿ ಏರ್ ಇಂಡಿಯಾ ಘೋಷಿಸಿದೆ. ಈ ಸಂಬಂಧ ಏರ್ ಇಂಡಿಯಾ ಜೊತೆ ಬೆಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ ಒಪ್ಪಂದಕ್ಕೆ ಸಹಿ ಹಾಕಿದೆ. ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇಂಡಿಗೋ ಮತ್ತು ಏರ್ ಇಂಡಿಯಾದಂತಹ ಪ್ರಮುಖ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ದೇಶದ ಅತಿದೊಡ್ಡ ಅಂತಾರಾಷ್ಟ್ರೀಯ ಕೇಂದ್ರವಾಗಿದೆ. ಆ ಸಾಲಿಗೆ ಬೆಂಗಳೂರು ಏರ್ಪೋರ್ಟ್ ಸೇರಿಸುವ ಪ್ರಯತ್ನ ನಡೆಯುತ್ತಿದೆ.
ಏನಿದು ಏವಿಯೇಷನ್ ಹಬ್?
ಪ್ರಯಾಣಿಕರ ದಟ್ಟಣೆ ಮತ್ತು ವಿಮಾನ ಕಾರ್ಯಾಚರಣೆಗಳನ್ನು ಕೇಂದ್ರೀಕರಿಸಲು ಒಂದು ಅಥವಾ ಹೆಚ್ಚಿನ ವಿಮಾನಯಾನ ಸಂಸ್ಥೆಗಳು ಬಳಸುವ ವಿಮಾನ ನಿಲ್ದಾಣವೇ ಏವಿಯೇಷನ್ ಹಬ್. ಇದನ್ನ ಏರ್ಲೈನ್ ಹಬ್ ಅಥವಾ ಹಬ್ ವಿಮಾನ ನಿಲ್ದಾಣ ಅಂತಲೂ ಕರೆಯಲಾಗುತ್ತದೆ.
ಪ್ರಯಾಣಿಕರು ಬೇರೆ ಬೇರೆ ಕಡೆ ಹೋಗಲು ಬಯಸುವ ವಿವಿಧ ನಗರಗಳಿಗೆ ನೇರ ಸಂಪರ್ಕ ಕಲ್ಪಿಸುವ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ. ಇದು ಹಬ್ ಮತ್ತು ಸ್ಪೋಕ್ ವ್ಯವಸ್ಥೆಯ ಭಾಗವಾಗಿದೆ. ಪ್ರಮುಖ ಅಂತಾರಾಷ್ಟ್ರೀಯ ನಗರಗಳ ನಡುವೆ ನೇರ ಸಂಪರ್ಕವನ್ನು ಒದಗಿಸುವುದು. ಒಂದು ಅಥವಾ ಎರಡು ಪ್ರಮುಖ ವಿಮಾನಯಾನ ಸಂಸ್ಥೆಗಳೊಂದಿಗೆ ಈ ಹಬ್ಗಳನ್ನು ಗುರುತಿಸಲಾಗಿದೆ.
ವಿಮಾನಯಾನ ಸಂಶೋಧನಾ ಸಂಸ್ಥೆಯಾದ ಒಎಜಿ, ಲಂಡನ್ ಹೀಥ್ರೂವನ್ನು (2023 ಕ್ಕೆ) ವಿಶ್ವದ ಅತ್ಯಂತ ಹೆಚ್ಚು ಸಂಪರ್ಕಿತ ವಿಮಾನ ನಿಲ್ದಾಣವೆಂದು ಗುರುತಿಸಿದೆ. ಇದರ ಜೊತೆಗೆ ನ್ಯೂಯಾರ್ಕ್ನ ಜೆಎಫ್ಕೆ ವಿಮಾನ ನಿಲ್ದಾಣ, ನೆದರ್ಲ್ಯಾಂಡ್ನ ಆಮ್ಸ್ಟರ್ಡ್ಯಾಮ್ ವಿಮಾನ ನಿಲ್ದಾಣ, ಮಲೇಷ್ಯಾದ ಕೌಲಾಲಂಪುರ್ ವಿಮಾನ ನಿಲ್ದಾಣ ಮತ್ತು ಟೋಕಿಯೊದ ಹನೇಡಾ ವಿಮಾನ ನಿಲ್ದಾಣವನ್ನೂ ಗುರುತಿಸಲಾಗಿದೆ.