ತೆಲಂಗಾಣದ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ಕೇಸರಿ ವಸ್ತ್ರ ಧರಿಸಿ ತರಗತಿಗೆ ಹಾಜರಾಗಿರುವುದ್ದಕ್ಕೆ ಶಾಲೆಯ ಪ್ರಾಂಶುಪಾಲ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಹಿಂದೂ ಕಾರ್ಯಕರ್ತರು ಶಾಲೆಯ ಮೇಲೆ ದಾಳಿ ಮಾಡಿದ್ದಾರೆ.
ಕನ್ನೆಪಳ್ಳಿ ಎಂಬ ಗ್ರಾಮದಲ್ಲಿರುವ ಬ್ಲೆಸ್ಡ್ ಮದರ್ ತೆರೆಸಾ ಹೈ ಸ್ಕೂಲ್ನಲ್ಲಿ ಕೆಲ ದಿನಗಳಿಂದ ವಿದ್ಯಾರ್ಥಿಗಳು ಕೇಸರಿ ಬಟ್ಟೆ ಧರಿಸಿ ತರಗತಿಗಳಿಗೆ ಆಗಮಿಸುತ್ತಿದ್ದರು. ಈ ವೇಳೆ ಶಾಲೆಯ ಪ್ರಾಂಶುಪಾಲ ಕೇರಳ ಮೂಲದ ಜೈಮೋನ್ ಜೋಸೆಫ್ ಅವರು ವಿದ್ಯಾರ್ಥಿಗಳ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹನುಮಾನ್ ದೀಕ್ಷೆ ಇರುವ ಕಾರಣ 21 ದಿನ ಕೇಸರಿ ಬಟ್ಟೆ ಧರಿಸುವುದು ಸಂಪ್ರದಾಯ ಎಂದರೂ ಕೇಳದೆ ಪ್ರಾಂಶುಪಾಲ ವಿದ್ಯಾರ್ಥಿಗಳಿಗೆ ಗದರಿದ್ದಾರೆ.
ಶಾಲೆಯಲ್ಲಿ ವಿದ್ಯಾರ್ಥಿಗಳು ಕೇಸರಿ ಬಟ್ಟೆ ಹಾಕಿಕೊಂಡು ಬಂದಿದ್ದಕ್ಕೆ ಪ್ರಾಂಶುಪಾಲ ಆಕ್ಷೇಪ ವ್ಯಕ್ತಪಡಿಸಿದ್ದ ಸುದಿ ತಿಳಿಯುತ್ತಿದ್ದಂತೆ, ಹಿಂದು ಕಾರ್ಯಕರ್ತರು ಶಾಲೆಯ ಮೇಲೆ ದಾಳಿ ನಡೆಸಿದ್ದಾರೆ. ಶಾಲೆಯ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದು, ಕಿಟಕಿಯ ಗಾಜುಗಳನ್ನು ಒಡೆದು ಹಾಕಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಸ್ಥಳಕ್ಕೆ ಆಗಮಿಸಿದ ಪೊಲೀಸ್ ಸಿಬ್ಬಂದಿ ಜತೆಗೂ ಹಿಂದು ಪರ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.