ಉತ್ತರ ಪ್ರದೇಶದ ಪ್ರಯಾಗರಾಜದಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ 10 ದಿನದಲ್ಲಿ 10 ಕೋಟಿಗೂ ಅಧಿಕ ಜನರು ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಂಗೆ, ಯಮುನೆ ಮತ್ತು ಸರಸ್ವತಿ ನದಿಗಳ ಸಂಗಮಸ್ತಾನ ದಲ್ಲಿ ಜ.13ರಿಂದ ಆರಂಭವಾ ಗಿರುವ ಕುಂಭಮೇಳದಲ್ಲಿ ದಿನಂಪ್ರತಿ ಸರಾಸರಿಯಾಗಿ ಕೋಟಿ ಜನರು ಪುಣ್ಯಸ್ನಾನದಲ್ಲಿ ಭಾಗಿಯಾಗಿದ್ದಾರೆ.
ಮಕರ ಸಂಕ್ರಾಂತಿ ಹಬ್ಬದಂದು ಅತಿ ಹೆಚ್ಚು 3.5 ಕೋಟಿ ಜನರು, ಪೌಷ್ಯ ಪೂರ್ಣಿಮೆಯಂದು 1.7 ಕೋಟಿ ಜನರು ಗಂಗೆಯಲ್ಲಿ ಸ್ನಾನ ಮಾಡಿದ್ದಾರೆ. ಗುರುವಾರ ಒಂದೇ ದಿನ ಮಧ್ಯಾಹ್ನ 12 ಗಂಟೆವರೆಗೆ 30 ಲಕ್ಷ ಜನರು ಮೇಳದಲ್ಲಿ ಸ್ನಾನ ಮಾಡಿದ್ದಾರೆ ಎಂದು ಅಧಿ ಕಾರಿಗಳು ತಿಳಿಸಿದ್ದಾರೆ. ಫೆ.26 ರಂದು ಕುಂಭ ಮೇಳ ಮುಕ್ತಾಯಗೊಳ್ಳಲಿದೆ.
ದೇಗುಲ ಆಡಳಿತಕ್ಕೆ ಸನಾತನ ಮಂಡಳಿ ಪ್ರಯಾಗರಾಜ್:
ದೇಗುಲಗಳನ್ನು ಸರ್ಕಾರಿ ಹಿಡಿತದಿಂದ ತಪ್ಪಿಸಲು, ಗೋವುಗಳನ್ನು ರಕ್ಷಿಸಲು ಮತ್ತು ಗುರುಕುಲಗಳನ್ನು ಪುನಾರಂಭಿಸಲು ಸನಾತನ ಮಂಡಳಿ ತೆರೆಯಲು ಅಖಿಲ ಭಾರತ ಅಖಾಡ ಪರಿಷತ್ ಮುಂದಾಗಿದೆ. ಜ.27ರಂದು ಪ್ರಯಾಗದಲ್ಲಿ ನಡೆವ ‘ಧರ್ಮದ ಸ್ವತಂತ್ರ ದಿನ’ ಸಮ್ಮೇಳನದಲ್ಲಿ ಮಂಡಳಿಯ ಕರಡು ಮಂಡಿಸಲಾಗುತ್ತದೆ.
ನಿರಂತರವಾಗಿ ಏರಿಕೆಯಾಗುತ್ತಿದೆ ಯಾತ್ರಿಕರ ಸಂಖ್ಯೆ:
ಪ್ರಯಾಗ್ ರಾಜ್ ಭೇಟಿ ನೀಡುತ್ತಿರುವ ಯಾತ್ರಾರ್ಥಿಗಳ ಸಂಖ್ಯೆ ನಿರಂತರವಾಗಿ ಏರಿಕೆ ಕಾಣುತ್ತಿದ್ದು, ಪ್ರತಿನಿತ್ಯ ಲಕ್ಷಾಂತರ ಜನರು ಪವಿತ್ರ ಸ್ನಾನ ಮಾಡುತ್ತಿದ್ದಾರೆ. ಈ ಸಂಖ್ಯೆ ಕೋಟಿಗಳನ್ನು ದಾಟಿದೆ. ಇದೀಗ 10 ಕೋಟಿ ತಲುಪುವ ಮೂಲಕ ಮಹಾಕುಂಭ ಗಮನಾರ್ಹ ಮೈಲಿಗಲ್ಲು ಮುಟ್ಟಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಮಹಾ ಕುಂಭ ಮೇಳ ಆರಂಭಕ್ಕೆ ಮೊದಲೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರವೂ, ಈ ವರ್ಷದ ಈ ಬೃಹತ್ ಧಾರ್ಮಿಕ ಕಾರ್ಯಕ್ರಮದಲ್ಲಿ 45 ಕೋಟಿ ಜನರು ಭೇಟಿ ನೀಡಬಹುದು ಎಂದು ಅಂದಾಜಿಸಿದೆ.
ಪ್ರಯಾಗ್ ರಾಜ್ಗೆ ಭೇಟಿ ನೀಡುತ್ತಿರುವ ಭಕ್ತರು ಅತ್ಯುತ್ಸಾಹದಿಂದ ಬೇಟಿ ನೀಡುತ್ತಿದ್ದು, ದೇಶ ಮಾತ್ರವಲ್ಲದೇ ವಿದೇಶಗಳಿಂದ ಜನರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ನಡೆಸುತ್ತಿದ್ದಾರೆ. ಗುರುವಾರ ಒಂದೇ ದಿನ ಮಧ್ಯಾಹ್ನ 12ರ ಹೊತ್ತಿಗೆ 10 ಲಕ್ಷ ಕಲ್ಪವಸಿಗಳು ಸೇರಿದಂತೆ 30 ಲಕ್ಷ ಜನರು ಸ್ನಾನ ನಡೆಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸಚಿವ ಸೋಮಣ್ಣ ದಂಪತಿ ಪುಣ್ಯಸ್ನಾನ :
ಪ್ರಯಾಗರಾಜ್ನಲ್ಲಿ ನಡೆದಿರುವ ಕುಂಭಮೇಳದಲ್ಲಿ ಗುರುವಾರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಪತ್ನಿ ಶೈಲಜಾ ಸೋಮಣ್ಣ ಅವರೊಂದಿಗೆ ಗಂಗಾ, ಯಮುನಾ, ಸರಸ್ಪತಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc