ಉಡುಪಿ: ಉಡುಪಿಯಲ್ಲಿ 5 ವರ್ಷದ ಬಾಲಕಿಗೆ ಅಪರಿಚಿತ ವ್ಯಕ್ತಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಕುರಿತು ತ್ವರಿತ ಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ನೀಡಿದ್ದಾರೆ.
ಘಟನೆ ನಡೆದಿದ್ದು ಹೇಗೆ?
ಮಗುವಿನ ಪೋಷಕರ ತರಕಾರಿ ಅಂಗಡಿ ಸಮೀಪವೇ ಕೃತ್ಯ ಎಸಗಲಾಗಿದೆ. ಮತ್ತೋರ್ವ ಬಾಲಕಿ ಜೊತೆ ಓಡಾಡುತ್ತಿದ್ದ ಮಗುವಿಗೆ ಚಾಕಲೇಟ್ ಆಸೆ ತೋರಿಸಿದ ಆರೋಪಿ ಮಗುವನ್ನ ಅಂಗಡಿ ಪಕ್ಕದ ಕಾಲು ದಾರಿಯಲ್ಲಿ ಕರೆದುಕೊಂಡು ಹೋಗಿದ್ದಾನೆ.
ಕಾಲು ದಾರಿಯಲ್ಲಿದ್ದ ಬೇಲಿ ಪಕ್ಕದಲ್ಲೇ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದಾನೆ ಎನ್ನಲಾಗಿದೆ. ಮಗುವನ್ನ ಹುಡುಕಿಕೊಂಡು ಬಂದ ಇನ್ನೋರ್ವ ಬಾಲಕಿಯನ್ನು ಕಂಡು ಆರೋಪಿ ಓಡಿ ಹೋಗಿದ್ದಾನೆ.
ಆತ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಪೋಷಕರಲ್ಲಿ ಮಗು ಹೇಳಿದ್ದು, ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯ ಓಡಾಟ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಇನ್ನು ಅಪಘಾತದಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಘಟನೆಯ ಮಾಹಿತಿ ಬಂದ ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಘಟನೆಯ ವಿವರ ಪಡೆದರು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಯನ್ನು ತಕ್ಷಣ ಪತ್ತೆ ಹಚ್ಚಬೇಕು. ಜೊತೆಗೆ, ಬಾಲಕಿಗೆ ಅಗತ್ಯವಾದ ಎಲ್ಲ ನೆರವನ್ನು ನೀಡಬೇಕು ಎಂದು ಸಚಿವರು ಜಿಲ್ಲಾಧಿಕಾರಿ ಹಾಗೂ ಎಸ್ಪಿಗೆ ಸೂಚನೆ ನೀಡಿದರು.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ:https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ:https://chat.whatsapp.com/HWayJDSBf9aI06q6jplPgc