ಇತ್ತೀಚಿನ ದಿನಗಳಲ್ಲಿ ಬೆಳಗ್ಗೆ ಹೊತ್ತು ಜ್ಯೂಸ್ಗಳನ್ನು ಕುಡಿಯುವವರ ಸಂಖ್ಯೆ ಹೆಚ್ಚುತ್ತಿದೆ. ತಾಜಾ ಸೊಪ್ಪುಗಳ ಜ್ಯೂಸ್ಗಳನ್ನು ಕುಡಿಯುವುದು ಆರೋಗ್ಯಕ್ಕೆ ಒಳಿತಾಗುವುದು ಸುಳ್ಳೇನಲ್ಲ. ಹಸಿರು ಜ್ಯೂಸ್ಗಳ ಪೈಕಿ ಪಾಲಕ್ ಸೊಪ್ಪಿನದ್ದು ಒಂದು. ರುಚಿಗೆ ಬೇಕಾದಷ್ಟು ಶುಂಠಿ, ನಿಂಬೆ ರಸಗಳನ್ನೆಲ್ಲ ಬೆರೆಸಿಕೊಂಡರೆ ಹಸಿರು ಜ್ಯೂಸ್ಗಳು ಬಾಯಿಗೂ ರುಚಿ ಹಾಗೂ ದೇಹಕ್ಕೂ ಹಿತ. ಸೊಪ್ಪಿನಲ್ಲಿ ಹಲವು ರೀತಿಯ ಉತ್ಕರ್ಷಣ ನಿರೋಧಕಗಳು, ಕಬ್ಬಿಣಾಂಶ, ಕ್ಯಾಲ್ಶಿಯಂನಂತಹ ಅಗತ್ಯ ಖನಿಜಗಳು, ಎ, ಸಿ, ಇ ನಂಥ ಮಹತ್ವದ ಜೀವಸತ್ವಗಳು ಹಾಗೆಯೇ ಈ ಸೊಪ್ಪಿನಲ್ಲಿ ನಾರಿನಾಂಶಗಳು ಸಹ ಹೇರಳವಾಗಿದೆ.
ಪಾಲಕ್ ಜ್ಯೂಸ್ನ ಉಪಯೋಗಗಳು
ಪಾಲಕ್ ಸೊಪ್ಪಿನ ಸಮೃದ್ಧ ಕಬ್ಬಿಣಾಂಶವು ರಕ್ತಹೀನತೆಯ ನಿವಾರಣೆಗೆ ನೆರವಾಗುತ್ತದೆ. ಹಲವಾರು ಜೀವಸತ್ವಗಳು ಕೂದಲನ್ನು ಸೊಂಪಾಗಿ ಬೆಳೆಯಲು ಸಹಕಾರಿಯಾಗಿದೆ. ಇನ್ನು ನಿಮ್ಮ ಮುಖದ ತ್ವಚೆಯ ಮತ್ತು ಉಗುರಿನ ಆರೋಗ್ಯವನ್ನು ಹೆಚ್ಚಿಸುತ್ತವೆ. ಅಲ್ಲದೆ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಲು, ಜೀರ್ಣಕ್ರಿಯೆಯನ್ನು ಸರಾಗಗೊಳಿಸಲು ಸಾಧ್ಯವಾಗುತ್ತದೆ. ದೇಹದ ಒಟ್ಟಾರೆ ಸ್ವಾಸ್ಥ್ಯವನ್ನು ಹೆಚ್ಚಿಸಿ, ತೂಕ ಇಳಿಕೆಗೂ ನೆರವಾಗುತ್ತದೆ.
ಉತ್ಕರ್ಷಣ ನಿರೋಧಕಗಳು
ಪಾಲಕ್ ಸೊಪ್ಪಿನಲ್ಲಿನ ಉತ್ಕರ್ಷಣ ನಿರೋಧಕಗಳು ದೇಹದಲ್ಲಿನ ಉರಿಯೂತವನ್ನು ಶಮನ ಮಾಡುತ್ತದೆ. ಇದರಲ್ಲಿನ ಫಾಲಿಕ್ ಆಮ್ಲವು ಗರ್ಭಿಣಿಯರಿಗೆ ಪೂರಕವಾದಂಥ ಪೌಷ್ಟಿಕಾಂಶ. ಬಾಣಂತಿಯರಿಗೆ ಈ ಸೊಪ್ಪು ನೀಡುವುದರಿಂದ ಮಗುವಿಗೆ ದೊರೆಯುವ ಹಾಲಿನ ಪ್ರಮಾಣ ವೃದ್ಧಿಯಾಗುತ್ತದೆ. ತಾಯಿಯ ದೇಹದ ಅನಗತ್ಯ ಕೊಬ್ಬು ಕರಗಲು ಸಹಾಯವಾಗುತ್ತದೆ.
ತ್ವಚೆಯ ಆರೋಗ್ಯ ಹೆಚ್ಚುತ್ತೆ
ವಿಟಮಿನ್ ಎ ಸಮೃದ್ಧವಾಗಿರುವುದರಿಂದ ಈ ಸೊಪ್ಪಿನ ಸೇವನೆಯು ಚರ್ಮದ ಕಾಂತಿಯನ್ನು ವೃದ್ಧಿಸಿಕೊಳ್ಳಲು ಸಾಧ್ಯ. ತ್ವಚೆಯ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ. ಮೊಡವೆ ಮೂಡುವುದನ್ನು ಒಳಗಿನಿಂದ ತಡೆದು ಕಾಂತಿಯನ್ನು ನೀಡುತ್ತದೆ.
ದಟ್ಟ ಕೂದಲು ಬೆಳೆಯಲು ಸಹಕಾರಿ
ಈ ಸೊಪ್ಪಿನಲ್ಲಿ ವಿಟಮಿನ್ ಬಿ ಸಮೃದ್ಧವಾಗಿರುವುದರಿಂದ ಕೂದಲಿನ ಆರೋಗ್ಯ ರಕ್ಷಣೆಗೆ ನೆರವಾಗುತ್ತದೆ. ತಲೆಯ ಚರ್ಮದ ಆರೋಗ್ಯ ಕಾಪಾಡಿ, ಕೂದಲುಗಳ ಬುಡವನ್ನು ಸಶಕ್ತವಾಗಿಸಬಲ್ಲದು. ಕೂದಲು ತುಂಡಾಗುವುದನ್ನು ತಡೆದು ಕೇಶಗಳ ಬೆಳವಣಿಗೆಗೆ ಉಪಯುಕ್ತವಾಗಿದೆ.