ಬೆಂಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಕಿರುಕುಳ ತಡೆಗೆ ಹೊಸ ಕಾನೂನು ನಾಳೆಯ ಕ್ಯಾಬಿನೆಟ್ನಲ್ಲಿ ತರಲಿದ್ದು, ಸುಗ್ರೀವಾಜ್ಞೆ ಮೂಲಕ ಕಾನೂನು ಜಾರಿಗೆ ತರುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
ಸಿಎಂ ಸಭೆ ಮಾಡಿದ ಮೇಲೂ ಮೈಕ್ರೋ ಫೈನಾನ್ಸ್ ಕಂಪನಿಗಳು ಕಿರುಕುಳ ನೀಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಿರುಕುಳ ಆದರೆ ಪೊಲೀಸರಿಗೆ ದೂರು ಕೊಡಬೇಕು. ಆಗ ಪೊಲೀಸರು ತಕ್ಷಣ ಕ್ರಮ ತೆಗೆದುಕೊಳ್ಳುತ್ತಾರೆ. ಮೊನ್ನೆ ಸಿಎಂ ಸಭೆಯಲ್ಲಿ ಪೊಲೀಸರು ಇಂತಹ ಕೇಸ್ ಬಗ್ಗೆ ಸುಮೋಟೋ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದೇವೆ. ಇವತ್ತು ಮೈಕ್ರೋ ಫೈನಾನ್ಸ್ ಕಾನೂನು ಮಾಡುವ ಬಗ್ಗೆ ಸಭೆ ಕರೆದಿದ್ದೇವೆ. ಇವತ್ತು ಬಿಲ್ ಬಗ್ಗೆ ನಾನು, ಕಾನೂನು ಸಚಿವರು, ಕಂದಾಯ ಸಚಿವರು ಸಭೆ ಮಾಡಿ ಬಿಲ್ ಅಂತಿಮ ಮಾಡುತ್ತೇವೆ. ನಾಳೆಯ ಕ್ಯಾಬಿನೆಟ್ ನಲ್ಲಿ ಸುಗ್ರೀವಾಜ್ಞೆ ಹೊರಡಿಸಲು ಕ್ರಮ ತೆಗೆದುಕೊಂಡು ರಾಜ್ಯಪಾಲರಿಗೆ ಕಳಿಸ್ತೀವಿ ಅಂತ ಜಿ. ಪರಮೇಶ್ವರ್ ತಿಳಿಸಿದರು.
ಈಗಾಗಲೇ SP-DCಗಳ ಸಭೆ ಮಾಡಿ ಅಗತ್ಯ ಕ್ರಮಕ್ಕೆ ಸೂಚನೆ ನೀಡಿದ್ದೇವೆ. ಸಹಾಯವಾಣಿ ಕೂಡಾ ಪ್ರಾರಂಭ ಮಾಡಿದ್ದೇವೆ. ಜಿಲ್ಲಾಧಿಕಾರಿಗಳಿಗೆ ಅಧಿಕಾರ ಕೊಡುವುದು ಮತ್ತು ಇದಕ್ಕಾಗಿ ಒಂದು ಪ್ರತ್ಯೇಕ ವಿಂಗ್ ಪ್ರಾರಂಭ ಮಾಡೋದು ಬಿಲ್ ನಲ್ಲಿ ಅಂಶಗಳನ್ನ ಸೇರಿಸಿದ್ದೇವೆ ಎಂದರು.
ಕೆಲವು ಮೈಕ್ರೋ ಫೈನಾನ್ಸ್ ಅವರು ಹಣ ವಸೂಲಿಗೆ ಔಟ್ ಸೋರ್ಸ್ ಕೊಟ್ಟಿರುತ್ತಾರೆ. ಅವರು ಬಂದು ಗುಂಡಾ ವರ್ತನೆ ಮಾಡೋ ಕೆಲಸ ಮಾಡ್ತಿದ್ದಾರೆ. ಆದರೆ ಅದನ್ನ ಮಾಡಿದ್ರೆ ಕ್ರಮ ತೆಗೆದುಕೊಳ್ಳುತ್ತೀವಿ. ಕಂಪನಿ ಅವರಿಗೂ ಈಗಾಗಲೇ ಸೂಚನೆ ಕೊಟ್ಟಿದ್ದೇವೆ. ಇವತ್ತು ಸುಗ್ರಿವಾಜ್ಞೆ ಹೊರಡಿಸೋ ಕಾನೂನು ಬಗ್ಗೆ ಸಭೆ ಮಾಡಿ ಇವತ್ತೇ ಕಾನೂನು ಅಂತಿಮ ಮಾಡುತ್ತೇವೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದರು.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc