ತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ತರುಣ್ ಶಿವಪ್ಪ ಹಾಗೂ ಮಾನಸ ತರುಣ್ ನಿರ್ಮಿಸಿರುವ, “ಕರ್ವ” ಖ್ಯಾತಿಯ ನವನೀತ್ ನಿರ್ದೇಶನದಲ್ಲಿ ಶರಣ್ ನಾಯಕರಾಗಿ ನಟಿಸಿರುವ “ಛೂ ಮಂತರ್” ಚಿತ್ರ ಯಶಸ್ವಿ 25 ದಿನಗಳ ಪ್ರದರ್ಶನ ಕಂಡು, 50 ದಿನಗಳತ್ತ ಮುನ್ನುಗುತ್ತಿದೆ.
ಈ ಸಂಭ್ರಮವನ್ನು ಸಂಭ್ರಮಿಸಲು ಚಿತ್ರತಂಡ ಸಮಾರಂಭ ಆಯೋಜಿಸಿತ್ತು. ಇದೇ ಸಂದರ್ಭದಲ್ಲಿ ತಂತ್ರಜ್ಞರಿಗೆ ಹಾಗೂ ಕಲಾವಿದರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ರೋರಿಂಗ್ ಸ್ಟಾರ್ ಶ್ರೀಮುರಳಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಕನ್ನಡ ಚಿತ್ರವೊಂದು ಇಪ್ಪತ್ತೈದು ದಿನಗಳನ್ನು ಪೂರೈಸಿರುವುದು ಖುಷಿಯ ವಿಚಾರ. ಶರಣ್ ಅವರೊಟ್ಟಿಗೆ ಅನೇಕ ಚಿತ್ರಗಳನ್ನು ಮಾಡಿದ್ದೇನೆ. ತರುಣ್ ಕೂಡ ಬಹು ದಿನಗಳ ಗೆಳೆಯ.
ಈ ಚಿತ್ರ ಬಿಡುಗಡೆಯಾದಾಗ ನನ್ನ ಸ್ನೇಹಿತರೊಬ್ಬರು ಫೋನ್ ಮಾಡಿ “ಛೂ ಮಂತರ್” ಚಿತ್ರದ ಟಿಕೇಟ್ ಬೇಕು. ಹೌಸ್ ಫುಲ್ ಆಗಿದೆ ಎಂದರು. ಈ ವಿಷಯ ಕೇಳಿ ಸಂತೋಷವಾಯಿತು. ಚಿತ್ರ ನೂರು ದಿನಗಳ ಪ್ರದರ್ಶನ ಕಾಣಲಿ ಎಂದು ಶ್ರೀಮುರಳಿ ಹಾರೈಸಿದರು.
ಶ್ರೀಮುರಳಿ ಅವರು ಇಂದು ಆಗಮಿಸಿರುವುದು ನಿಜಕ್ಕೂ ಬಹಳ ಸಂತೋಷವಾಗಿದೆ ಎಂದು ಮಾತನಾಡಿದ ನಾಯಕ ಶರಣ್, ಇಂದು ನನಗೆ ಮತ್ತೊಂದು ಖುಷಿಯ ವಿಚಾರ. ಅದೇನೆಂದರೆ ನಮ್ಮ ಚಿತ್ರಕ್ಕೆ ತೆರೆಯ ಹಿಂದೆ ದುಡಿದ ಬಹುತೇಕ ತಂತ್ರಜ್ಞರು ಬಂದಿದ್ದಾರೆ. ನಿಜವಾಗಲೂ ಚಿತ್ರದ ಗೆಲುವಿಗೆ ಇವರ ಕೊಡುಗೆ ಅಪಾರ. ನಮ್ಮ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ ಅಂದರೆ ಅದಕ್ಕೆ ಕಾರಣ ಜನರು ನಮ್ಮ ಚಿತ್ರಕ್ಕೆ ನೀಡುತ್ತಿರುವ ಮೌತ್ ಪಬ್ಲಿಸಿಟಿ. ಈ ಸಂದರ್ಭದಲ್ಲಿ ಕನ್ನಡ ಕಲಾರಸಿಕರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.
ಚಿತ್ರದ ಯಶಸ್ಸಿಗೆ ಕಾರಣರಾದ ಚಿತ್ರತಂಡಕ್ಕೆ ನಿರ್ಮಾಪಕರಾದ ತರುಣ್ ಶಿವಪ್ಪ ಹಾಗೂ ಮಾನಸ ತರುಣ್ ಧನ್ಯವಾದ ತಿಳಿಸಿದರು. ಈ ಗೆಲುವು ನನ್ನ ಚಿತ್ರತಂಡದು ಹಾಗೂ ಅಭಿಮಾನಿಗಳದು ಎಂದರು ನಿರ್ದೇಶಕ ನವನೀತ್. ನಟಿಯರಾದ ಅದಿತಿ ಪ್ರಭುದೇವ ಹಾಗೂ ಮೇಘನಾ ಗಾಂವ್ಕರ್ “ಛೂ ಮಂತರ್” ಚಿತ್ರದ ಯಶಸ್ಸಿನ ಖುಷಿಯನ್ನು ಮಾತುಗಳ ಮೂಲಕ ಹಂಚಿಕೊಂಡರು.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc