ಬೀದರ್ : ರಸ್ತೆ ಮೇಲೆ ಅಡ್ಡ ಬಂದ ಮಹಿಳೆಯನ್ನು ಬಚಾವ್ ಮಾಡಲು ಯತ್ನಿಸಿದಾಗ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಕಾರ್ನಲ್ಲಿ ಒಂದು ಕೋಟಿಗೂ ಅಧಿಕ ಮೌಲ್ಯದ 118 ಕೆಜಿ ಗಾಂಜಾ ಪತ್ತೆಯಾಗಿರುವ ಘಟನೆ ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಹತ್ತಿರ ಸೋಮವಾರ ಮಧ್ಯಾಹ್ನ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 65ರ ರಾಜೇಶ್ವರ ಗ್ರಾಮದ ಬ್ರಿಡ್ಜ್ ನ ರಸ್ತೆ ದಾಟುತ್ತಿದ್ದ ಮಹಿಳೆಗೆ ಬಚಾವ್ ಮಾಡಲು ಯತ್ನಿಸಿದಾಗ ಕಾರಿನ ಚಾಲಕ ನಿಯಂತ್ರಣ ಕಳೆದು ಕೊಂಡು ಪಕ್ಕದಲ್ಲಿರುವ ತಡೆಗೋಡೆಗೆ ಡಿಕ್ಕಿ ಹೊಡೆದಿದ್ದಾನೆ. ವೇಗದಲ್ಲಿದ್ದ ಕಾರು ಡಿಕ್ಕಿಯ ಬಳಿಕ ಪಲ್ಟಿ ಹೊಡೆದಿದೆ. ಸ್ಥಳೀಯರು ಸ್ಥಳಕ್ಕೆ ಧಾವಿಸಿ ಗಮನಿಸಿದಾಗ ಕಾರಿನ ಡಿಕ್ಕಿಯೊಳಗಿದ್ದ ಗಾಂಜಾ ಪಾಕೆಟ್ ರಸ್ತೆಗೆ ಬಿದ್ದಿರುವುದು ಕಂಡುಬಂದಿದೆ.
ತಕ್ಷಣ ಒಳಗಿದ್ದ ಇಬ್ಬರಿಗೆ ಹಿಡಿದುಕೊಂಡ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಬಸವ ಕಲ್ಯಾಣ ಗ್ರಾಮೀಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಇಬ್ಬರಿಗೂ ವಶಕ್ಕೆ ಪಡೆದಿದ್ದಾರೆ. ಸಣ್ಣಪುಟ್ಟ ಗಾಯಗಳಾದ ಇವರನ್ನು ಮಹಾರಾಷ್ಟ್ರ ಮೂಲದ ಫಿರೋಜ್, ರಿಯಾಜ್ ಎಂದು ಗುರುತಿಸಲಾಗಿದೆ.
ತೆಲಂಗಾಣ ಕಡೆಯಿಂದ ಬರುತ್ತಿದ್ದ ಈ ಕಾರ್ ಮಹಾರಾಷ್ಟ್ರದ ಮುಂಬೈಗೆ ಹೋಗುತ್ತಿತ್ತು. ಹಲವು ಕಡೆಗಳಲ್ಲಿ ಚೆಕ್ ಪೋಸ್ಟ್ಗಳಿದ್ದರೂ ಖದೀಮರು ಕಾರಿನಲ್ಲಿ ಬಿಂದಾಸ್ ಆಗಿ ಗಾಂಜಾ ಸಾಗಣೆ ಮಾಡುತ್ತಿರುವುದು ಪೊಲೀಸರ ಮೇಲೆ ಸಂದೇಹ ಮೂಡುವಂತಾಗಿದೆ. ಈ ಕುರಿತು ಬಸವಕಲ್ಯಾಣ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc