ಬೆಂಗಳೂರು: ರಾಜ್ಯಾದ್ಯಂತ ಗದ್ದಲ ಮಾಡಿದ ಬಹುಕೋಟಿ ಬಿಟ್ಕಾಯಿನ್ ಹಗರಣದಲ್ಲಿ ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರ ಸಂಕಷ್ಟ ಹೆಚ್ಚಾಗಿದೆ. ಹ್ಯಾಕರ್ ಶ್ರೀಕೃಷ್ಣ (ಶ್ರೀಕಿ) ಜೊತೆ ನಲಪಾಡ್ ಅವರ ವ್ಯಾಪಾರಿಕ ಸಂಬಂಧಗಳಿರುವುದು ಕಂಡುಬಂದ ನಂತರ, ವಿಶೇಷ ತನಿಖಾ ತಂಡ (ಎಸ್ಐಟಿ) ಫೆಬ್ರವರಿ 7ರಂದು ಸೆಕ್ಷನ್ 41ಎ ಅಡಿ ಎರಡನೇ ಬಾರಿ ವಿಚಾರಣೆಗೆ ನೋಟಿಸ್ ನೀಡಿದೆ. ಈ ಹಿಂದೆ ನಲಪಾಡ್ ಅವರನ್ನು ತನಿಖೆ ಮಾಡಿದ್ದ ಎಸ್ಐಟಿ, ಶ್ರೀಕಿ ನಲಪಾಡ್ಗೆ ಕೋಟಿಗಟ್ಟಲೆ ರೂಪಾಯಿ ನೀಡಿದ್ದಾನೆ ಎಂಬ ಆರೋಪವನ್ನು ಪರಿಶೀಲಿಸುತ್ತಿದೆ. ಸೆಕ್ಷನ್ 41ಎ ಅಡಿ ನೋಟಿಸ್ ನೀಡಿದ್ದು ಬಂಧನದ ಸಾಧ್ಯತೆಯನ್ನು ಸೂಚಿಸುವುದರಿಂದ, ನಲಪಾಡ್ ಅವರ ಬಂಧನದ ಆತಂಕ ಹೆಚ್ಚಾಗಿದೆ.
ರಾಜಕೀಯ ದಾಳಿಗೆ ನಲಪಾಡ್ ಪ್ರತಿಕ್ರಿಯೆ:
ಈ ಹಿನ್ನೆಲೆಯಲ್ಲಿ ನಲಪಾಡ್ ಅವರು ಬಿಜೆಪಿಯನ್ನು ಟೀಕಿಸಿದ್ದು, “ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗದವರು ಎಂಬ ಕಾರಣದಿಂದ ಬಿಜೆಪಿ ಅವರ ವಿರುದ್ಧ ಷಡ್ಯಂತ್ರ ರೂಪಿಸುತ್ತಿದೆ. ನೂರು ಇಡಿ ಅಥವಾ ಸಿಬಿಐ ತನಿಖೆ ಬಂದರೂ ಕಾಂಗ್ರೆಸ್ ಹೆದರುವುದಿಲ್ಲ” ಎಂದು ಹೇಳಿದ್ದಾರೆ. ಬಿಜೆಪಿ ಸರ್ಕಾರದ ಕೋವಿಡ್ ಹಗರಣ, ಮುಡಾ ಪ್ರಕರಣ, ಮತ್ತು 40% ಕಮಿಷನ್ ಆರೋಪಗಳನ್ನು ಸೂಚಿಸಿ, “ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರವಿದ್ದಾಗ ಇಡಿ-ಸಿಬಿಐ ಎಲ್ಲಿದ್ದವು?” ಎಂದು ಪ್ರಶ್ನಿಸಿದ್ದಾರೆ.
ಬರಿ ಕಾಂಗ್ರೆಸ್ಸಿನವರೇ ಕಾಣುತ್ತಾರೆ:
ಇಡಿ, ಸಿಬಿಐಗೆ ಕಾಂಗ್ರೆಸ್ ನವರು ಮಾತ್ರ ಕಾಣುತ್ತಾರೆ. ಇದೀಗ ನಾವು ಯಾವ ಸಿಬಿಐ, ಇಡಿಗೆ ಹೆದರಲ್ಲ. ಧಮ್, ತಾಕತ್ತು ಬಗ್ಗೆ ಮಾತನಾಡುವ ಬಿಜೆಪಿಯವರು ನ್ಯಾಯಯುತವಾಗಿ ಹೋರಾಟ ಮಾಡಲಿ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣ ಬಿಜೆಪಿ ಸರ್ಕಾರದಲ್ಲಿದ್ದಾಗ ಆಗಿರುವುದು ಎಂದರು. ಸರ್ಕಾರ ನಡೆಸಲು ಅಧಿಕಾರಿಗಳು ಬಹಳ ಮುಖ್ಯ. ಅವರನ್ನು ನಿಯಂತ್ರಣದೊಂದಿಗೆ ಉತ್ತಮ ಆಡಳಿತ ನೀಡುವುದು ಸಚಿವರ ಕೆಲಸ. ನಿಯಂತ್ರಿಸದಿದ್ದರೆ ಕಷ್ಟ ಕಷ್ಟ ಎಂದ ಅವರು, ವಾಲ್ಮೀಕಿ ನಿಗಮದ ಪ್ರಕರಣವನ್ನು ಹಗರಣ ಎಂದು ಒಪ್ಪಲು ಸಾಧ್ಯವಿಲ್ಲ ಎಂದರು.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc