ಕರುನಾಡಿನಲ್ಲಿ ಮತ್ತೊಂದು ಅಮಾನವೀಯ ಘಟನೆ
ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಇದ್ಯಾ.?
ಮಹಿಳೆಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿತ..!
ಹಾವೇರಿ: ಬೆಳಗಾವಿಯ ವಂಟಮೂರಿನಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಥಳಿಸಿ ಮೆರವಣಿಗೆ ಮಾಡಿದ ಘಟನೆ ಮಾಸುವ ಮುನ್ನವೇ ಇಂತಹದ್ದೇ ಒಂದು ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಅರಮಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಹಲ್ಲೆಗೊಳಗಾಗ ಮಹಿಳೆಯ ಮಗ ಯುವತಿಯೊಬ್ಬಳನ್ನು ಅಪಹರಿಸಿದ್ದಾನೆ ಎಂದು ಆರೋಪಿಸಿ ಯುವಕನ ತಾಯಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಮನಸೋ ಇಚ್ಛೆ ಬಂದಂತೆ ಥಳಿಸಿದ್ದಾರೆ.
ಹನುಮವ್ವ ದುರ್ಗಪ್ಪ ಮೇಡೇರಿ (50) ಹಲ್ಲೆಗೊಳಗಾದ ಮಹಿಳೆ. ಅದೇ ಗ್ರಾಮದ ಚಂದ್ರಪ್ಪ, ಗಂಗಪ್ಪ ಹಾಗೂ ಗುತ್ತೆವ್ವ ಹಲ್ಲೆ ನಡೆಸಿದ ಆರೋಪಿಗಳು. ನಿನ್ನ ಮಗ ಎಲ್ಲಿದ್ದಾನೆ ಹೇಳು ಎಂದು ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ನಂತರ ಹನುಮವ್ವಳನ್ನು ಮನೆ ಮುಂದಿನ ವಿದ್ಯುತ್ ಕಂಬಕ್ಕೆ ಕಟ್ಟಿ ಮನಸೋಇಚ್ಛೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಹನುಮವ್ವ ಆರೋಪಿಸಿದ್ದಾರೆ. ಗಾಯಗೊಂಡ ಹನುಮವ್ವಳನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.