ಪತ್ನಿಯೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ ಎಂದು ಮಧ್ಯಪ್ರದೇಶದ ಹೈಕೋರ್ಟ್ ನ ಏಕ ಸದಸ್ಯ ಪೀಠ ತೀರ್ಪು ನೀಡಿದೆ.ವೈವಾಹಿಕ ಅತ್ಯಾಚಾರವು ಭಾರತೀಯ ದಂಡ ಸಂಹಿತೆಯಡಿ ಅಪರಾಧವಲ್ಲದ ಕಾರಣ, ಈ ಪ್ರಕರಣದಲ್ಲಿ ಹೆಂಡತಿಯ ‘ಸಮ್ಮತಿ’ ಎಂಬ ಪರಿಕಲ್ಪನೆಯು ‘ಮುಖ್ಯವಲ್ಲ’ ಎಂದು ಕೋರ್ಟ್ ಹೇಳಿದೆ. ಐಪಿಸಿ ಸೆಕ್ಷನ್ 377 (ಅಸ್ವಾಭಾವಿಕ ಲೈಂಗಿಕತೆ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ತನ್ನ ಪತಿ ವಿರುದ್ಧ ವಿಚ್ಛೇದಿತ ಪತ್ನಿ ದಾಖಲಿಸಿದ ದೂರನ್ನು ರದ್ದುಗೊಳಿಸುವಾಗ ನ್ಯಾಯಮೂರ್ತಿ ಜಿ.ಎಸ್.ಅಹ್ಲುವಾಲಿಯಾ ಈ ತೀರ್ಪು ನೀಡಿದ್ದಾರೆ.
ಸುಪ್ರೀಂ ಕೋರ್ಟ್, ಹೈಕೋರ್ಟ್ಗಳ ಹಲವು ತೀರ್ಪುಗಳು ಮತ್ತು ಐಪಿಸಿಯ ಸೆಕ್ಷನ್ 375ರ ಅಡಿಯಲ್ಲಿನ ಅತ್ಯಾಚಾರದ ವ್ಯಾಖ್ಯಾನವನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಜಿ.ಎಸ್.ಅಹ್ಲುವಾಲಿಯಾ ಅವರು, ಪತಿಯು ತನ್ನ ಪತ್ನಿಯೊಂದಿಗೆ ಗುದ ಸಂಭೋಗದಲ್ಲಿ ತೊಡಗುವುದು ಅತ್ಯಾಚಾರವಲ್ಲ ಎಂದು ಹೇಳಿದ್ದಾರೆ.
ಇನ್ನು ಐಪಿಸಿ ಸೆಕ್ಷನ್ 375ರ ಅಡಿಯಲ್ಲಿ ಅತ್ಯಾಚಾರದ ತಿದ್ದುಪಡಿ ವ್ಯಾಖ್ಯಾನವನ್ನು ಉಲ್ಲೇಖಿಸಿ, ಕೆಲವು ಸಂದರ್ಭಗಳಲ್ಲಿ ಅಸಹಜ ಕೃತ್ಯಕ್ಕೆ ಪತ್ನಿಯ ಒಪ್ಪಿಗೆ ಪಡೆಯುವುದು ಪ್ರಾಮುಖ್ಯತೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ ಎಂದೂ ಹೈಕೋರ್ಟ್ ಹೇಳಿದೆ.