ಬೆಂಗಳೂರು: ಕುಮಾರಸ್ವಾಮಿ ಕಿಂಗ್ ಆಫ್ ಬ್ಲಾಕ್ ಮೇಲರ್ ಎಂದಿರುವ ಡಿಸಿಎಂ ಡಿಕೆಶಿಗೆ ತಿರುಗೇಟು ಕೊಟ್ಟಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಇಡೀ ಪ್ರಕರಣವನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡ ವ್ಯಕ್ತಿ ನೀನು ಎಂದು ಕಿಡಿಕಾರಿದರು.
ಬೆಂಗಳೂರಿನಲ್ಲಿ ಮಾತನಾಡಿದರು ಅವರು, ಮಹಿಳೆಯರ ಅಶ್ಲೀಲ ವಿಡಿಯೋಗಳನ್ನು ತುಂಬಲಾಗಿದ್ದ ಪೆನ್ ಡ್ರೈವ್ ಗಳನ್ನು ಹಾದಿಬೀದಿಯಲ್ಲಿ ಸುರಿದಿರುವ ಕಿಡಿಗೇಡಿಗಳನ್ನು ರಾಜ್ಯ ಸರಕಾರ ರಕ್ಷಣೆ ಮಾಡುತ್ತಿದೆ ಎಂದು ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.
ಡಿ.ಕೆ.ಶಿವಕುಮಾರ್ ಸಂಸ್ಕೃತಿ ಎಂಥದು ಎಂದು ಎಲ್ಲರಿಗೂ ಗೊತ್ತಿದೆ. ವಕೀಲರಾದ ದೇವರಾಜೇಗೌಡ ಜತೆ ಯಾಕಪ್ಪ ಮಾತಾನಾಡಿದೆ ನೀನು? ನಿನಗೇನಿತ್ತು ಅವರ ಹತ್ತಿರ ಕೆಲಸ ಡಿ.ಕೆ.ಶಿವಕುಮಾರ್? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕುಮಾರಸ್ವಾಮಿ ಬ್ಲಾಕ್ ಮೇಲರ್ ಅಲ್ಲ
ಕುಮಾರಸ್ವಾಮಿ ಬ್ಲಾಕ್ ಮೇಲರ್ ಅಲ್ಲ. ಐದು ಜನರನ್ನು ಇಟ್ಟಕೊಂಡಿದ್ದೀನಿ ಅಂತ ಹೇಳಿದ್ದೀಯಾ ಅಲ್ಲವೇ ನೀನು? ನಿಮ್ಮ ಮುಖ್ಯಮಂತ್ರಿಗೆ ಮಾನ ಮರ್ಯಾದೆ ಇದೆಯಾ? ಡಾ.ಜಿ.ಪರಮೇಶ್ವರ ಅವರೇ ನಿಮಗೆ ಬೆನ್ನು ಮೂಳೆ ಇದೆಯಾ? ನನ್ನನ್ನು ಹಿಟ್ ಅಂಡ್ ರನ್ ಅಂತಾರೆ.. ಹಾಗಾದರೆ ನಿಮ್ಮದೇನು? ನಿಮ್ಮ ಎಸ್ ಐಟಿ ಅಧಿಕಾರಿಗಳಿಗೆ ಕ್ರೆಡಿಬಲಿಟಿ ಎನ್ನುವುದು ಇದೆಯಾ? ಎಂದು ಕುಮಾರಸ್ವಾಮಿ ಅವರು ಗುಡುಗಿದರು.
ನೊಂದ ಮಹಿಳೆ ಎಲ್ಲಿ ಸಿಕ್ಕಿದರೆಂದು ಹೇಳಿ?
ಕಿಡ್ನಾಪ್ ಪ್ರಕರಣದಲ್ಲಿ ಏನೇನು ನಡೆದಿದೆ ಎನ್ನುವುದು ನನಗೆ ಗೊತ್ತಿದೆ. ನೊಂದ ಮಹಿಳೆ ರಾಜಗೋಪಾಲ್ ಎಂಬುವರ ತೋಟದ ಮನೆಯಲ್ಲಿ ಸಿಕ್ಕಿದರಾ? ಅಥವಾ ಅವರ ಸಂಬಂಧಿಕರ ಮನೆಯಲ್ಲಿ ಸಿಕ್ಕಿದರಾ? ಎಸ್ ಐಟಿ ಅಧಿಕಾರಿಗಳು ಹೇಳಬೇಕು. ಆ ಮಹಿಳೆ ಸಿಕ್ಕಿದ್ದು ಅವರ ಸಂಬಂಧಿಕರ ಮನೆಯಲ್ಲಿ. ಹುಣಸೂರಿನ ಪವಿತ್ರಾ ಎಂಬುವವರ ಮನೆಯಿಂದ ಕರೆದುಕೊಂಡು ಬಂದಿದ್ದಾರೆ ಎಂದು ಕುಮಾರಸ್ವಾಮಿ ಅವರು ಆರೋಪ ಮಾಡಿದರು.
ಚಾಲಕ ಕಾರ್ತಿಕ್ ಗೆ ಖಾಸಗಿ ವಾಹಿನಿಯಲ್ಲಿ ತರಬೇತಿ
ಪೆನ್ ಡ್ರೈವ್ ಹಂಚಿಕೆಯ ಮೂಲ ಸೂತ್ರಧಾರ ಕಾರು ಚಾಲಕ ಕಾರ್ತಿಕ್ ನನ್ನು ಖಾಸಗಿ ಚಾನೆಲ್ ಒಂದರಲ್ಲಿ ಕೂರಿಸಿ ಸೂಕ್ತ ತರಬೇತಿ ಕೊಡುವ ಕೆಲಸ ನಡೆಯುತ್ತಿದೆ. ಈ ತನಿಖೆಯ ದಿಕ್ಕು ಎತ್ತ ಸಾಗುತ್ತಿದೆ ಎನ್ನುವುದು ಅರ್ಥವಾಗುತ್ತಿದೆ ಎಂದು ಕಿಡಿಕಾರಿದರು.
ಹಾಸನ ಪ್ರಕರಣದ ತನಿಖೆಗೆ ಎಸ್ ಐಟಿ ರಚನೆ ಆಗಿದೆ. ಅದು ಕೆಲಸವನ್ನು ಮಾಡುತ್ತಿದೆ. ಆದರೆ, ವಿಶೇಷ ತನಿಖಾ ತಂಡಕ್ಕೆ ಸಿಗದ ಕಾರು ಚಾಲಕ ಖಾಸಗಿ ವಾಹಿನಿಗೆ ಸಿಕ್ಕಿ ಸಂದರ್ಶನ ನೀಡುತ್ತಾನೆ. ನಾನು ಗೃಹ ಸಚಿವರಿಗೆ ಪ್ರಶ್ನೆ ಕೇಳುತ್ತೇನೆ, ನಿಮ್ಮ ತನಿಖೆ ರೇವಣ್ಣ ಕೇಂದ್ರೀಕೃತವಾಗಿದೆ. ಆದರೆ, ವಿಡಿಯೋಗಳು ಬಿಡುಗಡೆ ಮಾಡಿದವರನ್ನು ಯಾಕೆ ಹೊರಗೆ ಬಿಟ್ಟಿದ್ದೀರಿ? ಅವರ ವಿರುದ್ಧ ಕ್ರಮ ಕೈಗೊಳ್ಳಿ. ಇದುವರೆಗೂ ಏನು ಮಾಡಿಲ್ಲ ಎಂದು ಕಿಡಿಕಾರಿದರು. ಕಾರು ಚಾಲಕ ಕಾರ್ತಿಕ್ ನ ಖಾಸಗಿ ಚಾನೆಲ್ ಅಲ್ಲಿ ಕುಳಿತು ಟ್ರೈನ್ ಅಪ್ ಮಾಡ್ತಾ ಇದ್ದಾರೆ. ಮಿಸ್ಟರ್ ಪರಮೇಶ್ವರ್ ತಾವು ಏನ್ ಮಾಡ್ತಾ ಇದ್ದೀರಿ? ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
14 ವರ್ಷದ ರೇವಣ್ಣ ಮನೆಯಲ್ಲಿ ಕೆಲಸದಲ್ಲಿ ಇದ್ದವನು ಇವನು. ಪ್ರಜ್ವಲ್ ನಡವಳಿಕೆ ಗೊತ್ತಿದ್ದ ಮೇಲೆ ಕೆಲಸ ಬಿಡಬೇಕಿತ್ತು ಅಲ್ಲವೇ? ಬಂಡೆ ಹೇಗೆ ರಕ್ಷಣೆ ಮಾಡುತ್ತೆ ಅಂತ ಕಾಯ್ತಾ ಇದ್ದಾನೆ ಅವನು. ಬಂಡೆ ರಕ್ಷಣೆ ಕೊಡುತ್ತದೆ ಎಂದು ಕಾರ್ತಿಕ್ ಅಂದುಕೊಂಡಿದ್ದಾನೆ. ಅವನು ಗಿರಿನಗರದಲ್ಲೇ ಇದ್ದಾನಂತೆ. ಬಹುಶಃ ಅವನಿಗೆ ಟ್ರೈನಿಂಗ್ ಕೊಡ್ತಾ ಇದ್ದಾರೆ ಎಂದು ಅವರು ಆರೋಪ ಮಾಡಿದರು. ನವೀನ್ ಗೌಡ, ಕಾರ್ತಿಕ್ ಹಾಗೂ ಹಾಸನ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರಿಗೆ ಯಾಕೆ ನೋಟಿಸ್ ಕೊಟ್ಟಿಲ್ಲ? ಇವರು ಮೂರು ಜನರು ಎಷ್ಟು ಆಪ್ತರು, ಇವರ ಸಂಬಂಧ ಎಂಥದ್ದು, ಇವರ ಪೋಟೋಗಳೆಲ್ಲ ಎಲ್ಲಾ ಕಡೆ ವೈರಲ್ ಆಗಿವೆ. ಇದೆಲ್ಲಾ ಎಸ್ ಐಟಿ ಕಣ್ಣಿಗೆ ಬಿದ್ದಿಲ್ಲವೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ಈಗ ನೋಡಿದರೆ ಇಡೀ ಪ್ರಕರಣ ರೇವಣ್ಣ ಅವರ ಸುತ್ತ ಮಾತ್ರ ಸುತ್ತುತ್ತಿದೆ. ಅವರಿಗೆಮಾತ್ರ ನೋಟಿಸ್ ಕೊಟ್ಟಿದ್ದಾರೆ ಎಂದರು.