- 5 ವರ್ಷದ ಬಾಲಕನಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮಗುವಿನ ದೇಹ ಛಿದ್ರ ಛಿದ್ರ
- ಹಳೆಯ ಏರ್ ಪೋರ್ಟ್ ಹತ್ತಿರದ ಭೀಮಾನಗರದ ಮುರಗೇಶ್ ಪಾಳ್ಯದಲ್ಲಿ ದುರಂತ ಸಂಭವಿಸಿದೆ.
ಸಿಲಿಕಾನ್ ಸಿಟಿಯಲ್ಲಿ ಹೃದಯ ವಿಧ್ರಾವಕ ಘಟನೆ ನಡೆದಿದೆ. ರಸ್ತೆಯಲ್ಲಿ ಆಟವಾಡುತ್ತಿದ್ದ 5 ವರ್ಷದ ಬಾಲಕನಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮಗುವಿನ ದೇಹ ಛಿದ್ರ ಛಿದ್ರವಾಗಿದೆ. ಹಳೆಯ ಏರ್ ಪೋರ್ಟ್ ಹತ್ತಿರದ ಭೀಮಾನಗರದ ಮುರಗೇಶ್ ಪಾಳ್ಯದಲ್ಲಿ ಬೆಳಗ್ಗೆ 10.30ರ ಸುಮಾರಿಗೆ ಈ ದುರಂತ ಸಂಭವಿಸಿದೆ.
ಮುರುಗೇಶಪಾಳ್ಯ ರಸ್ತೆಯಲ್ಲಿ ಸಾವನ್ನಪ್ಪಿರುವ ಈ ಬಾಲಕ ತಂದೆಯ ಜೊತೆ ಕಾರು ವಾಶ್ ಮಾಡುತ್ತಿದ್ದ. ಇದೇ ವೇಳೆ ಅಪ್ರಾಪ್ತ ಬಾಲಕ ಕಾರಿನ ಎಕ್ಸಿಲೇಟರ್ ಒತ್ತಿದ್ದಾನೆ. ಈ ಅಚಾತುರ್ಯದಿಂದ ಕಾರು ರಭಸವಾಗಿ ಚಲಿಸಿದೆ. ಕಾರಿನ ಬಳಿ ಆಟವಾಡುತ್ತಿದ್ದ 5 ವರ್ಷದ ಆರವ್ ಎಂಬ ಮಗುವಿಗೆ ಕಾರು ಗುದ್ದಿದ ರಭಸಕ್ಕೆ ಮಗು ಸ್ಥಳದಲ್ಲೇ ಮೃತಪಟ್ಟಿದೆ.
ಆರವ್ ಮನೆ ಮುಂದೆ ಆಟ ಆಡುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಮಣಿಪಾಲ್ ಆಸ್ಪತ್ರೆಗೆ ಮೃತ ದೇಹ ತರಲಾಗಿದ್ದು, ಆಸ್ಪತ್ರೆಯ ಆವರಣದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಆರವ್ ಸಹೋದರ ಧನರಾಜ್ ಹಾಗೂ ತಾಯಿ ಲಲಿತಾಗೂ ಗಂಭೀರ ಗಾಯಗಳಾಗಿದೆ. ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 15 ವರ್ಷದ ಬಾಲಕನ ನಿರ್ಲಕ್ಷ್ಯಕ್ಕೆ 5 ವರ್ಷದ ಮಗುವಿಗೆ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಕಾರು ಚಾಲಕನನ್ನು ಜೀವನ್ ಭೀಮಾನಗರ ಪೊಲೀಸರು ಬಂಧಿಸಿದ್ದಾರೆ.