- ಪಾಕಿಸ್ತಾನ ಸರ್ಕಾರದ ವಿರುದ್ಧ ನಿರಂತರ ಪ್ರತಿಭಟನೆ ಇಂದು ಸಹ ಮುಂದುವರೆದಿದೆ.
- ಪಾಕ್ ಆಕ್ರಮಿತ ಕಾಶ್ಮೀರದ ಜನ ಪಾಕಿಸ್ತಾನ ಸರ್ಕಾರಕ್ಕೆ ಸೆಡ್ಡು ಹೊಡೆದು ಸವಾಲು ಹಾಕಿದ್ದಾರೆ.
- ಬೆಲೆ ಏರಿಕೆ ಸೇರಿ ಹಲವು ವಿಚಾರಗಳ ಬಗ್ಗೆ ಪ್ರತಿಭಟನೆ ಮಾಡಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಓಕೆ) ಅತಿ ದೊಡ್ಡ ದಂಗೆ ಶುರುವಾಗಿದೆ. ಕಳೆದ ಮೂರು ನಾಲ್ಕು ದಿನಗಳಿಂದ ಸ್ಥಳೀಯ ನಿವಾಸಿಗಳು ಪಾಕಿಸ್ತಾನ ಸರ್ಕಾರದ ವಿರುದ್ಧ ನಿರಂತರ ಪ್ರತಿಭಟನೆ ಮಾಡುತ್ತಿದ್ದು, ಇಂದು ಸಹ ಮುಂದುವರೆದಿದೆ. ಪಾಕ್ ಸರ್ಕಾರದ ವಿರುದ್ಧ ಸಿಡಿದೆದ್ದಿರುವ (ಪಿಓಕೆ) ಜನ ಲಾಠಿ ಪ್ರಹಾರ, ಬಂಧೂಕಿನ ಬೆದರಿಕೆಗೆ ಸೆಡ್ಡು ಹೊಡೆದು ನಿಂತಿದ್ದಾರೆ.
ಜಮ್ಮು- ಕಾಶ್ಮೀರದಲ್ಲಿ ಲೋಕಸಭಾ ಚುನಾವಣೆಗೆ ಮತದಾನ ನಡೆಯುತ್ತಿದೆ. ಕಾಶ್ಮೀರದ ಜನ ಶಾಂತಿಯುತವಾಗಿ ಪ್ರಜಾಪ್ರಭುತ್ವದಲ್ಲಿ ಭಾಗಿಯಾಗಿದ್ದಾರೆ. ಈ ಮಧ್ಯೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪರಿಸ್ಥಿತಿ ಸಂಪೂರ್ಣ ಉದ್ವಿಗ್ನವಾಗಿದೆ. ಸ್ಥಳೀಯರು ಕಲ್ಲು ತೂರಾಟ ನಡೆಸುತ್ತಿದ್ದು, ಪೊಲೀಸರು ಸಿಕ್ಕ, ಸಿಕ್ಕವರ ಮೇಲೆ ಲಾಠಿಚಾರ್ಜ್ ಮಾಡುತ್ತಿದ್ದಾರೆ. ಪೊಲೀಸರು ಗುಂಡು ಹಾರಿಸುವ ಮೂಲಕ POK ಜನರನ್ನು ಬೆದರಿಸಲು ಮುಂದಾಗಿದ್ರೆ, ಪಾಕ್ ಆಕ್ರಮಿತ ಕಾಶ್ಮೀರದ ಜನ ಪಾಕಿಸ್ತಾನ ಸರ್ಕಾರಕ್ಕೆ ಸೆಡ್ಡು ಹೊಡೆದು ಸವಾಲು ಹಾಕಿದ್ದಾರೆ. ಪ್ರತಿಭಟನೆ ಹತ್ತಿಕ್ಕುವ ಪೊಲೀಸರ ಬಲ ಪ್ರಯೋಗದ ನಡುವೆಯೂ ಆಕ್ರೋಶ ಹೆಚ್ಚಾಗುತ್ತಿದೆ.
ಪ್ರತಿಭಟನೆಯ ಸಂದರ್ಭದಲ್ಲಿ ಭಾರತದ ಬಾವುಟ ಪ್ರದರ್ಶನ ಮಾಡಿದ್ದು, ಪ್ರತಿಭಟನಾಕಾರರು ಭಾರತದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದ ನಿಜವಾದ ಮಾಲೀಕ ಬಂದಿದ್ದಾನೆ ಎಂದು ಪ್ರತಿಭಟನಾಕಾರರು ಹೇಳುತ್ತಾ ಆ ಮೂಲಕ ಪಿಓಕೆ ಭಾರತದ ಭಾಗ ಎಂದು ಕೂಗಿದ್ದಾರೆ.
ಪೊಲೀಸರು ಲಾಠಿ ಪ್ರಹಾರ ಮಾಡಲು ಮುಂದಾಗಿದ್ದಾರೆ. ನೋಡೋಣ ಎಷ್ಟು ಲಾಠಿ ಪ್ರಹಾರ ಮಾಡುತ್ತಾರೆ ಎಂದ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ. ಪಿಓಕೆ ಅಲ್ಲಿ ಮೂಲಸೌಕರ್ಯ, ಅತಿಯಾದ ಹಣದುಬ್ಬರ, ಬೆಲೆ ಏರಿಕೆ ಸೇರಿ ಹಲವು ವಿಚಾರಗಳ ಬಗ್ಗೆ ಪ್ರತಿಭಟನೆ ಮಾಡಿದ್ದಾರೆ. ಪಿಓಕೆಯನ್ನ ಪಾಕಿಸ್ತಾನ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ.