ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಸಂಭವಿಸಿದ ಭೀಕರ ಅಪಘಾತಕ್ಕೆ ಮೂವರು ಬಲಿಯಾಗಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಗುದ್ದಿದ ಕಾರು ಎದುರು ಬದಿಯಿಂದ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ಗೆ ಗುದ್ದಿದ್ದು ಕಾರಿನಲ್ಲಿದ್ದ ಇಬ್ಬರು ಪುರುಷರು, ಹಾಗೂ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಾಮನಗರ ತಾಲೂಕಿನ ಸಂಗಬಸವನದೊಡ್ಡಿ ಬಳಿ ಮಂಗಳವಾರ ರಾತ್ರಿ ಅಪಘಾತ ಸಂಭವಿಸಿದೆ.
ಸಂಗಬಸವನದೊಡ್ಡಿ ಗ್ರಾಮದ ಬಳಿ ಮೈಸೂರು ಕಡೆಗೆ ಹೋಗುತ್ತಿದ್ದ ಕಾರು ನಿಯಂತ್ರಣ ತಪ್ಪಿ ಡಿವೈಡರ್ ದಾಟಿ ಬೆಂಗಳೂರು ಕಡೆಗೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಹ್ಯೂಂಡಯ್ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ರಾಮನಗರ ಸಂಚಾರಿ ಪೊಲೀಸರ ಭೇಟಿ, ಪರಿಶೀಲನೆ ನಡೆಸಿ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆ ಸಂಬಂಧ ರಾಮನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರಿನಲ್ಲಿರುವ ಪುತ್ರಿಯ ಮನೆಗೆ ಲಿಯಾಖತ್ ಅವರು ಪತ್ನಿಯೊಂದಿಗೆ ಸ್ನೇಹಿತನ ಕಾರಿನಲ್ಲಿ ಹೊರಟಿದ್ದರು. ಕಾರು ಚಾಲನೆ ಮಾಡುತ್ತಿದ್ದ ನೂರ್ ಅವರು ಸಂಗಬಸವನದೊಡ್ಡಿ ಬಳಿ ರಾತ್ರಿ 9.30ರ ಸುಮಾರಿಗೆ ನಿಯಂತ್ರಣ ಕಳೆದುಕೊಂಡಿದ್ದು, ಕಾರು ರಸ್ತೆ ವಿಭಜಕದ ಮೇಲೆ ಹತ್ತಿ ಪಲ್ಟಿಯಾಗಿ ಬೆಂಗಳೂರು ಕಡೆಗೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಅಶ್ವಮೇಧ ಬಸ್ಸಿಗೆ ಡಿಕ್ಕಿ ಹೊಡೆದಿದೆ.
ಇತ್ತ ಮೈಸೂರಿನಲ್ಲಿ ಪ್ರವಾಸಕ್ಕೆ ಬಂದಿದ್ದ ಸಾರಿಗೆ ಬಸ್ ಪಲ್ಟಿಯಾಗಿ 10 ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ. ಮಂಗಳವಾರ ರಾತ್ರಿ ಫೌಂಟೇನ್ ಸರ್ಕಲ್ ಬಳಿ ಘಟನೆ ಸಂಭವಿಸಿದೆ. ಡಿವೈಡರ್ಗೆ ಡಿಕ್ಕಿಯಾಗಿ ಬಸ್ ಮಗುಚಿ ಬಿದ್ದಿದೆ. ಬಸ್ನಲ್ಲಿದ್ದ 36 ಮಕ್ಕಳ ಪೈಕಿ 10 ಮಕ್ಕಳು ಗಾಯಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಚಾಲಕ ಕುಡಿದು ಬಸ್ ಚಲಾಯಿಸುತ್ತಿದ್ದ ಎನ್ನಲಾಗಿದೆ. ಬೆಳಗಾವಿಯ ಖಾನಾಪುರ ತಾಲ್ಲೂಕಿನ ಶಾಂತಿನಿಕೇತನ ಶಾಲೆಯ ಮಕ್ಕಳು ಮೈಸೂರಿಗೆ ಪ್ರವಾಸಕ್ಕೆ ಬಂದಿದ್ದಾಗ ಈ ಘಟನೆ ನಡೆದಿದೆ. ಸ್ಥಳಕ್ಕೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಾಯಾಳುಗಳನ್ನು ಮೈಸೂರಿನ ಕೆ ಆರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.