ಟಿಕೆಟ್ ವಿಚಾರಕ್ಕೆ ಪಕ್ಷದ ವಿರುದ್ಧವೇ ಬಂಡಾಯ ಎದ್ದಿರುವ ಈಶ್ವರಪ್ಪ ಸಂಧಾನಕ್ಕೆ ವರಿಷ್ಠರು ಮುಂದಾಗಿದ್ದಾರೆ. ಕರ್ನಾಟಕ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಶಿವಮೊಗ್ಗ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪಗೆ ಬುಲಾವ್ ನೀಡಿದ್ದಾರೆ. ನಾಳೆ ದೆಹಲಿಗೆ ಬರುವಂತೆ ಈಶ್ವರಪ್ಪಗೆ ಸೂಚನೆ ನೀಡಿದ್ದು, ಸ್ವತಃ ಅಮಿತ್ ಶಾ ಅವರೇ ಈಶ್ವರಪ್ಪಗೆ ಕರೆ ಮಾಡಿದ್ದಾರೆ ಎನ್ನಲಾಗಿದೆ. ಯಾವುದೇ ಕಾರಣಕ್ಕೂ ತನ್ನ ನಿರ್ಧಾರದಿಂದ ಹಿಂದೆ ಸರಿಯಲ್ಲ ಎಂದು ಹೇಳಿರುವ ಈಶ್ವರಪ್ಪ, ಅಮಿತ್ ಶಾ ಮಾತಿಗಾದ್ರೂ ಮನ್ನಣೆ ಕೊಡ್ತಾರಾ ಎಂಬುವುದು ಕುತೂಹಲ ಮೂಡಿಸಿದೆ. ಪುತ್ರ ಕಾಂತೇಶ್ ಗೆ ಹಾವೇರಿ ಟಿಕೆಟ್ ಕೊಡುವಂತೆ ಈಶ್ವರಪ್ಪ ಬೇಡಿಕೆ ಇಟ್ಟಿದ್ರು. ಆದರೆ ಕೊನೆ ಗಳಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹಾವೇರಿ-ಗದಗ ಲೋಕಸಭಾ ಟಿಕೆಟ್ ಘೋಷಣೆ ಆಗಿತ್ತು. ಇದರಿಂದ ಕುಪಿತಗೊಂಡಿರುವ ಈಶ್ವರಪ್ಪ, ಟಿಕೆಟ್ ಕೊಡಿಸುವುದಾಗಿ ಹೇಳಿ ಯಡಿಯೂರಪ್ಪ ಮಾತು ತಪ್ಪಿದ್ದಾರೆ ಅಂತ ಈಶ್ವರಪ್ಪ ಆರೋಪಿಸಿದ್ದರು. ಹೀಗಾಗಿ ಶಿವಮೊಗ್ಗದಿಂದ ಸ್ಪರ್ಧೆ ಮಾಡಿ, ಬಿಎಸ್ ವೈ ಪುತ್ರ ಬಿ.ವೈ. ರಾಘವೇಂದ್ರರನ್ನ ಸೋಲಿಸುವುದಾಗಿ ಶಪಥ ತೊಟ್ಟಿದ್ದಾರೆ.