ಅರ್ಜುನ್ ತೆಂಡೂಲ್ಕರ್ ಅವರಿಗೆ ತೆಂಡೂಲ್ಕರ್ ಪುತ್ರ ಎಂಬ ಒತ್ತಡವೇ ಕಾಡುತ್ತಿದೆ. ಹೀಗಾಗಿ ಒಳ್ಳೆಯ ಪ್ರತಿಭೆ ಇದ್ದರೂ, ಆಟ ಆಡಲು ಸಾಧ್ಯವಾಗುತ್ತಿಲ್ಲ. ಪ್ರತಿ ಪಂದ್ಯ ಆಡುವುದಕ್ಕೆ ಇಳಿದಾಗಲೂ ಅರ್ಜುನ್ ಅವರನ್ನು ತೆಂಡೂಲ್ಕರ್ ಜೊತೆ ಹೋಲಿಸಿ ನೋಡಲಾಗುತ್ತಿದೆ. ಈ ಎಲ್ಲ ಒತ್ತಡಗಳ ನಡುವೆಯೂ ಅರ್ಜುನ್ ತೆಂಡೂಲ್ಕರ್ ಭರ್ಜರಿ ಆಟವಾಡಿದ್ದಾರೆ.
ದೇಶೀ ಪಂದ್ಯಗಳಲ್ಲಿ ಆಗೊಮ್ಮೆ ಈಗೊಮ್ಮೆ ವಿಕೆಟ್ ಕೀಳುತ್ತಿದ್ದ ಅರ್ಜುನ್ ತೆಂಡೂಲ್ಕರ್ ಇದೀಗ ರಣಜಿ ಪಂದ್ಯದಲ್ಲಿ ಭರ್ಜರಿ ಬೇಟೆಯಾಡಿದ್ದಾರೆ. ಆರುಣಾಚಲ ಪ್ರದೇಶ ತಂಡ ಗೋವಾ ವಿರುದ್ಧ 84 ರನ್ ಗೆ ಆಲೌಟ್ ಆಗಿದೆ. ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್ ಸಾಧನೆ9 ಓವರ್ ಗಳಲ್ಲಿ 5 ವಿಕೆಟ್. ಅರ್ಜುನ್ ತೆಂಡೂಲ್ಕರ್ ಎಡಗೈ ಮಧ್ಯಮ ವೇಗದ ಬೌಲರ್. ಅರ್ಜುನ್ ಬೌಲಿಂಗ್ಗೆ ಅರುಣಾಚಲ ಪ್ರದೇಶದ ಆಟಗಾರರು ತತ್ತರಿಸಿ ಹೋಗಿದ್ದಾರೆ. ರಣಜಿ ಕ್ರಿಕೆಟ್ನಲ್ಲಿ ಇದು 17ನೇ ಪಂದ್ಯವಾಗಿದ್ದರೂ, ಅರ್ಜುನ್ ತೆಂಡೂಲ್ಕರ್ ಅವರಿಗೆ ಇದು ಮೊದಲ 5 ವಿಕೆಟ್ ಸಾಧನೆ ಎನ್ನುವುದು ಇನ್ನೊಂದು ವಿಶೇಷ. 9 ಓವರ್ ಬೌಲಿಂಗ್ ಮಾಡಿದ ಅರ್ಜುನ್, 3 ಓವರ್ ಮೇಡನ್ ಕೊಟ್ಟಿದ್ದಾರೆ.
ಅರ್ಜುನ್ ತೆಂಡೂಲ್ಕರ್ಗೆ ಒಳ್ಳೆಯ ಸಾಥ್ ನೀಡಿದ ಮೋಹಿತ್ ರೇಡ್ಕರ್ (15ಕ್ಕೆ 3 ವಿಕೆಟ್) ಹಾಗೂ ಕೀತ್ ಮಾರ್ಕ್ ಪಿಂಟೋ (31ಕ್ಕೆ 2 ವಿಕೆಟ್) ವಿಕೆಟ್ ಪಡೆದಿದ್ದಾರೆ. ಇದಕ್ಕೂ ಮುನ್ನ 16 ಪಂದ್ಯಗಳಲ್ಲಿ ಅರ್ಜುನ್ ತೆಂಡೂಲ್ಕರ್ 32 ವಿಕೆಟ್ ಪಡೆದಿದ್ದರು. 49ಕ್ಕೆ 4 ವಿಕೆಟ್ ಅತ್ಯುತ್ತಮ ಸಾಧನೆಯಾಗಿತ್ತು. ಅರ್ಜುನ್ ತೆಂಡೂಲ್ಕರ್ ಕೇವಲ ಬೌಲರ್ ಅಲ್ಲ, ಆಲ್ರೌಂಡರ್ ಆಗಿದ್ದು, ಇದುವರೆಗೆ 16 ಪಂದ್ಯಗಳಲ್ಲಿ ಒಂದು ಶತಕ ಹಾಗೂ ಎರಡು ಅರ್ಧ ಶತಕ ಸಿಡಿಸಿ 532 ರನ್ ಗಳಿಸಿದ್ದಾರೆ.
ಇದನ್ನು ಓದಿ : ಚಾಂಪಿಯನ್ಸ್ ಟ್ರೋಫಿ ಕೈತಪ್ಪಿದರೆ ಪಾಕಿಸ್ತಾನಕ್ಕೆ 54,90,00,00,00 ನಷ್ಟ
ಅರ್ಜುನ್ ತೆಂಡೂಲ್ಕರ್ ಅವರ ಈ ಸಾಧನೆ ಐಪಿಎಲ್ ಪ್ರಾಯೋಜಕರ ಗಮನವನ್ನೂ ಸೆಳೆದಿದೆ. ಕಳೆದ ಸೀಸನ್ ನಲ್ಲಿ ಅವರು ಮುಂಬೈ ಇಂಡಿಯನ್ಸ್ ಪರ ಆಡಿದ್ದರು. ಆದರೆ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಮುಂಬೈನವರು 20 ಲಕ್ಷದ ಮೂಲಬೆಲೆಗೆ ಅರ್ಜುನ್ ಅವರನ್ನು ಖರೀದಿ ಮಾಡಿದ್ದರು. ಇದೀಗ ಅವರು ಉತ್ತಮ ಲಯದಲ್ಲಿರುವಂತೆ ಕಂಡುಬಂದಿರುವುದರಿಂದ ಫ್ರಾಂಚೈಸಿಗಳು 25ರ ಹರೆಯದ ಎಡಗೈ ವೇಗಿಯನ್ನು ಖರೀದಿಸಲು ಉತ್ಸಾಹ ತೋರಬಲ್ಲುದು ಎಂಬ ನಿರೀಕ್ಷೆಯಿದೆ. ಗೋವಾಗೆ ಪ್ಲೇಟ್ ಗ್ರೂಪಿನಲ್ಲಿ ಇನ್ನೂ 2 ಪಂದ್ಯಗಳನ್ನು ಆಡಲು ಬಾಕಿ ಇದೆ. ಹೀಗಾಗಿ ಅರ್ಜುನ್ ಅವರು ಆ ಪಂದ್ಯಗಳಲ್ಲಿ ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದರ ಮೇಲೆ ಐಪಿಎಲ್ ಹರಾಜಿನಲ್ಲಿ ಅರ್ಜುನ್ ಅವರಿಗೆ ಐಪಿಎಲ್ ಡಿಮ್ಯಾಂಡ್ ನಿರ್ಧಾರ ಆಗಲಿದೆ.
ಗೋವಾದಲ್ಲಿ ನಡೆಯುತ್ತಿರುವ ಪ್ಲೇಟ್ ಲೀಗ್ ಹಂತದ ಪಂದ್ಯದಲ್ಲಿ ಟಾಸ್ ಗೆದ್ದ ಅರುಣಾಚಲ ಪ್ರದೇಶ ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ವೇಗಿ ಅರ್ಜುನ್ ತೆಂಡೂಲ್ಕರ್, ಸ್ಪಿನ್ನರ್ ಗಳಾದ ಕೀತ್ ಪಿಂಟೋ ಮತ್ತು ಮೋಹಿತ್ ರೇಡ್ಕರ್ ದಾಳಿಯನ್ನು ತಾಳಲಾರದೆ 30.3 ಓವರ್ ಗಳಲ್ಲಿ 84 ರನ್ ಗಳಿಗೆ ಆಲೌಟ್ ಆಯಿತು. ಇದಕ್ಕುತ್ತರವಾಗಿ ಪ್ರಥಮ ಇನ್ನಿಂಗ್ಲ್ ಆರಂಭಿಸಿರುವ ಗೋವಾ ತಂಡ ಆರಂಭಿಕ ಸುಯಶ್ ಪ್ರಭುದೇಸಾಯಿ(73) ಮತ್ತು ಕಶ್ಯಪ್ ಬಾಕ್ಲೆ (ಅಜೇಯ 86) ಅವರ ಅಜೇಯ ಅರ್ಧಶತಕಗಳ ನೆರವಿನಿಂದ 2 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿದೆ. ಒಟ್ಟಾರೆ ಗೋವಾ 122 ರನ್ ಗಳ ಮುನ್ನಡೆಯಲ್ಲಿದೆ.