ನವದೆಹಲಿ: ಹಾಸನದಲ್ಲಿ ಡಿಸೆಂಬರ್ 5ರಂದು ಕಾಂಗ್ರೆಸ್ ಪಕ್ಷ ಹಾಗೂ ಹಿಂದುಳಿದ ವರ್ಗಗಳ ಒಕ್ಕೂಟದ ಆಶ್ರಯದಲ್ಲಿ ಸ್ವಾಭಿಮಾನಿ ಸಮಾವೇಶ ಅಯೋಜಿಸಲಾಗಿದೆ. ಸಮಾವೇಶಕ್ಕೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರನ್ನೂ ಸಂಘಟಕರು ಆಹ್ವಾನಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ದೆಹಲಿಯಲ್ಲಿಂದ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಮಾವೇಶ ಕುರಿತಂತೆ ಹೈಕಮಾಂಡ್ ಗೆ ಅನಾಮಧೇಯ ಪತ್ರ ಹೋಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಖರ್ಗೆ ಅವರೂ ಈ ಬಗ್ಗೆ ಚರ್ಚೆ ಮಾಡಲಿಲ್ಲ ಎಂದರು.
ಇನ್ನೂ ಇದೇ ವೇಳೆ ಸಂಪುಟ ಪುನರ್ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಸಂಪುಟ ಪುನಾರಚನೆ, ವಿಸ್ತರಣೆ ಕುರಿತಂತೆ ನಾನು ರಾಹುಲ್ ಗಾಂಧಿಯವರು ಅಥವಾ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಚರ್ಚೆ ಮಾಡಿಲ್ಲ. ನಾಗೇಂದ್ರ ಅವರು ಸಂಪುಟಕ್ಕೆ ಸೇರ್ಪಡೆ ಆಗಲಿದ್ದಾರೆ. ಆದರೆ ಈಗಲೇ ಅಲ್ಲ ಎಂದರು.