ನ್ಯೂಯಾರ್ಕ್:ಅಮೆರಿಕದ ಫ್ಲೋರಿಡಾದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಪಿಜ್ಜಾ ಡೆಲಿವರಿ ಕೊಡಲು ಬಂದ ಮಹಿಳೆಯೊಬ್ಬಳು ತನಗೆ ಸರಿಯಾದ ಟಿಪ್ಸ್ ನೀಡಿಲ್ಲ ಎಂಬ ಕಾರಣಕ್ಕೆ ಗರ್ಭಿಣಿ ಮಹಿಳೆಯ ಮೇಲೆ ಹದಿನಾಲ್ಕು ಬಾರಿ ಚಾಕುವಿನಿಂದ ಇರಿದ ಘಟನೆ ನಡೆದಿದ್ದು ಘಟನೆಗೆ ಸಂಬಂಧಿಸಿ ಪಿಜ್ಜಾ ಡೆಲಿವರಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದು, ಇನ್ನೋರ್ವ ಆರೋಪಿಯ ಪತ್ತೆಗೆ ಹುಡುಕಾಟ ನಡೆಸುತ್ತಿದ್ದಾರೆ.
ಕೇವಲ 170 ಟಿಪ್ಸ್ ಕೊಟ್ಟರು ಎಂದು ಗರ್ಭಿಣಿಗೆ ಪಿಜ್ಜಾ ಡೆಲಿವರಿ ಕೆಲಸಗಾರ್ತಿ ಚಾಕುವಿನಿಂದ 14 ಬಾರಿ ಇರಿದಿರುವ ಘಟನೆ ಅಮೆರಿಕದ ಫ್ಲೋರಿಡಾದಲ್ಲಿ ನಡೆದಿದೆ.ಬಂಧಿತ ಮಹಿಳೆಯನ್ನು ಬ್ರಿಯಾನ್ನಾ ಅಲ್ವೆಲೋ(22) ಎಂದು ಗುರುತಿಸಲಾಗಿದೆ.
ಏನಿದು ಘಟನೆ:
ಕಳೆದ ಭಾನುವಾರ(ಡಿ.22) ಫ್ಲೋರಿಡಾದ ಹೋಟೆಲ್ ಒಂದರಲ್ಲಿಸಂತ್ರಸ್ತ ಮಹಿಳೆ ಕುಟುಂಬದವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದರು. ಅದಕ್ಕಾಗಿ ಪಿಜ್ಜಾ ಆರ್ಡರ್ ಮಾಡಿದ್ದರು. ಆರ್ಡರ್ ಮಾಡಿದ ಕೆಲ ಹೊತ್ತಿನಲ್ಲೇ ಪಿಜ್ಜಾ ಡೆಲಿವರಿ ಮಹಿಳೆ ಹೋಟೆಲ್ ಗೆ ಬಂದು ಪಿಜ್ಜಾ ಡೆಲಿವರಿ ಮಾಡಿದ್ದಾಳೆ. ಈ ವೇಳೆ ಹೋಟೆಲ್ ನಲ್ಲಿ ತಂಗಿದ್ದ ಮಹಿಳೆ ಡೆಲಿವರಿ ಮಹಿಳೆಗೆ ಟಿಪ್ಸ್ ಎಂದು ಸಣ್ಣ ಮೊತ್ತ ನೀಡಿದ್ದಾರೆ ಇದು ಆಕೆಗೆ ಕಡಿಮೆ ಆಯಿತೆಂದು ಹೆಚ್ಚು ಕೊಡುವಂತೆ ಕೇಳಿಕೊಂಡಿದ್ದಾಳೆ ಆದರೆ ಮಹಿಳೆ ಕೊಡಲು ಒಪ್ಪಲಿಲ್ಲ, ಇದರಿಂದ ಕೋಪಗೊಂಡ ಡೆಲಿವರಿ ಮಹಿಳೆ ಸಿಟ್ಟಿನಿಂದ ಅಲ್ಲಿಂದ ಹೊರಡುತ್ತಾಳೆ.
ರಾತ್ರಿ ಸುಮಾರು ಹತ್ತು ಗಂಟೆಯ ಸುಮಾರಿಗೆ ತನ್ನಮುಸುಕುಧಾರಿ ಸಹಚರನೊಂದಿಗೆ ಹಿಂದಿರುಗಿ ಮಹಿಳೆ ಇರುವ ಹೋಟೆಲ್ ಗೆ ಚಾಕು ಸಹಿತ ಬಂದು ಹೋಟೆಲ್ ಬೆಲ್ ಒತ್ತಿ ಮಹಿಳೆ ಬಾಗಿಲು ತೆರೆಯುತ್ತಿದ್ದಂತೆ ಚಾಕುವಿನಿಂದ ಗರ್ಭಿಣಿ ಮಹಿಳೆಗೆ ಮನಬಂದಂತೆ ಚುಚ್ಚಿ ಸ್ಥಳದಿಂದ ಪರಾರಿಯಾಗುತ್ತಾರೆ.
ದಾಳಿಯ ಸಮಯದಲ್ಲಿ ಸಂತ್ರಸ್ತ ಮಹಿಳೆ, ಆಕೆಯ ಗಂಡ ಮತ್ತು ಆಕೆಯ 5 ವರ್ಷದ ಮಗಳು ಹೋಟೆಲ್ ಕೋಣೆಯಲ್ಲಿದ್ದರು. ಗರ್ಭಿಣಿ ಮಹಿಳೆ ತನ್ನ ಐದು ವರ್ಷದ ಮಗಳನ್ನು ದಾಳಿಕೋರರಿಂದ ರಕ್ಷಿಸಲು ಯತ್ನಿಸುತ್ತಾಳೆ ಆದರೆ ದಾಳಿಕೋರರು ಆಕೆಯ ಬೆನ್ನಿನ ಮೇಲೂ ಹಲ್ಲೆ ನಡೆಸಿದ್ದಾರೆ. ಬಳಿಕ ಸಹಾಯಕ್ಕಾಗಿ ಕರೆ ಮಾಡಲು ಪ್ರಯತ್ನಿಸಿದ್ದಾಳೆ ಆದರೆ ಆರೋಪಿ ಅಲ್ವೆಲೋ ಮಹಿಳೆಯ ಕೈಯಿಂದ ಫೋನ್ ಅನ್ನು ಕಿತ್ತುಕೊಂಡು ಪರಾರಿಯಾಗುತ್ತಾಳೆ.
ಗರ್ಭಿಣಿಗೆ 14 ಬಾರಿ ಇರಿದು ಹಲ್ಲೆ ನಡೆಸಿದ್ದಾಳೆ. ವಿಷಯ ತಿಳಿದು ಪೊಲೀಸರು ಆಗಮಿಸುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದಾರೆ. ಗಾಯಾಳು ಗರ್ಭಿಣಿಯನ್ನು ಹತ್ತಿರದ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧಾರದಲ್ಲಿ ಪ್ರಮುಖ ಆರೋಪಿ ಬ್ರಿಯಾನ್ನಾ ಅಲ್ವೆಲೋ ನನ್ನು ಬಂಧಿಸಿದ್ದು, ಕೊಲೆಯ ಯತ್ನ, ಬಂದೂಕಿನಿಂದ ಮನೆ ಮೇಲೆ ಆಕ್ರಮಣ ಕೇಸ್ ದಾಖಲಿಸಲಾಗಿದೆ. ಆಕೆಯನ್ನು ಬಾಂಡ್ ಇಲ್ಲದೆ ಓಸ್ಸಿಯೋಲಾ ಕೌಂಟಿ ಜೈಲಿನಲ್ಲಿ ಇರಿಸಲಾಗಿದೆ. ಸಹಚರ ತಲೆಮರೆಸಿಕೊಂಡಿದ್ದು ಆತನ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.