ಕಲಬುರಗಿ : ನೀವು ಕಾಂಗ್ರೆಸ್ ಗೆ ಮತ ಹಾಕಲು ಬರದೇ ಇದ್ದರೂ ಪರವಾಗಿಲ್ಲ. ನಾನು ಸತ್ತ ಮೇಲೆ ನನ್ನ ಅಂತ್ಯಸಂಸ್ಕಾರಕ್ಕಾದರೂ ಬನ್ನಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಅವರು ತಮ್ಮ ತವರು ಜಿಲ್ಲೆ ಕಲಬುರಗಿಯಲ್ಲಿ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಕಲಬುರಗಿ ಅಫಜಲ್ಪುರ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಗೆ ಮತ ಹಾಕಲು ಬಯಸದಿದ್ದರೂ ಪರವಾಗಿಲ್ಲ.
ನಾನು ಸತ್ತರೆ ನಮ್ಮ ಕೆಲಸಗಳನ್ನು ನೆನಪು ಮಾಡಿಕೊಂಡು ಮಣ್ಣು ಹಾಕಲು ಬನ್ನಿ. ಸತ್ತಾಗ ಸುಟ್ಟರೇ ಮೇಣದ ಬತ್ತಿ ಹಚ್ಚಲು ಬನ್ನಿ, ನನ್ನ ಹೂಳಿದ್ರೆ ಒಂದು ಹಿಡಿ ಮಣ್ಣು ಹಾಕಲಾದ್ರೂ ಬನ್ನಿ. ಆಗ ಜನರು ನೋಡಪ್ಪ ಆತನ ಅಂತ್ಯಕ್ರಿಯೆಗೆ ಎಷ್ಟು ಜನ ಬಂದರೂ ಅಂತ ಮಾತಾಡಿಕೊಳ್ಳುತ್ತಾರೆ ಎಂದು ಭಾವುಕರಾದರು. ನೀವು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕದಿದ್ದರೆ ಕಲಬುರಗಿ ಜನರ ಮನಸಿನಲ್ಲಿ ನನಗೆ ಯಾವುದೇ ಸ್ಥಾನವಿಲ್ಲ ಎಂದು ಭಾವಿಸುತ್ತೇನೆ. ಕಲಬುರಗಿಯಲ್ಲಿ ಬಿಜೆಪಿಯ ಹಾಲಿ ಸಂಸದ ಉಮೇಶ್ ಜಾಧವ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರನ್ನು ಕಣಕ್ಕಿಳಿಸಲಾಗಿದೆ.