ವಾಯು ಮಾಲಿನ್ಯವನ್ನು ತಗ್ಗಿಸಲು ದೆಹಲಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಜುಲೈ 1ರಿಂದ ದೆಹಲಿಯಲ್ಲಿ 10 ವರ್ಷಕ್ಕಿಂತ ಹಳೆಯ ಡೀಸೆಲ್ ವಾಹನಗಳು ಮತ್ತು 15 ವರ್ಷಕ್ಕಿಂತ ಹಳೆಯ ಪೆಟ್ರೋಲ್ ವಾಹನಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟವನ್ನು ನಿಷೇಧಿಸಲಾಗಿದೆ. ಈ ನಿರ್ಧಾರದಿಂದ ದೆಹಲಿಯ ವಾಯು ಗುಣಮಟ್ಟದಲ್ಲಿ ಪ್ರಮುಖ ಸುಧಾರಣೆ ತರಲು ಸರ್ಕಾರ ದಿಡ್ಡ ನಿರ್ಧಾರ ಕೈಗೊಂಡಿದೆ.
ಈ ನಿಟ್ಟಿನಲ್ಲಿ, ಜೂನ್ 30ರೊಳಗೆ ದೆಹಲಿಯ ಎಲ್ಲ ಪೆಟ್ರೋಲ್ ಪಂಪ್‌ಗಳಲ್ಲಿ ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ (ANPR) ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಈ ಅತ್ಯಾಧುನಿಕ ಕ್ಯಾಮೆರಾಗಳು ವಾಹನಗಳ ನಂಬರ್ ಪ್ಲೇಟ್ ಅನ್ನು ಸ್ಕ್ಯಾನ್ ಮಾಡಿ, ಅವುಗಳ ವಯಸ್ಸು ಪರಿಶೀಲಿಸುತ್ತವೆ. ಹಳೆಯ ವಾಹನಗಳಾಗಿದ್ದರೆ, ತಕ್ಷಣವಾಗಿ ಪೆಟ್ರೋಲ್ ಅಥವಾ ಡೀಸೆಲ್ ಪೂರೈಕೆಯನ್ನು ನಿರಾಕರಿಸಲಾಗುವುದು.
ವಾಯು ಗುಣಮಟ್ಟ ನಿರ್ವಹಣಾ ಸಮಿತಿ (CAQM) ಈ ಕ್ರಮವನ್ನು ಮುಂದಾಳತ್ವ ವಹಿಸಿದೆ. ಸದ್ಯದಲ್ಲಿಯೇ ದೆಹಲಿಯಲ್ಲಿ ಮಾತ್ರವಲ್ಲ, ಗುರುಗ್ರಾಮ್, ಫರಿದಾಬಾದ್, ಗಾಜಿಯಾಬಾದ್, ಗೌತಮ್ ಬುದ್ಧ ನಗರ ಮತ್ತು ಸೋನಿಪತ್ ಸೇರಿದಂತೆ ಇತರ ಜಿಲ್ಲೆಗಳಲ್ಲಿಯೂ ಈ ನಿಯಮ ಜಾರಿಗೆ ಬರಲಿದೆ. ಈ ಜಿಲ್ಲೆಗಳ ಪೆಟ್ರೋಲ್ ಪಂಪ್‌ಗಳಲ್ಲಿ ಅಕ್ಟೋಬರ್ 31ರೊಳಗೆ ANPR ಕ್ಯಾಮೆರಾ ಅಳವಡಿಸಲಾಗುವುದು ಮತ್ತು ನವೆಂಬರ್ 1ರಿಂದ ಹಳೆಯ ವಾಹನಗಳಿಗೆ ಇಂಧನ ನಿಷೇಧ ಜಾರಿಗೆ ಬರುತ್ತದೆ. NCR ಭಾಗದ ಉಳಿದ ಜಿಲ್ಲೆಗಳಿಗೆ 2026ರ ಮಾರ್ಚ್ 31ರೊಳಗೆ ಈ ವ್ಯವಸ್ಥೆ ಅನಿವಾರ್ಯವಾಗಲಿದೆ.
ಈ ಕ್ರಮದ ಭಾಗವಾಗಿ, ದೆಹಲಿಯಲ್ಲಿ ಈಗಾಗಲೇ 27.5 ಲಕ್ಷಕ್ಕೂ ಹೆಚ್ಚು ಹಳೆಯ ವಾಹನಗಳು ದಾಖಲಾಗಿವೆ. ಉತ್ತರ ಪ್ರದೇಶದಲ್ಲಿ 61 ಲಕ್ಷಕ್ಕೂ ಹೆಚ್ಚು ಮತ್ತು ಹರಿಯಾಣದಲ್ಲಿ 22 ಲಕ್ಷಕ್ಕೂ ಹೆಚ್ಚು ಹಳೆಯ ವಾಹನಗಳಿವೆ. ಇವುಗಳ ಮೇಲೆ ಕಠಿಣ ನಿಗಾವಹಿಸಲು ಎಲ್ಲಾ ಸರ್ಕಾರಿ ಇಲಾಖೆಗಳಿಗೆ ಆದೇಶಿಸಲಾಗಿದೆ. ಮಾಸಿಕ ಪ್ರಗತಿ ವರದಿಗಳನ್ನು CAQMಗೆ ಸಲ್ಲಿಸುವುದು ಕಡ್ಡಾಯವಾಗಿದೆ.
ಜೀವಿತಾವಧಿ ಮುಗಿದ ವಾಹನಗಳು (End of Life Vehicles – EOL) ಎಂದರೆ 10 ವರ್ಷಕ್ಕಿಂತ ಹಳೆಯ ಡೀಸೆಲ್ ಹಾಗೂ 15 ವರ್ಷಕ್ಕಿಂತ ಹಳೆಯ ಪೆಟ್ರೋಲ್ ವಾಹನಗಳು. ಇಂತಹ ವಾಹನಗಳು ದೆಹಲಿಯ ವಾಯು ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿವೆ. ಇದೀಗ ಈ ವಾಹನಗಳ ವಿರುದ್ಧ ಕಟ್ಟುನಿಟ್ಟಾದ ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ. ಸಂಚಾರ ಮೇಲ್ವಿಚಾರಣಾ ವ್ಯವಸ್ಥೆಗಳ ಮೂಲಕ ರಸ್ತೆಯಲ್ಲಿ ಓಡಾಡುತ್ತಿರುವ ಹಳೆಯ ವಾಹನಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಲಾಗುವುದು.
ಹಳೆಯ ವಾಹನಗಳನ್ನು ಮಾತ್ರವಲ್ಲದೆ, ಮಾಲಿನ್ಯ ಪ್ರಮಾಣಪತ್ರ (PUC) ಇಲ್ಲದ ವಾಹನಗಳಿಗೂ ಈ ನಿಯಮ ಅನ್ವಯವಾಗುತ್ತದೆ. ಕ್ಯಾಮೆರಾಗಳನ್ನು ವಾಹನಗಳ ಡೇಟಾಬೇಸ್‌ಗೆ ಲಿಂಕ್ ಮಾಡಲಾಗಿದ್ದು, ನಿಯಮವನ್ನು ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಹಾಯವಾಗುತ್ತದೆ.
ಈ ನಿರ್ಧಾರದಿಂದಾಗಿ ದೆಹಲಿಯ ವಾಯು ಗುಣಮಟ್ಟ ಸುಧಾರಣೆಗೊಳ್ಳುವ ನಿರೀಕ್ಷೆಯಿದ್ದು, ನಾಗರಿಕರ ಆರೋಗ್ಯದ ಮೇಲೆಯೂ ಉತ್ತಮ ಪರಿಣಾಮ ಬೀರುವ ಸಾಧ್ಯತೆ ಇದೆ. ದೆಹಲಿಯ ಗಾಳಿ ಮತ್ತೆ ಶುದ್ಧವಾಗಿ, ಶ್ವಾಸಕೋಶ ರೋಗಗಳ ಪ್ರಮಾಣ ಕಡಿಮೆಯಾಗುವ ನಿರೀಕ್ಷೆ ಇದೆ.