ದೇಶದಲ್ಲಿ ಲೋಕಸಭಾ ಚುನಾವಣೆಯ ಪ್ರಚಾರದ ಕಾವು ಪಡೆದುಕೊಳ್ಳುತ್ತಿದೆ. ಇತ್ತ ಹೈವೋಲ್ಟೇಜ್ ಕ್ಷೇತ್ರ ಬೆಳಗಾವಿಯಲ್ಲಿ ಜಾತಿ ವಿಚಾರದಲ್ಲಿ ಜಟಾಪಟಿ ಶುರುವಾಗಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಸ್ಪರ್ಧೆ ಮಾಡುತ್ತಿದ್ದಾರೆ. ಪುತ್ರನನ್ನ ಗೆಲ್ಲಿಸಿಕೊಂಡು ಬರಲು ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದಲ್ಲೇ ಬೀಡು ಬಿಟ್ಟು, ಬೇಕಾದ ತಂತ್ರಗಳನ್ನ ಹೆಣೆಯುತ್ತಿದ್ದಾರೆ. ಈ ಮಧ್ಯೆ ಮಾಜಿ ಸಚಿವ ಬಿಜೆಪಿ ನಾಯಕ ಮುರುಗೇಶ್ ನಿರಾಣಿಯ ಒಂದು ಹೇಳಿಕೆ ಈಗ ವಿವಾದದ ಸ್ವರೂಪ ಪಡೆದುಕೊಂಡಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಸೇರಿಲ್ಲ ಅಂತ ಆರೋಪ ಮಾಡಿದ್ದಾರೆ. ಈ ಮೂಲಕ ಪಂಚಮಸಾಲಿ ಸಮುದಾಯವೇ ಹೆಚ್ಚಿರುವ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಹೊಸ ದಾಳ ಉರುಳಿಸಿದ್ದಾರೆ. ಮದುವೆಗೆ ಮುನ್ನ ಲಕ್ಷ್ಮೀ ಹಟ್ಟಿಹೊಳಿಯಾಗಿದ್ದ ಅವರು ಹಿಂದೂ ಪರಂಪರೆಯಂತೆ ಈಗ ಅವರು ಮತ್ತು ಅವರ ಮಕ್ಕಳು ರವೀಂದ್ರ ಹೆಬ್ಬಾಳ್ಕರ್ ಸಮುದಾಯಕ್ಕೆ ಸೇರುತ್ತಾರೆ.
ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಪಂಚಮಸಾಲಿ ಸಮುದಾಯದ ಮತಗಳನ್ನು ಸೆಳೆಯಲು ಲಕ್ಷ್ಮಿ ಅಪ್ಪಟ ಸುಳ್ಳು ಹೇಳುತ್ತಿದ್ದಾರೆ. ಮೃಣಾಲ್ ಪಂಚಮಸಾಲಿ ಆಗಲು ಸಾಧ್ಯವೇ ಇಲ್ಲ ಅಂತ ಮುರುಗೇಶ್ ನಿರಾಣಿ ಸವಾಲು ಹಾಕಿದರು. ನಿರಾಣಿ ಮಾತಿಗೆ ತಿರುಗೇಟು ನೀಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನನ್ನ ದೇಹದಲ್ಲಿ ಹರಿಯುತ್ತಿರುವುದು ಪಂಚಮಸಾಲಿ ರಕ್ತ. ಚುನಾವಣೆಗಾಗಿ ನನ್ನ ಜಾತಿ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಿಸುತ್ತಿದ್ದಾರೆ ಅಂತ ಕಿಡಿಕಾರಿದ್ದಾರೆ.