ಬೆಂಗಳೂರು : ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಎಲ್ಲಿದೆ? ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಎನ್.ಡಿ.ಎ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ. ಬೆಂಗಳೂರಿನ ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ ಕಾಲೇಜಿನ ಕ್ಯಾಂಪಸ್ನಲ್ಲಿ ಆದ ದುರ್ಘಟನೆ ನಮ್ಮೆಲ್ಲರನ್ನು ಬೆಚ್ಚಿಬೀಳಿಸಿದೆ. ಬೇರೆ ಯಾವುದೋ ರಾಜ್ಯದಲ್ಲಿ ಹೆಣ್ಮಕ್ಕಳನ್ನು ಹತ್ತಾರು ಬಾರಿ ಚುಚ್ಚಿ ಕೊಲ್ಲುವುದನ್ನು ಕೇಳಿದ್ದೆವು. ಆದರೆ, ಈಚಿನ ನಮಗ್ಯಾರಿಗೂ ಯೋಚಿಸಲಾಗದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ ಎಂದರು. ತನ್ನನ್ನು ಪ್ರೀತಿಸಿಲ್ಲ ಎಂಬ ಕಾರಣಕ್ಕಾಗಿ ಹಿಂದೂ ಹುಡುಗಿ ನೇಹಾಳನ್ನು ಅಲ್ಪಸಂಖ್ಯಾತ ಕೋಮಿನ ಹುಡುಗ ಕಾಲೇಜು ಕ್ಯಾಂಪಸ್ಸಿನೊಳಗೆ 9-10 ಬಾರಿ ಚುಚ್ಚಿ ಕೊಂದಿದ್ದಾನೆ. ಅವಳ ಹೊಟ್ಟೆಭಾಗ ಪೂರ್ತಿ ಹೊರಕ್ಕೆ ಬರುವ ರೀತಿಯಲ್ಲಿ ಭಯಾನಕವಾಗಿ ಕೊಲೆ ಮಾಡಿದ್ದಾನೆ.
ರಾಮನವಮಿಯ ದಿನ ಕಾರಿನಲ್ಲಿ ಭಗವಾಧ್ವಜ ಹಿಡಿದು ಹೋಗುತ್ತಿದ್ದ 3 ಜನ ಯುವಕರಿಗೆ, ಧ್ವಜ ಬಿಸಾಡಲು ಸೂಚಿಸಿದ್ದಲ್ಲದೆ, ಜೈ ಶ್ರೀರಾಂ ಎಂದು ಕೂಗದಂತೆ, ಹಾಗೂ ಅಲ್ಲಾ ಹು ಅಕ್ಬರ್ ಕೂಗುವಂತೆ ಧಮ್ಕಿ ಹಾಕಿದ್ದಾರೆ. ಕೊಡಗಿನ ಸಿದ್ದಾಪುರದಲ್ಲಿ ನಿನ್ನೆ ಮೈಸೂರಿನ ಅಭ್ಯರ್ಥಿ ಮಹಾರಾಜರ ಚುನಾವಣೆ ಪ್ರಚಾರದಲ್ಲಿ ನಮ್ಮ ಯುವಕರು ತೊಡಗಿಸಿಕೊಂಡಿದ್ದರು. ಬಳಿಕ ಪ್ರಚಾರ ಮುಗಿಸಿ ಹೋಗುತ್ತಿದ್ದವರ ಮೇಲೆ ಅಲ್ಪಸಂಖ್ಯಾತ ಕೋಮಿನ ಯುವಕ ಕಾರು ಹಾಯಿಸಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಇಬ್ಬರಿಗೆ ತೀವ್ರ ಗಾಯಗಳಾಗಿವೆ ಎಂದು ವಿವರಿಸಿದರು.ಸಿದ್ದರಾಮಯ್ಯನವರು 2013ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪಾಪ್ಯುಲರ್ ಫ್ರಂಟ್ನ (ಪಿಎಫ್ಐ) ಎಲ್ಲ ಕೇಸನ್ನೂ ವಾಪಸ್ ಪಡೆದಿದ್ದರು. ಸಮಾಜದ್ರೋಹಿಗಳು, ಭಯೋತ್ಪಾದಕರನ್ನು ರಸ್ತೆಗೆ ಬಿಟ್ಟರು ಎಂದು ಆರೋಪಿಸಿದರು. ಹತ್ತಾರು ನಮ್ಮ ಹಿಂದೂ ಯುವಕರ ಹತ್ಯೆ ಆಗಿತ್ತು ಅಂತ ಶೋಭಾ ಕರಂದ್ಲಾಜೆ ಆರೋಪಗಳ ಸುರಿಮಳೆಗೈದರು.