ಬೆಂಗಳೂರು : ಹೆಬ್ಬಾಳ ಮೇಲ್ಸೇತುವೆ ಬಳಿ ಹೊಸದಾಗಿ ಎರಡು ಹೊಸ ಟ್ರ್ಯಾಕ್ಗಳನ್ನ ನಿರ್ಮಿಸಲು ಬಿಡಿಎ ಮುಂದಾಗಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಾಮಗಾರಿ ಕೈಗೆತ್ತಿಕೊಂಡಿದ್ದು, ಕೆಆರ್ ಪುರ ಸಂಪರ್ಕಿಸುವ ಲೂಪ್ನಲ್ಲಿ ದ್ವಿಚಕ್ರ ವಾಹನ ಹೊರತುಪಡಿಸಿ ಇನ್ನುಳಿದ ಬೇರೆಲ್ಲ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿರುವ ಸಂಚಾರ ಪೊಲೀಸರು, ಇದೇ ಏಪ್ರಿಲ್ 17ರಿಂದ ಮುಂದಿನ 6 ತಿಂಗಳಗಳವರೆಗೂ ಕಾಮಗಾರಿ ನಡೆಯಲಿದೆ. ಹೀಗಾಗಿ ಸಂಚಾರ ಪೊಲೀಸರು ಪರ್ಯಾಯ ಮಾರ್ಗ ಕಲ್ಪಿಸಿದ್ದಾರೆ.
ನಾಗವಾರ ಮಾರ್ಗದಿಂದ ಹೆಬ್ಬಾಳ ಮೇಲ್ಸೇತುವೆ ಕಡೆಗೆ ಬರುವ ವಾಹನಗಳ ಪೈಕಿ ದ್ವಿಚಕ್ರ ವಾಹನಗಳನ್ನ ಬಿಟ್ಟು ಉಳಿದೆಲ್ಲಾ ವಾಹನಗಳಿಗೆ ಕೆ.ಆರ್.ಪುರಂಗೆ ಹೋಗುವ ಲ್ಯಾಂಪ್ ಕ್ಲೋಸ್ ಮಾಡಲಾಗುತ್ತೆ. ನಾಗವಾರ ಮಾರ್ಗದಿಂದ ನಗರದ ಒಳಗೆ ಮೇಖ್ರಿ ಸರ್ಕಲ್ ಮೂಲಕ ಬರುತ್ತಿದ್ದ ವಾಹನಗಳ ಚಾಲಕರು ಹೆಬ್ಬಾಳ ಸರ್ಕಲ್ನಲ್ಲಿ ಮೇಲ್ಸೇತುವೆ ಕೆಳಗಿನಿಂದ ಬಲ ತಿರುವು ಪಡೆದು – ಕೊಡಿಗೆಹಳ್ಳಿ ಜಂಕ್ಷನ್ ಬಳಿಯೂ ಟರ್ನ್ ತೆಗೆದುಕೊಂಡು – ಸರ್ವಿಸ್ ರಸ್ತೆಯಿಂದ ಹೆಬ್ಬಾಳ ಫ್ಲೈಓವರ್ನ ರಾಂಪ್ ಮುಖಾಂತರ ನಗರದ ಕಡೆಗೆ ಚಲಿಸಲು ಸೂಚಿಸಲಾಗಿದೆ.
ಕೆ.ಆರ್.ಪುರ, ನಾಗವಾರ ಮಾರ್ಗದಿಂದ ಬೆಂಗಳೂರು ನಗರ ಪ್ರವೇಶಿಸುವ, ವಾಹನಗಳ ಚಾಲಕರು ಪರ್ಯಾಯ ಮಾರ್ಗಗಳಾದ ಐಒಸಿ-ಮುಕುಂದ ಥಿಯೇಟರ್ ರಸ್ತೆ, ಲಿಂಗರಾಜಪುರ ಮೇಲ್ಸೇತುವೆ ಮಾರ್ಗ – ನಾಗವಾರ ಟ್ಯಾನರಿ ರಸ್ತೆ ಮಾರ್ಗವಾಗಿ ನಗರ ಪ್ರವೇಶಿಸಲು ಸೂಚಿಸಲಾಗಿದೆ. ಹೆಗಡೆ ನಗರ – ಥಣಿಸಂದ್ರ ಕಡೆಯಿಂದ ಬರುವ ವಾಹನ ಚಾಲಕರು ಜಿಕೆವಿಕೆ ಜಕ್ಕೂರೂ ರಸ್ತೆ ಮೂಲಕ ನಗರ ಪ್ರವೇಶಿಸಿಸಬಹುದು.
ಕೆ.ಆರ್.ಪುರಂ ಕಡೆಯಿಂದ ಹೆಬ್ಬಾಳ ಮಾರ್ಗವಾಗಿ ಯಶವಂತಪುರ ಕಡೆಗೆ ಚಲಿಸುವ ವಾಹನಗಳು ಹೆಬ್ಬಾಳ ಫ್ಲೈಓವರ್ ಕೆಳಗಡೆ ನೇರವಾಗಿ ಬಿ.ಇ.ಎಲ್ ಸರ್ಕಲ್ ತಲುಪಿ ಎಡ ತಿರುವು ಪಡೆದು ಸದಾಶಿವನಗರ ಜಂಕ್ಷನ್ನಲ್ಲಿ ಬಲ ತಿರುವು ಪಡೆದು ಐ.ಐ.ಎಸ್.ಸಿ. ಮುಖಾಂತರ ಚಲಿಸಬಹುದಾಗಿದೆ. ಕೆ.ಆರ್.ಪುರಂ, ಹೆಣ್ಣೂರು, ಹೆಚ್.ಆರ್.ಬಿ.ಆರ್.ಲೇಔಟ್, ಕೆ.ಜಿ.ಹಳ್ಳಿ, ಬಾಣಸವಾಡಿ ಕಡೆಗಳಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆ ಹೋಗಬಯಸುವ ವಾಹನಗಳು ಹೆಣ್ಣೂರು-ಬಾಗಲೂರು ರಸ್ತೆ ಬಳಸಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಬಹುದಾಗಿದೆ ಎಂದು ಸಂಚಾರ ವಿಭಾಗದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.