ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆ ಖಂಡಿಸಿ ರಾಜ್ಯ ಬಿಜೆಪಿ ನಾಳೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ.ಈ ಬಗ್ಗೆ ಪೋಸ್ಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆ ಅತ್ಯಂತ ಅಮಾನುಷ ಘಟನೆಯಾಗಿದೆ. ಇದನ್ನು ಪೋಲಿಸರು ಎಲ್ಲಾ ಮಗ್ಗಲುಗಳಿಂದಲೂ ತನಿಖೆ ನಡೆಸಬೇಕಾಗಿರುವುದು ಸಾರ್ವಜನಿಕರ ಆಗ್ರಹ. ಆದರೆ ಮುಖ್ಯಮಂತ್ರಿಗಳು, ಗೃಹ ಸಚಿವರು ಹಾಗೂ ಕೆಲ ಸಚಿವರು ಘಟನೆಯ ಕುರಿತು ಲಘುವಾಗಿ ಪ್ರತಿಕ್ರಿಯಿಸಿರುವುದು ನೋಡಿದರೆ ದುಷ್ಟರಿಗೆ ಹಾಗೂ ಹಿಂದೂ ಧರ್ಮದ ಕಂಟಕರಿಗೆ ಸರ್ಕಾರದ ಕೃಪಾಪೋಷಣೆಯ ಉದಾರತೆ ದೊರೆಯುತ್ತಿರುವುದು ಸ್ಪಷ್ಟವಾಗಿದೆ, ಅಲ್ಪಸಂಖ್ಯಾತರ ಓಲೈಕೆಯೇ ಈ ಸರ್ಕಾರದ ಆದ್ಯತೆಯಾಗಿದೆ ಎಂದು ಟೀಕಿಸಿದ್ದಾರೆ. ಭಾರತೀಯ ಜನತಾ ಪಾರ್ಟಿ ಸಿದ್ದಾಂತಕ್ಕಾಗಿ ಜನ್ಮ ತಾಳಿದ ಪಕ್ಷ , ನಮ್ಮ ಆದ್ಯತೆ ಏನಿದ್ದರೂ ‘ಧ್ಯೇಯ’ಕ್ಕೇ ಹೊರತು ಅಧಿಕಾರಕ್ಕಲ್ಲ, ಚುನಾವಣಾ ಕಾರ್ಯವನ್ನು ಬದಿಗಿರಿಸಿ ಏಪ್ರಿಲ್ 22 ರ ಸೋಮವಾರದಂದು ನಮ್ಮ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ರಾಜ್ಯಾದ್ಯಂತಬೀದಿಗಿಳಿದು ಹೋರಾಟ ನಡೆಸಲು ಕರೆ ನೀಡಲಾಗಿದೆ.