ಹುಬ್ಬಳ್ಳಿ: ಸಿಎಂ ಕುರ್ಚಿಗೆ ಸಿದ್ಧರಾಮಯ್ಯ ಫೆವಿಕಾಲ್ ಹಾಕಿ ಕೂತಿದ್ದಾರೆ. ಆದರೆ, ಕಾಂಗ್ರೆಸ್ ನಲ್ಲಿ ಸಿಎಂ, ಡಿಸಿಎಂ ಆಗಲು ತುದಿಗಾಲ ಮೇಲೆ ನಿಂತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಇದು ದೊಡ್ಡ ಸ್ವರೂಪ ಪಡೆದು ಈ ಸರ್ಕಾರ ಅವಧಿ ಪೂರ್ಣಗೊಳಿಸುವುದಿಲ್ಲ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಒಳ ಬೇಗುದಿ ಇದೆ. ಡಿಸಿಎಂ, ಸಿಎಂ ಆಗಲು ತುದಿಗಾಲ ಮೇಲೆ ನಿಂತಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಅವರು ಕುರ್ಚಿಗೆ ಫೆವಿಕಾಲ್ ಹಾಕಿಕೊಂಡು ಕುಳಿತಿದ್ದಾರೆ. ಫೆವಿಕಾಲ್ ಕಿತ್ತಿಕೊಳ್ಳಲು ಡಿಸಿಎಂ ಡಿ. ಕೆ. ಶಿವಕುಮಾರ್ ಪ್ರಯತ್ನಿಸುತ್ತಿದ್ದಾರೆ. ಎಲ್ಲವನ್ನು ಇವರಿಬ್ಬರೇ ಮಾಡಿದರೆ ನಮ್ಮದೇನು ಪಾತ್ರ ಅಂತ ಗೃಹ ಸಚಿವ ಪರಮೇಶ್ವರ್ ಗೆ ಬಂದಿದೆ. ಬರುವ ದಿನಗಳಲ್ಲಿ ಇದು ದೊಡ್ಡ ಸ್ವರೂಪ ಪಡೆಯುತ್ತದೆ. ಹೀಗಾಗಿ ಈ ಸರ್ಕಾರ ಅವಧಿಯನ್ನು ಪೂರ್ಣಗೊಳಿಸುವುದಿಲ್ಲ ಎಂದು ಭವಿಷ್ಯ ನುಡಿದರು.
ಜೀರೋ ಸರ್ಕಾರ
ಹಾಸನದಲ್ಲಿ ನಡೆದ ಕಾಂಗ್ರೆಸ್ ಜನ ಕಲ್ಯಾಣ ಉತ್ಸವದ ಕುರಿತು ಕೇಳಿದ ಪ್ರಶ್ನೆಗೆ ಯಾವ ಪುರುಷಾರ್ಥಕ್ಕೆ ಹಾಸನದಲ್ಲಿ ಸಮಾವೇಶ ಮಾಡಿದರು. ಜನಕಲ್ಯಾಣ ಮಾಡಲಿ ಅಂತ ಅವರಿಗೆ ಜನ ಅಧಿಕಾರ ಕೊಟ್ಟಿದ್ದಾರೆ. ಆದರೆ ಕಾಂಗ್ರೆಸ್ ನವರು ಜನಕಲ್ಯಾಣ ಮರೆತು ಸಮಾವೇಶದಲ್ಲಿ ಮುಳುಗಿದ್ದಾರೆ. ರಾಜ್ಯದ ಹಣಕಾಸನ್ನು ಇವರು ದಿವಾಳಿ ಮಾಡಿದ್ದಾರೆ. ರಾಜ್ಯದಲ್ಲಿ ಇರುವುದು ಜೀರೋ ಸರ್ಕಾರ. ಅಭಿವೃದ್ಧಿಯಲ್ಲಿ ಜೀರೋ, ಸಾಮಾಜಿಕ ನ್ಯಾಯಾಲಯದಲ್ಲಿ ಜೀರೋ, ಕಾನೂನು ವ್ಯವಸ್ಥೆ ಕಾಪಾಡುವಲ್ಲಿ ಜೀರೋ. ಹಣಕಾಸಿನ ದಿವಾಳಿ ಮಾಡಿ ಅಭಿವೃದ್ಧಿ ಶೂನ್ಯ ಮಾಡಿದೆ. ಹೆಜ್ಜೆ ಹೆಜ್ಜೆಗೂ ಹಗರಣಗಳನ್ನು ಮಾಡುತ್ತಿದೆ. ಕೋರ್ಟ್ ನಲ್ಲಿ ನಡೆಯುತ್ತಿರುವ ಕೇಸ್ ಮೇಲೆ ಪ್ರಭಾವ ಬೀರಲು ಸಮಾವೇಶ ಮಾಡಿದ್ದಾರೆ. ಸರ್ಕಾರಿ ದುಡ್ಡಿನಲ್ಲಿ ಸಮಾವೇಶ ಆಯೋಜನೆ ಮಾಡಿದ್ದಾರೆ.
ಅದೇ ದುಡ್ಡನ್ನು ಅಭಿವೃದ್ಧಿಗೆ ಬಳಕೆ ಮಾಡಬಹುದಿತ್ತು. ಸಮಾವೇಶ ಮಾಡಿಕೊಳ್ಳುವ ಮೂಲಕ ಸಿಎಂ ತಮಗೆ ಆನೆ ಬಲ ತುಂಬಿಕೊಳ್ಳುವುದಲ್ಲ. ಜನರಿಗೆ ಆನೆ ಬಲ ತುಂಬುವ ಕೆಲಸ ಆಗಬೇಕಿದೆ. ಅಸ್ಥಿರತೆಯಲ್ಲಿ ಸಿದ್ದರಾಮಯ್ಯ ಕಾಲ ದೂಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಿಎಂ ದೊಡ್ಡಾಟದ ಪ್ರಮುಖ ಪಾತ್ರಧಾರಿ
ವಕ್ಫ್ ವಿರುದ್ಧ ಬಿಜೆಪಿ ಹೋರಾಟ ನಾಟಕ ಎಂಬ ಸಿಎಂ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಸಿಎಂ ದೊಡ್ಡಾಟದ ಪ್ರಮುಖ ಪಾತ್ರಧಾರಿ, ವಿರೋಧಪಕ್ಷವಾಗಿ ಸರ್ಕಾರದ ತಪ್ಪುಗಳನ್ನು ಪ್ರಶ್ನಿಸುವುದು ನಮ್ಮ ಕೆಲಸ , ಸಿಎಂಗೆ ಮಾಡಲು ಬೇಕಾದಷ್ಟು ಕೆಲಸಗಳಿವೆ ಎಂದರು.
ಕೇಂದ್ರದಿಂದ 10 ಕೆಜಿ ಅಕ್ಕಿ ಕೊಟ್ಟಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂಬ ಸಿಎಂ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ 10 ಕೆಜಿ ಅಕ್ಕಿ ಕೊಡುತ್ತಿದ್ದೇವೆ ಅಂತ ನಾವೆಲ್ಲೂ ಹೇಳಿಲ್ಲ. ಕಾಂಗ್ರೆಸ್ ನವರೇ 10 ಕೆಜಿ ಕೊಡುವುದಾಗಿ ಹೇಳಿದ್ದರು. ಆದರೆ, ಒಂದಗಳು ಅಕ್ಕಿಯನ್ನೂ ರಾಜ ಸರ್ಕಾರ ಕೊಡುತ್ತಿಲ್ಲ. ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿದೆ ಅಂತ ಹೇಳಲು ಇವರಿಗೆ ನಾಚಿಕೆ ಎಂದು ಹೇಳಿದರು.
ಕೋರ್ ಕಮಿಟಿಯಲ್ಲಿ ಚರ್ಚೆ
ಬಿಜೆಪಿ ಬಣ ರಾಜಕಾರಣ ಸೇರಿದಂತೆ ಇತ್ಯಾದಿ ವಿಷಯಗಳು ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಯಾಗಲಿವೆ. ಈಗಾಗಲೇ ಸದಸ್ಯತ್ವ ಅಭಿಯಾನ ಮುಗಿಸಿದ್ದೇವೆ. ಸದಸ್ಯತ್ವ ಅಭಿಯಾನದ ನಂತರ ರಾಜಕೀಯವಾಗಿ ಹಲವಾರು ಬೆಳವಣಿಗೆಗಳು ನಡೆದಿವೆ. ಸಂಘಟನಾತ್ಮಕ ಬೆಳವಣಿಗೆ, ರಾಜಕೀಯ ಸ್ಥಿತಿಗತಿಗಳ ಕುರಿತು ಕೋರ್ ಕಮಿಟಿಯಲ್ಲಿ ಚರ್ಚಿಸುತ್ತೇವೆ. ಬಿಜೆಪಿಯ ಆಂತರಿಕ ವಿಚಾರಗಳೂ ಚರ್ಚೆಯಾಗಲಿವೆ ಎಂದರು.
ಉತ್ತರ ಕರ್ನಾಟಕ ಸಮಸ್ಯೆ ಚರ್ಚೆಯಾಗಲಿ
ಬೆಳಗಾವಿ ಅಧಿವೇಶನ ಸಹ ಆರಂಭವಾಗುತ್ತಿದೆ. ಅಧಿವೇಶನದಲ್ಲಿ ಯಾವ ಹಗರಣಗಳನ್ನು ಕೈಗೆತ್ತಿಕೊಳ್ಳಬೇಕೆಂಬ ಕುರಿತು ಚರ್ಚೆಯಾಗಲಿದೆ. ಉತ್ತರ ಕರ್ನಾಟಕದ ಸಮಸ್ಯೆ ಚರ್ಚಿಸಲೆಂದೇ ಬೆಳಗಾವಿ ಅಧಿವೇಶನ ಮಾಡಲಾಗುತ್ತದೆ. ಆ ರೀತಿ ನಡೆದುಕೊಳ್ಳುವ ಜವಾಬ್ದಾರಿ ಸರ್ಕಾರದ್ದು. ಆದರೆ ಕಾಂಗ್ರೆಸ್ ಸರ್ಕಾರ ಉತ್ತರ ಕರ್ನಾಟಕ ನೀರಾವರಿ ಯೋಜನೆ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಉತ್ತರ ಕರ್ನಾಟಕ ಸಮಸ್ಯೆಗಳು ಚರ್ಚಿಸುವ ನಿಟ್ಟಿನಲ್ಲಿ ಸದನ ಸಾಗಲಿ ಎಂದು ಹೇಳಿದರು.
ಸಂಸತ್ ಎದುರು ಉದ್ಯಮಿ ಅದಾನಿ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡಿದ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿಯೇ ಅದಾನಿ ಜೊತೆ ವ್ಯವಹಾರ ಮಾಡಲಾಗಿದೆ. ಅದರ ಬಗ್ಗೆ ಕಾಂಗ್ರೆಸ್ ಮೊದಲು ಸ್ಪಷ್ಟೀಕರಣ ಕೊಡಲಿ ಎಂದು ತಿರುಗೇಟು ನೀಡಿದರು.