ಬೆಂಗಳೂರು: ಬಾಲಿವುಡ್ನ ಎವರ್ಗ್ರೀನ್ ನಟಿಯರಲ್ಲಿ ಒಬ್ಬರು ಟಬು. ಈಗ ಅವರಿಗೆ 53 ವರ್ಷ. ವಯಸ್ಸು ಇಷ್ಟಾದರೂ ಇಂದಿಗೂ ಅವರಿಗೆ ಬಾಲಿವುಡ್ನಲ್ಲಿ ಸಕತ್ ಡಿಮ್ಯಾಂಡ್ ಇದೆ, ಮಾತ್ರವಲ್ಲದೇ ಯಾವ ನಾಯಕನ ತಾಯಿಯಾಗಿಯೂ ನಟಿಸುವ ಕಾಲ ಬಂದಿಲ್ಲ, ನಾಯಕಿಯಾಗಿಯೇ ನಟಿಸುತ್ತಿರುವ ಹೆಮ್ಮೆ ಇವರದ್ದು. ದೃಶ್ಯಂ 2 ರಲ್ಲಿ ತಮ್ಮ ಮಗನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಯಾವುದೇ ಹಂತಕ್ಕೂ ಹೋಗುವ ಪ್ರತಿಸ್ಪರ್ಧಿಯಾಗಿ ಅವರು ಕಾಣಿಸಿಕೊಂಡರೆ ಭೂಲ್ ಭುಲೈಯಾ 2 ರಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡರು, ಎರಡೂ ಪಾತ್ರಗಳು ಪರಸ್ಪರ ಭಿನ್ನವಾಗಿವೆ. ಹೀಗೆ ಎಲ್ಲಾ ಪಾತ್ರಗಳಲ್ಲಿ ಟಬು ಅವರದ್ದು ಎತ್ತಿದ ಕೈ.
ಇಂತಿಪ್ಪ ನಟಿ ಇಂದಿಗೂ ಸಿಂಗಲ್. ಮದುವೆಯಾಗುವ ಗೋಜಿಗೆ ಹೋಗಲಿಲ್ಲ, ಅದರ ಆಸೆಯೂ ಅವರಿಗೆ ಇಲ್ಲವಂತೆ. ಸಿಂಗಲ್ ಆಗಿರುವುದನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಟಬುವಿಗೆ ಇಂದಿಗೂ ಖುಷಿಯಿದೆ. ಅಂದಹಾಗೆ ನಟಿ ಟಬು ಅವರ ಪೂರ್ಣ ಹೆಸರು ತಬಸ್ಸುಮ್ ಫಾತಿಮಾ ಹಶ್ಮಿ. ಇವರ ಚಿಕ್ಕಮ್ಮ ಶಬಾನಾ ಅಜ್ಮಿ ಬಾಲಿವುಡ್ನ ಪ್ರಸಿದ್ಧ ನಟಿ ಎನ್ನುವುದನ್ನು ಬಿಟ್ಟರೆ, ಯಾವುದೇ ಚಿತ್ರರಂಗದ ಬ್ಯಾಕ್ಗ್ರೌಂಡ್ ಇಲ್ಲದ ನಟಿ ಟಬು.
ನಟಿ ಟಬು ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಅಷ್ಟಕ್ಕೂ ಬೆಂಗಳೂರು ಎಂದರೆ ಸೆಲೆಬ್ರಿಟಿಗಳಿಗೂ ಸ್ವರ್ಗವೇ. ಆಗಾಗ್ಗೆ ಇಲ್ಲಿಗೆ ಬಾಲಿವುಡ್ ತಾರೆಯರೂ ಭೇಟಿ ಕೊಡುವುದು ಇದೆ. ಈ ಸಂದರ್ಭದಲ್ಲಿ ಪಾಪರಾಜಿಗಳ ಮಾತಿಗೆ ಸಿಕ್ಕಿದ್ದಾರೆ ಟಬು. ಆಗ ಕನ್ನಡದಲ್ಲಿಯೇ ಮಾತನಾಡಿದ್ದು, ಜನರ ಶ್ಲಾಘನೆಗೆ ಕಾರಣವಾಗಿದೆ.
ಹಲೋ ಹಿಂದು ಎನ್ನುವ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದೆ. ನನಗೆ ಪುನಃ ಬೆಂಗಳೂರಿಗೆ ಬರುವ ಆಸೆ ಇದೆ. ಅದನ್ನು ಕನ್ನಡದಲ್ಲಿ ಹೇಳಬೇಕು ಎಂದಿದ್ದಾರೆ ನಟಿ. ಬಳಿಕ ಸಂದರ್ಶಕ ಹೇಳಿಕೊಟ್ಟಂತೆ, ನಟಿ, ಪ್ರೀತಿಯ ಕನ್ನಡಿಗರೇ, ನಾನು ನಿಮ್ಮ ಟಬು, ನನಗೆ ಬೆಂಗಳೂರು ಅಂದರೆ ತುಂಬಾ ಇಷ್ಟ. ಮತ್ತೆ ಮತ್ತೆ ಬರ್ತಿನಿ ಎಂದು ಶುದ್ಧವಾಗಿಯೇ ಹೇಳಿದ್ದಾರೆ. ಇದು ನೆಟ್ಟಿಗರ ಶ್ಲಾಘನೆಗೆ ಕಾರಣವಾಗಿದೆ.