ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಮಂಡಿಸಿದ ಹೊಸ ಆದಾಯ ತೆರಿಗೆ ಮಸೂದೆ 2025, 1961ರ ಹಳೆಯ ಕಾಯ್ದೆಯನ್ನು ಬದಲಾಯಿಸುವ ಉದ್ದೇಶ ಹೊಂದಿದೆ. ತೆರಿಗೆ ವ್ಯವಸ್ಥೆಯನ್ನು ಸರಳೀಕರಿಸಿ, ಪಾರದರ್ಶಕತೆ ಮತ್ತು ಸುಗಮ ಅನುಸರಣೆಗೆ ಹೆಚ್ಚಿನ ಒತ್ತು ನೀಡುವ ಆಶಯ ಹೊಂದಿದೆ. ಈ ಮಸೂದೆಯ ಪ್ರಮುಖ ಅಂಶಗಳು ಮತ್ತು ತೆರಿಗೆದಾರರು ಗಮನಿಸಬೇಕಾದ ಸಂಗತಿಗಳ ವಿವರ ಇಂತಿದೆ:
1: ಸರಳೀಕೃತ ಭಾಷೆ
ಹೊಸ ಮಸೂದೆಯ ಪ್ರಮುಖ ಗುರಿ ತೆರಿಗೆ ಕಾನೂನನ್ನು ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಮಾಡುವುದು. ಹಳೆಯ 1961ರ ಕಾಯ್ದೆಯ 1,647 ಪುಟಗಳನ್ನು 60% ಕಡಿಮೆ ಮಾಡಿ 622 ಪುಟಗಳಿಗೆ ಸಂಕುಚಿತಗೊಳಿಸಲಾಗಿದೆ. ಇದರಲ್ಲಿ 23 ಅಧ್ಯಾಯಗಳು, 536 ವಿಭಾಗಗಳು ಮತ್ತು 16 ಶೆಡ್ಯೂಲ್‌ಗಳಿವೆ. ಪರಿಭಾಷೆಯ ಸರಳೀಕರಣದಿಂದ ತೆರಿಗೆ ವಿವಾದಗಳು ಕಡಿಮೆಯಾಗುವ ನಿರೀಕ್ಷೆ ಇದೆ.
ತೆರಿಗೆದಾರರ ಗಮನಕ್ಕೆ:
- ಕಾನೂನು ಪದಗಳು ಮತ್ತು ವಿವರಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಹೊಸ ಕಾಯ್ದೆ ನೆರವಾಗಲಿದೆ.
- ನಿಯಮಗಳು ಒಂದೇ ಸ್ಥಳದಲ್ಲಿ ಸಂಯೋಜಿತವಾಗಿವೆ (ಉದಾ: ಸಂಬಳ ಕಡಿತಗಳು, ವಿನಾಯಿತಿಗಳು)
2: ಹೊಸ ತೆರಿಗೆ ಸ್ಲ್ಯಾಬ್‌ಗಳು ಮತ್ತು ವಿನಾಯಿತಿಗಳು
- ತೆರಿಗೆ ವಿನಾಯಿತಿ ಮಿತಿ: ₹12.75 ಲಕ್ಷದವರೆಗೆ ಆದಾಯವಿರುವವರಿಗೆ ತೆರಿಗೆ ವಿನಾಯಿತಿ (ಸ್ಟ್ಯಾಂಡರ್ಡ್ ಡಿಡಕ್ಷನ್ ₹75,000 ಸೇರಿದಂತೆ)
- ಸ್ಲ್ಯಾಬ್ ರಚನೆ:
₹4 ಲಕ್ಷದವರೆಗೆ: ಶೂನ್ಯ ತೆರಿಗೆ
₹4 ರಿಂದ 8 ಲಕ್ಷ: 5%
₹8 ರಿಂದ 12 ಲಕ್ಷ: 10%
₹12 ರಿಂದ 16 ಲಕ್ಷ: 15%
₹16 ರಿಂದ 20 ಲಕ್ಷ: 20%
₹20 ರಿಂದ 24 ಲಕ್ಷ: 25%
₹24 ಲಕ್ಷ ಮೇಲ್ಪಟ್ಟ ಆದಾಯ: 30%
- ಗಮನಾರ್ಹ ಬದಲಾವಣೆ: ಮಧ್ಯಮ ವರ್ಗದವರಿಗೆ ಹೆಚ್ಚಿನ ವಿನಾಯಿತಿ ಮಿತಿ ಮತ್ತು ಹಂತ ಹಂತದ ತೆರಿಗೆ ದರಗಳು ಲಾಭದಾಯಕ
3: ವರ್ಚುವಲ್ ಡಿಜಿಟಲ್ ಸ್ವತ್ತುಗಳ ಸೇರ್ಪಡೆ
- ಕ್ರಿಪ್ಟೋ ಕರೆನ್ಸಿ, NFTಗಳು, ಡಿಜಿಟಲ್ ಆಸ್ತಿಗಳು ಮುಂತಾದವುಗಳನ್ನು “ವರ್ಚುವಲ್ ಡಿಜಿಟಲ್ ಸ್ವತ್ತು” ಎಂದು ವ್ಯಾಖ್ಯಾನಿಸಲಾಗಿದೆ. ಇವುಗಳ ಮೇಲಿನ ಆದಾಯವನ್ನೂ ತೆರಿಗೆಗೆ ಒಳಪಡಿಸಲಾಗುವುದು..!
- ಷರತ್ತು 509: ಕ್ರಿಪ್ಟೋ ವಹಿವಾಟುಗಳ ವಿವರವಾದ ವರದಿ ಅಗತ್ಯ.
- ಷರತ್ತು 510: ವಾರ್ಷಿಕ ಮಾಹಿತಿ ಹೇಳಿಕೆಗಳನ್ನು (AIS) ಸಲ್ಲಿಸುವ ಬಾಧ್ಯತೆ.
- ತೆರಿಗೆದಾರರ ಗಮನಕ್ಕೆ: ಡಿಜಿಟಲ್ ಸ್ವತ್ತುಗಳನ್ನು ನಿಖರವಾಗಿ ಘೋಷಿಸಿ, ಇಲ್ಲವಾದ್ರೆ ದಂಡ ಕಟ್ಟಬೇಕಾಗುತ್ತೆ..!
4: ತೆರಿಗೆ ವರ್ಷದ ಹೊಸ ಪರಿಕಲ್ಪನೆ
- ಹಿಂದಿನ “ಹಣಕಾಸು ವರ್ಷ” ಮತ್ತು “ಮೌಲ್ಯಮಾಪನ ವರ್ಷ” ಪದಗಳನ್ನು “ತೆರಿಗೆ ವರ್ಷ” ಎಂಬ ಏಕೈಕ ಪರಿಕಲ್ಪನೆಯೊಂದಿಗೆ ಬದಲಾಯಿಸಲಾಗಿದೆ. ಇದು ತೆರಿಗೆ ಲೆಕ್ಕಾಚಾರವನ್ನು ಸುಗಮಗೊಳಿಸುತ್ತದೆ.
- ಉದಾಹರಣೆ: 2025-26ರ ತೆರಿಗೆ ವರ್ಷದ ಆದಾಯವನ್ನು ಅದೇ ವರ್ಷದಲ್ಲಿ ಮೌಲ್ಯಮಾಪನ ಮಾಡಲಾಗುವುದು.
5: ತೆರಿಗೆ ಪಾವತಿ ಸಮಯ ಮಿತಿಗಳು
- ರಿಟರ್ನ್ ಸಲ್ಲಿಕೆ: ಸಮಯ ಮಿತಿಯನ್ನು 2 ರಿಂದ 4 ವರ್ಷಗಳಿಗೆ ವಿಸ್ತರಿಸಲಾಗಿದೆ. ತಪ್ಪುಗಳನ್ನು ಸರಿಪಡಿಸಲು ಹೆಚ್ಚು ಸಮಯ ಸಿಕ್ಕಂತಾಗಿದೆ.
- ಲೆಕ್ಕ ಪರಿಶೋಧನೆ: ವ್ಯವಹಾರ ಮಿತಿಯನ್ನು ₹2 ಕೋಟಿಯಿಂದ ₹3 ಕೋಟಿಗೆ ಮತ್ತು ವೃತ್ತಿಪರರಿಗೆ ₹50 ಲಕ್ಷದಿಂದ ₹75 ಲಕ್ಷಕ್ಕೆ ಹೆಚ್ಚಿಸಲಾಗಿದೆ.
- ಡಿಜಿಟಲ್ ಪಾವತಿ: ಆನ್‌ಲೈನ್ ಮೂಲಕ ತೆರಿಗೆ ಪಾವತಿಗೆ ಪ್ರಾಶಸ್ತ್ಯ ನೀಡಲಾಗಿದೆ.
6: ಸ್ಟಾರ್ಟ್ ಅಪ್‌ಗಳು ಮತ್ತು ಲಾಭ ರಹಿತ ಸಂಸ್ಥೆಗಳಿಗೆ ಸ್ಪಷ್ಟತೆ
- ಸ್ಟಾರ್ಟ್ಅಪ್: ಅಧ್ಯಾಯ 11 ರಿಂದ 154ರ ಅಡಿ ತೆರಿಗೆ ಸೌಲಭ್ಯಗಳು ಮತ್ತು ನಿಯಮಗಳ ಸ್ಪಷ್ಟೀಕರಣ.
- ಲಾಭ ರಹಿತ ಸಂಸ್ಥೆಗಳು: ಕಲಂ 332 ರಿಂದ 355ರ ಅಡಿ ದತ್ತಿ ಮತ್ತು ವಾಣಿಜ್ಯ ಚಟುವಟಿಕೆಗಳ ನಿಯಮಗಳನ್ನು ವಿವರಿಸಲಾಗಿದೆ.
7: ದಂಡ ಮತ್ತು ಪಾರದರ್ಶಕತೆ
- ತಪ್ಪು ವರದಿ ಅಥವಾ ನಿಯಮ ಉಲ್ಲಂಘನೆಗೆ ದಂಡವನ್ನು ಹೆಚ್ಚಿಸಲಾಗಿದೆ
- ತೆರಿಗೆದಾರರ ಚಾರ್ಟರ್: ತೆರಿಗೆದಾರರ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಸ್ಪಷ್ಟಪಡಿಸುವ ಹೊಸ ವಿಭಾಗ ಸೇರ್ಪಡೆ ಮಾಡಲಾಗಿದೆ.
ಆದಾಯ ತೆರಿಗೆ ಪಾವತಿದಾರರಿಗೆ ಒಂದಿಷ್ಟು ಸಲಹೆಗಳು
- 1: ಡಿಜಿಟಲ್ ಸ್ವತ್ತುಗಳ ಘೋಷಣೆ: ಕ್ರಿಪ್ಟೋ / ಡಿಜಿಟಲ್ ಹೂಡಿಕೆಗಳನ್ನು ನಿಖರವಾಗಿ ವರದಿ ಮಾಡಿ
- 2: ಹೊಸ ಸ್ಲ್ಯಾಬ್‌ಗಳ ಅಧ್ಯಯನ ಮಾಡಿ ತೆರಿಗೆ ಯೋಜನೆಗಳನ್ನು ಹೊಂದಾಣಿಕೆ ಮಾಡಿಕೊಳ್ಳಿ.
- 3: ಸಮಯ ಮಿತಿ: ರಿಟರ್ನ್ ಸಲ್ಲಿಕೆ ಮತ್ತು ಲೆಕ್ಕ ಪರಿಶೋಧನೆಗೆ ಸಿಕ್ಕಿರುವ ಹೆಚ್ಚಿನ ಸಮಯವನ್ನು ಬಳಸಿ.
- 4: ವೃತ್ತಿಪರ ಸಲಹೆ: ಸಂಕೀರ್ಣ ಪ್ರಕರಣಗಳಿಗೆ ತಜ್ಞರ ಸಹಾಯ ಪಡೆಯಿರಿ