ರಾಜ್ಯಗಳು ಮಾಡಿರುವ ಸಾಲದ ಕುರಿತು ಆರ್‌ಬಿಐ ವರದಿ

ಯಾವ ರಾಜ್ಯಗಳು ಎಷ್ಟು ಸಾಲ ಮಾಡಿಕೊಂಡಿವೆ..? ರಾಜ್ಯಕ್ಕೆ ಎಷ್ಟನೇ ಸ್ಥಾನ.. ಟಾಪ್ನಲ್ಲಿ ಇರುವ ರಾಜ್ಯ ಯಾವುದು..?

Untitled Design 2025 03 03t191630.199

ದೇಶದ ಬಹುತೇಕ ರಾಜ್ಯಗಳು ಸಾಲ ಮಾಡಿಯಾದರೂ ತುಪ್ಪ ತಿನ್ನು ಎಂಬ ನೀತಿ ಅನುಸರಿಸುತ್ತಿವೆಯಾ ಎಂಬ ಅನುಮಾನ ಶುರುವಾಗಿದೆ. ಏಕೆಂದರೆ, ಡಿಸೆಂಬರ್ 2024ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ದೇಶದ ವಿವಿಧ ರಾಜ್ಯಗಳು ಮಾಡಿರುವ ಸಾಲದ ಕುರಿತು ವರದಿ ತಯಾರಿಸಿದೆ. ದಕ್ಷಿಣ ಭಾರತದ 4 ಮೊದಲ ಹತ್ತು ಸ್ಥಾನಗಳಲ್ಲಿ ಸ್ಥಾನ ಪಡೆದಿವೆ. ಯಾವ್ಯಾವ ರಾಜ್ಯಗಳು ಎಷ್ಟು ಸಾಲ ಮಾಡಿವೆ ಎಂಬುದರ ವರದಿ ಇಲ್ಲಿದೆ.

ಸಾಲ ಮಾಡಿಯಾದರೂ ತುಪ್ಪ ತಿನ್ನು ಎಂಬ ಗಾದೆ ಇದೆ. ಇದನ್ನು ದೇಶದ ವಿವಿಧ ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿರೋರು ಗಂಭೀರವಾಗಿ ಪರಿಗಣಿಸಿದಂತಿದೆ. ಏಕೆಂದರೆ, ವರ್ಷಂಪ್ರತಿ ರಾಜ್ಯಗಳು ಪಡೆಯುತ್ತಿರುವ ಸಾಲದ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದೆ. 2024ರ ಡಿಸೆಂಬರ್ ಅಂತ್ಯಕ್ಕೆ ದೇಶದ ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಒಟ್ಟು ಸಾಲ 84 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದ್ದು, 2025ರ ಏಪ್ರಿಲ್ ವೇಳೆಗೆ 93 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ವರದಿ ಹೇಳಿದೆ. ರಾಜ್ಯಗಳು ಮಂಡಿಸಿರುವ ಬಜೆಟ್ ಆಧರಿಸಿ ಈ ವರದಿ ತಯಾರಾಗಿದ್ದು, ಗಣನೀಯ ಪ್ರಮಾಣವಾಗಿ ಸಾಲದ ಮೊತ್ತ ಏರಿಕೆ ಆಗುತ್ತಿರುವುದಕ್ಕೆ ಆರ್ಬಿಐ ಕಳವಳ ವ್ಯಕ್ತಪಡಿಸಿದೆ.

ADVERTISEMENT
ADVERTISEMENT

ಕೇಂದ್ರ ಸರ್ಕಾರದ ಜೊತೆ ಜಗಳ ತೆಗೆಯಲಿ ಎಂದೇ ನಮ್ಮನ್ನ ಜನ ಆರಿಸಿದ್ದಾರೆ ಎಂದು ತಮಿಳುನಾಡಿನಲ್ಲಿ ಅಧಿಕಾರ ನಡೆಸುತ್ತಿರುವ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರ ಭಾವಿಸಿದಂತಿದೆ. ಏಕೆಂದರೆ, ತಮಿಳುನಾಡು ಮೈ ತುಂಬಾ ಸಾಲ ಮಾಡಿಕೊಂಡಿದ್ದು, ರಾಜ್ಯವನ್ನು ದಿವಾಳಿ ಮಾಡುವತ್ತ ಡಿಎಂಕೆ ಸರ್ಕಾರ ಕೊಂಡೊಯ್ಯುತ್ತಿದೆ. ಇದೆಲ್ಲವನ್ನು ಮರೆ ಮಾಚಲು ಕೇಂದ್ರದ ಜೊತೆ ಸಂಘರ್ಷ ಹಾದಿ ಹಿಡಿದಿದೆ ಎಂದು ಅನೇಕ ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ತಮಿಳಿಗರಿಗೆ ಭಾಷೆಯ ಕುರಿತು ಇರುವ ವ್ಯಾಮೋಹವನ್ನೇ ಬಂಡವಾಳ ಮಾಡಿಕೊಂಡು ಪದೇಪದೆ ಹಿಂದಿ ಹೇರಿಕೆ.. ಜನಗಣತಿ ಆಧರಿಸಿ ಕ್ಷೇತ್ರ ಮರು ವಿಂಗಡಣೆ, ದಕ್ಷಿಣ ಭಾರತಕ್ಕೆ ಅನ್ಯಾಯ ಎಂಬ ಭಾವನಾತ್ಮಕ ವಿಚಾರಗಳನ್ನ ಮುಂದೆ ಮಾಡಿ ರಾಜ್ಯದ ಆರ್ಥಿಕ ಪರಿಸ್ಥಿತಿ ಹಳ್ಳ ಹಿಡಿದಿರುವುದು ಗೊತ್ತಾಗದಂತೆ ನೋಡಿಕೊಳ್ಳುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.

ದಕ್ಷಿಣ ಭಾರತದ 5 ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಕೇವಲ ಒಂದು ರಾಜ್ಯದಲ್ಲಿ ಮಾತ್ರ ಸರ್ಕಾರ ನಡೆಸುತ್ತಿದೆ. ಆಂಧ್ರಪ್ರದೇಶ ಹೊರತುಪಡಿಸಿ ಬೇರಾವ ರಾಜ್ಯಗಳಲ್ಲೂ ಬಿಜೆಪಿ ಸರ್ಕಾರ ರಚಿಸಿಲ್ಲ. ಆಂಧ್ರಪ್ರದೇಶದಲ್ಲೂ ಸಹ ಎನ್‌ಡಿಎ ಮೈತ್ರಿಕೂಟದಲ್ಲಿ ದೊಡ್ಡ ಪಾತ್ರವನ್ನು ನಿಭಾಯಿಸುತ್ತಿಲ್ಲ. ಹೀಗೆ ಪ್ರತಿಪಕ್ಷಗಳೇ ಉಳಿದ 4 ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿವೆ. ಇಷ್ಟಾದರೂ ದೇಶದಲ್ಲಿ ಅತಿಹೆಚ್ಚು ಸಾಲ ಮಾಡಿರುವ ಟಾಪ್ಟೆನ್ ರಾಜ್ಯಗಳಲ್ಲಿ ದಕ್ಷಿಣ ಭಾರತದ 4 ರಾಜ್ಯಗಳು ಸ್ಥಾನ ಪಡೆದಿವೆ. ಟಾಪ್ ಲೆವೆನ್ ಪರಿಗಣನೆಗೆ ತೆಗೆದುಕೊಂಡರೆ, ದಕ್ಷಿಣ ಭಾರತದ ಎಲ್ಲ ರಾಜ್ಯಗಳೂ ಮೈ ತುಂಬಾ ಸಾಲ ಮಾಡಿಕೊಂಡಿವೆ ಎಂದು ಆರ್ಬಿಐ ವರದಿ ಹೇಳುತ್ತಿದೆ.

ಆರ್‌ಬಿಐ ವರದಿಯಲ್ಲಿ ಟಾಪ್ ಟೆನ್ ಸ್ಥಾನದಲ್ಲಿರುವ ರಾಜ್ಯಗಳ ಕುರಿತು ಕಣ್ಣಾಡಿಸಿದರೆ, 8 ಲಕ್ಷ 47 ಸಾವಿರ ಕೋಟಿ ರೂಪಾಯಿ ಸಾಲ ಮಾಡಿರುವ ತಮಿಳುನಾಡು ನಂಬರ್ 1 ಸ್ಥಾನದಲ್ಲಿದೆ. 7 ಲಕ್ಷ 88 ಸಾವಿರ ಕೋಟಿ ರೂಪಾಯಿ ಸಾಲ ಮಾಡಿರುವ ಉತ್ತರ ಪ್ರದೇಶ 2ನೇ ಸ್ಥಾನದಲ್ಲಿದೆ. 7 ಲಕ್ಷ 41 ಸಾವಿರ ಕೋಟಿ ರೂಪಾಯಿ ಸಾಲ ಮಾಡಿರುವ ಮಹಾರಾಷ್ಟ್ರ 3ನೇ ಸ್ಥಾನದಲ್ಲಿದೆ. 6 ಲಕ್ಷ 51 ಸಾವಿರ ಕೋಟಿ ರೂಪಾಯಿ ಸಾಲ ಮಾಡಿರುವ ಪಶ್ಚಿಮ ಬಂಗಾಳ ನಾಲ್ಕನೇ ಸ್ಥಾನದಲ್ಲಿದೆ. 6 ಲಕ್ಷ 35 ಸಾವಿರ ಕೋಟಿ ಸಾಲ ಪಡೆದಿರುವ ಕರ್ನಾಟಕ 5ನೇ ಸ್ಥಾನದಲ್ಲಿದೆ. ಈ ಮೂಲಕ ಟಾಪ್ ಫೈವ್ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಹೀಗೆಂದು ಇದನ್ನು ದೊಡ್ಡ ಸಾಧನೆ ಎಂದು ಪರಿಗಣಿಸಬೇಕಿಲ್ಲ. ಏಕೆಂದರೆ, ಇದೊಂದು ಬೇಡದ ಪಟ್ಟ ಎಂಬುದು ನಿಮ್ಮ ಗಮನದಲ್ಲಿರಲಿ.

5 ಲಕ್ಷ 66 ಸಾವಿರ ಕೋಟಿ ರೂಪಾಯಿ ಸಾಲ ಮಾಡಿರುವ ರಾಜಸ್ಥಾನ 6ನೇ ಸ್ಥಾನದಲ್ಲಿದೆ. 4 ಲಕ್ಷ 94 ಸಾವಿರ ಕೋಟಿ ರೂಪಾಯಿ ಸಾಲದ ಹೊರೆ ಹೊತ್ತಿರುವ ಆಂಧ್ರಪ್ರದೇಶ 7ನೇ ಸ್ಥಾನದಲ್ಲಿದ್ದು, ಗುಜರಾತ್ ನಾಲ್ಕು ಲಕ್ಷ 43 ಸಾವಿರ ರೂಪಾಯಿ ಕೋಟಿ ಸಾಲ ಪಡೆದು 8ನೇ ಸ್ಥಾನದಲ್ಲಿದೆ. ಸದಾ ಹೆಚ್ಚು ಸಾಕ್ಷರತೆ ಹೊಂದಿರುವ ವಿಚಾರಕ್ಕೆ, ಉದಾತ್ತ ಚಿಂತನೆಗಳನ್ನು ಅಳವಡಿಸಿಕೊಂಡಿರುವ ರಾಜ್ಯ ಎಂದು ಹೆಸರು ಪಡೆದಿರುವ ಕೇರಳ ಕೂಡ ಈ ಪಟ್ಟಿಯಲ್ಲಿದೆ. ಅದರಲ್ಲಿಯೂ ಟಾಪ್ ಟೆನ್ನಲ್ಲಿ ಸ್ಥಾನ ಪಡೆದಿದೆ. ಇಷ್ಟೊಂದು ಚಿಕ್ಕ ರಾಜ್ಯ ಇಷ್ಟು ಸಾಲ ಮಾಡಿಕೊಂಡಿದ್ದು ಸರಿಯೇ ಎಂಬು ಪ್ರಶ್ನೆ ಏಳುವಂತೆ ಮಾಡಿದೆ. ಕೇರಳಕ್ಕಿಂತಲೂ ದೊಡ್ಡದಾಗಿರುವ ರಾಜ್ಯಗಳು ಸಹ ಇಷ್ಟು ಸಾಲ ಮಾಡಿಲ್ಲ. ಕೇರಳ 4 ಲಕ್ಷ 26 ಸಾವಿರ ಕೋಟಿ ರೂಪಾಯಿ ಎರವಲು ಪಡೆದಿದ್ದು, 9ನೇ ಸ್ಥಾನದಲ್ಲಿದೆ. 4 ಲಕ್ಷ 12 ಸಾವಿರ ಕೋಟಿ ರೂಪಾಯಿ ಸಾಲ ಮಾಡಿರುವ ಮಧ್ಯಪ್ರದೇಶ 10 ನೇ ಸ್ಥಾನ ಪಡೆಯುವ ಮೂಲಕ ಟಾಪ್ ಟೆನ್ ಲಿಸ್ಟ್ ಮುಗಿಯುತ್ತದೆ.

ದೇಶದಲ್ಲಿ ಒಟ್ಟು 14 ರಾಜ್ಯಗಳ ಸಾಲದ ಪ್ರಮಾಣ 3 ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿದೆ. ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿರುವ ತೆಲಂಗಾಣ 3 ಲಕ್ಷ 93 ಸಾವಿರ ಕೋಟಿ ರೂಪಾಯಿ ಸಾಲ ಪಡೆದುಕೊಂಡಿದೆ. ದೆಹಲಿಯಲ್ಲಿ ಜನರಿಗೆ ಹಲವು ಫ್ರೀ ಯೋಜನೆಗಳನ್ನು ಘೋಷಿಸಿ ಅಧಿಕಾರಕ್ಕೇರಿದ್ದ ಎಎಪಿ, ಪಂಜಾಬ್ನಲ್ಲಿಯೂ ಇದೇ ತಂತ್ರ ಉಪಯೋಗಿಸಿತ್ತು. ಈ ತಂತ್ರ ಫಲ ಕೂಡ ಕೊಟ್ಟಿತ್ತು. ಸದ್ಯಕ್ಕೆ ಪಂಜಾಬ್ನಲ್ಲಿ ಎಎಪಿ ಸರ್ಕಾರ ಅಧಿಕಾರ ನಡೆಸುತ್ತಿದೆ. ಇಂತಹ ಪಂಜಾಬ್ ಹೆಚ್ಚು ಸಾಲ ಮಾಡಿರುವ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿದೆ. ಪಂಜಾಬ್ನ ಒಟ್ಟು ಸಾಲ 3 ಲಕ್ಷ 47 ಸಾವಿರ ಕೋಟಿ ರೂಪಾಯಿ ಆಗಿದೆ. 3 ಲಕ್ಷ 34 ಸಾವಿರ ಕೋಟಿ ರೂಪಾಯಿ ಸಾಲ ಮಾಡಿರುವ ಹರಿಯಾಣ 13 ನೇ ಸ್ಥಾನದಲ್ಲಿದ್ದು, 3 ಲಕ್ಷ 32 ಸಾವಿರ ಕೋಟಿ ರೂಪಾಯಿ ಸಾಲ ಮಾಡಿರುವ ಬಿಹಾರ 14 ಮತ್ತು ಕೊನೆಯ ಸ್ಥಾನದಲ್ಲಿದೆ.

ದೇಶದ ವಿವಿಧ ರಾಜ್ಯಗಳಲ್ಲಿ ಉಚಿತ ಯೋಜನೆಗಳನ್ನು ಘೋಷಣೆ ಮಾಡಿ, ಹಲವಾರು ಪಕ್ಷಗಳು ಅಧಿಕಾರಕ್ಕೆ ಬಂದಿವೆ. ಹೀಗೆ ಉಚಿತ ಘೋಷಣೆಗಳನ್ನು ಘೋಷಣೆ ಮಾಡಿ ಅಧಿಕಾರ ಹಿಡಿದಿರುವ ರಾಜ್ಯಗಳಲ್ಲಿ, ಆಯಾ ಸರ್ಕಾರಗಳು ಅಧಿಕಾರಕ್ಕೆ ಬಂದ ಬಳಿಕ ಸಾಲದ ಪ್ರಮಾಣ ಊಹೆಗೂ ನಿಲುಕದಷ್ಟು ಪ್ರಮಾಣದಲ್ಲಿ ಹೆಚ್ಚಾಗಿದೆ. ಏಪ್ರಿಲ್ 2025ರ ವೇಳೆಗೆ ಕಳೆದ ಸಾಲಿನಿಂದ ಈ ಸಾಲಿನವರೆಗೆ ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಹೆಚ್ಚುವರಿಯಾಗಿ 9 ಲಕ್ಷ ಕೋಟಿ ರೂಪಾಯಿ ಸಾಲ ಪಡೆಯಬಹುದು ಎಂದು ಆರ್ಬಿಐ ವರದಿ ಅಂದಾಜಿಸಿದೆ. ಇದು ನಿಜಕ್ಕೂ ಶಾಕ್ ನೀಡೋ ವಿಚಾರವಾಗಿದೆ. ಈ ಪ್ರಮಾಣದಲ್ಲಿ ರಾಜ್ಯಗಳು ಸಾಲ ಪಡೆಯುತ್ತಾ ಹೋದ್ರೆ, ಮುಂದೊಂದು ದಿನ ಬಹುತೇಕ ರಾಜ್ಯಗಳು ದಿವಾಳಿಯಾಗೋದು ಪಕ್ಕಾ ಅಂತಾ ಅರ್ಥಶಾಸ್ತ್ರಜ್ಞರು ಮುನ್ನಚ್ಚರಿಕೆ ಕೊಟ್ಟಿದ್ದಾರೆ.

ಚಂದ್ರಮೋಹನ್ ಕೋಲಾರ, ಸ್ಪೆಷಲ್ ಬ್ಯೂರೋ, ಗ್ಯಾರಂಟಿ ನ್ಯೂಸ್.

Exit mobile version