ಹುಬ್ಬಳ್ಳಿ : ನೇಹಾ ಹಿರೇಮಠ ಅವರ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಹಸ್ತಾಂತರ ಮಾಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಇಂದು ನೇಹಾ ಹಿರೇಮಠ ಅವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊಲೆಗಡುಕರಿಗೆ ನಮ್ಮದೇ ಸರಕಾರ ಎಂಬ ಮನೋಭಾವ ಬೆಳೆಯುತ್ತಿದೆ. ಇದು ಖಂಡಿತ ಯಾರಿಗೂ ಒಳ್ಳೆಯದಲ್ಲ. ಇಡೀ ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ದೊಡ್ಡ ಸವಾಲು ಎದ್ದಿದೆ. ಈ ನಾಡಿನ ತಾಯಂದಿರು, ಮಹಿಳೆಯರು, ಯುವತಿಯರಿಗೆ ಧೈರ್ಯ ನೀಡುವ ನಿಟ್ಟಿನಲ್ಲಿ ಸರಕಾರವು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಸಿಬಿಐ ತನಿಖೆ ಮಾಡಿಸಬೇಕು ಎಂದು ಒತ್ತಾಯಿಸಿದರು. ಯಾದಗಿರಿ, ಹುಬ್ಬಳ್ಳಿಯಲ್ಲಿ ಮತ್ತೆ ಇಂಥ ಘಟನೆಗಳು ನಡೆದಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಹಿಂದೆ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಬೆಂಕಿ ಹಚ್ಚಿದಾಗ ಕೂಡ ಅವರದೇ ಕಾಂಗ್ರೆಸ್ ಸರಕಾರ ಇತ್ತು. ಸಿದ್ದರಾಮಯ್ಯನವರು ಆಗ ಮುಖ್ಯಮಂತ್ರಿಯಾಗಿದ್ದರು. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಆಗಲೂ ಕೂಡ ತಮ್ಮ ಶಾಸಕನ ರಕ್ಷಣೆಗೆ ರಾಜ್ಯ ಸರಕಾರ ಹೋಗಲಿಲ್ಲ. ಅಲ್ಪಸಂಖ್ಯಾತರ ಭಾವನೆಗಳಿಗೆ ಧಕ್ಕೆ ಆಗುವ ಆತಂಕದಿಂದ ತಮ್ಮದೇ ಪಕ್ಷದ ದಲಿತ ಶಾಸಕನ ರಕ್ಷಣೆ ಮಾಡಲಿಲ್ಲ. ಇದು ಕಾಂಗ್ರೆಸ್ ಪಕ್ಷದ ಸಂಸ್ಕøತಿ ಎಂದು ಟೀಕಿಸಿದರು. ಇಂಥ ಪ್ರಕರಣಗಳಲ್ಲಿ ರಾಜಕೀಯ ಮಾಡಲು ಬಿಜೆಪಿ ಬಯಸುವುದಿಲ್ಲ.
ಈ ಪ್ರಕರಣ ನಡೆದು ಸಾಕಷ್ಟು ದಿನಗಳು ಕಳೆದರೂ ಸಹ ರಾಜ್ಯ ಸರಕಾರದ ನಡವಳಿಕೆಯನ್ನು ಗಮನಿಸಿ, ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳದ ಕಾರಣ ಬಿಜೆಪಿ ರಾಜ್ಯವ್ಯಾಪಿ ಹೋರಾಟ ಕೈಗೆತ್ತಿಕೊಂಡಿತ್ತು. ನೇಹಾ ಅವರ ಬರ್ಬರ ಹತ್ಯೆಯನ್ನು ಸಿಬಿಐ ತನಿಖೆಗೆ ನೀಡಲು ಒತ್ತಾಯಿಸಿದ್ದೇವೆ. ರಾಜ್ಯ ಸರಕಾರ ಸಿಐಡಿ ತನಿಖೆಗೆ ಕೊಟ್ಟಿದೆ. ತನಿಖೆ ನಿಧಾನಗತಿಯಲ್ಲಿದೆ. ಒಬ್ಬನನ್ನಷ್ಟೇ ಬಂಧಿಸಿದ್ದು, ಇನ್ಯಾರನ್ನೂ ಮಾತನಾಡಿಸಲು ಹೋಗಿಲ್ಲ ಎಂದು ಅವರು ಆಕ್ಷೇಪಿಸಿದರು.