ಬೆಂಗಳೂರು: ಹಣ, ಅಧಿಕಾರದ ಬಲದಿಂದ ಚುನಾವಣೆಯಲ್ಲಿ ಗೆಲ್ಲುವ ಭ್ರಮೆಯಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೆ ಜನತೆ ಈಗ ತಕ್ಕ ಉತ್ತರ ನೀಡಲು ಸಜ್ಜಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ವಾಸ ವ್ಯಕ್ತಪಡಿಸಿದರು. ಮಳವಳ್ಳಿಯಲ್ಲಿ ಇಂದು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಎನ್ಡಿಎ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ ಅವರು ಜನಬಲದಿಂದ ಗೆಲ್ಲಲಿದ್ದಾರೆ. ಜನರ ಆಶೀರ್ವಾದ, ತಾಯಂದಿರ ಆಶೀರ್ವಾದದಿಂದ ಎನ್ಡಿಎ ಅಭ್ಯರ್ಥಿಗಳಿಗೆ ಗೆಲುವಾಗಲಿದೆ ಎಂದು ಇಲ್ಲಿ ಸೇರಿದ ಜನರು ಸಂದೇಶ ನೀಡಿದ್ದಾರೆ ಎಂದರು. ದೇಶದ ಸುರಕ್ಷತೆ, ಅಭಿವೃದ್ಧಿ ಕಾರ್ಯಕ್ಕಾಗಿ ಮೋದಿಜೀ ಮತ್ತೊಮ್ಮೆ ಎಂದು ದೇಶ- ರಾಜ್ಯದ ಜನರು ತೀರ್ಮಾನ ಮಾಡಿದ್ದಾರೆ ಎಂದು ಅವರು ತಿಳಿಸಿದರು.
ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗೆ ಮಣ್ಣು ಹಾಕುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡಿದೆ ಎಂದು ಅವರು ಟೀಕಿಸಿದರು. ಮದ್ಯ ಮೊದಲಾದವುಗಳ ಬೆಲೆ ಏರಿಸಿದ ಕಾಂಗ್ರೆಸ್ ಸರಕಾರವು ಅದನ್ನೇ ಮಹಿಳೆಯರ ಖಾತೆಗೆ 2 ಸಾವಿರದಂತೆ ಹಾಕುತ್ತಿದೆ ಎಂದು ರೈತರು ಮಾತನಾಡುತ್ತಿದ್ದಾರೆ ಎಂದರು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಎಂದು ತಿಳಿಸಿದ್ದು, ಇನ್ನೊಂದೆಡೆ ಬಸ್ ಪ್ರಯಾಣ ದರವನ್ನು ಶೇ 30-40ರಷ್ಟು ಏರಿಸಿದ್ದಾರೆ ಎಂದು ಟೀಕಿಸಿದರು. ವಿದ್ಯುತ್ ದರ ದುಪ್ಪಟ್ಟಾಗಿದೆ. ಉಚಿತ ವಿದ್ಯುತ್ ಎನ್ನುತ್ತಾರೆ ಎಂದು ಆಕ್ಷೇಪಿಸಿದರು. ಒಂದು ಕೈಯಲ್ಲಿ ಕಿತ್ತುಕೊಂಡು ಮತ್ತೊಂದು ಕೈಯಲ್ಲಿ ಕೊಡುತ್ತಿದ್ದಾರೆ. ಒಟ್ಟಾರೆಯಾಗಿ ರಾಜ್ಯದ ಜನರಿಗೆ ಕಣ್ಣಿಗೆ ಮಣ್ಣೆರಚುವ ಕೆಲಸ ನಡೆದಿದೆ ಎಂದರು. ರೈತರ, ಪರಿಶಿಷ್ಟ ಸಮುದಾಯದ ಕಾಳಜಿ ಇವರಿಗೆ ಇಲ್ಲ. ಮಕ್ಮಲ್ ಟೋಪಿ ಹಾಕಿ ಲೋಕಸಭಾ ಚುನಾವಣೆ ಗೆಲ್ಲಲು ಕಾಂಗ್ರೆಸ್ ಮುಂದಾಗಿದೆ. ಇಂಥ ದುಷ್ಟ ಕಾಂಗ್ರೆಸ್ಸಿಗರಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ತಿಳಿಸಿದರು. ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಜನರಿಂದ, ಜನರಿಗಾಗಿ ಜನರಿಗೋಸ್ಕರ ಪ್ರಾಣ ಕೊಡಬಲ್ಲ ಕುಮಾರಸ್ವಾಮಿಯವರು ಗೆದ್ದು ಬರಬೇಕಾಗಿದೆ ಎಂದು ತಿಳಿಸಿದರು.