ನಯನತಾರಾ, ಸೌಥ್ ಲೇಡಿ ಸೂಪರ್ ಸ್ಟಾರ್ ಎಂದೇ ಹೆಸರಾಗಿರುವ ನಟಿ. ಇನ್ನು ಧನುಷ್, ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ನಟರಲ್ಲಿ ಒಬ್ಬರು. ಇವರಿಬ್ಬರೂ ಹಲವು ಚಿತ್ರಗಳಲ್ಲಿ ಒಟ್ಟಿಗೇ ನಟಿಸಿದ್ಧಾರೆ. ಆದರೆ ಈಗ ನಯನತಾರಾ, ಅದೇ ಧನುಷ್ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಧನುಷ್ ಇತ್ತೀಚೆಗೆ ನಯನತಾರಾ ಅವರ ಪತಿ ವಿಘ್ನೇಶ್ ಸಿವನ್ ಅವರಿಗೆ ಲೀಗಲ್ ನೋಟಿಸ್ ಕೊಟ್ಟಿದ್ಧಾರೆ. 10 ಕೋಟಿ ರೂ.ಪರಿಹಾರ ಕೇಳಿದ್ಧಾರೆ. ಏಕೆ ಅಂದ್ರೆ, ನೆಟ್ಫ್ಲಿಕ್ಸ್ನಲ್ಲಿ ರಿಲೀಸ್ ಆಗಿರೋ ನಯನತಾರಾ ಅವರ ಡಾಕ್ಯುಮೆಂಟರಿ. ನಯನತಾರಾ ಬಿಯಾಂಡ್ ದಿ ಫೇರ್ ಟೇಲ್ ಡಾಕ್ಯುಮೆಂಟರಿಯಲ್ಲಿ ನಯನತಾರ ಅವರ ಜೀವನ ಚರಿತ್ರೆಯೇ ಇದೆ. ಇದರ ನಿರ್ಮಾಪಕ ವಿಘ್ನೇಶ್ ಸಿವನ್. ಈ ಡಾಕ್ಯುಮೆಂಟರಿಯಲ್ಲಿ ನಾನುಂ ರೌಡಿದಾಂ ಸಿನಿಮಾದ ಮೇಕಿಂಗ್ ದೃಶ್ಯಗಳನ್ನು ಬಳಸಿಕೊಳ್ಳಲಾಗಿದೆ.
ಸಮಸ್ಯೆ ಏನು ಅಂದ್ರೆ ನಾನುಂ ರೌಡಿದಾನ್ ಚಿತ್ರದ ಪ್ರೊಡ್ಯೂಸರ್ ಧನುಷ್. ವಿಜಯ್ ಸೇತುಪತಿ ಮತ್ತು ನಯನತಾರ ಅಭಿನಯದ ಚಿತ್ರಕ್ಕೆ ವಿಘ್ನೇಶ್ ಸಿವನ್ ನಿರ್ದೇಶಕ. 2015ರಲ್ಲಿ ತೆರೆ ಕಂಡಿದ್ದ ದೊಡ್ಡ ಮಟ್ಟದ ಹಿಟ್ ಆಗಿತ್ತು. ಈ ಚಿತ್ರದ ಮೇಕಿಂಗ್ ದೃಶ್ಯಗಳನ್ನು ಡಾಕ್ಯುಮೆಂಟರಿಯಲ್ಲಿ ಬಳಸಿರುವ ಕಾರಣಕ್ಕೆ, 10 ಕೋಟಿ ರೂ. ಪರಿಹಾರ ಕೊಡಿ ಎಂದು ಧನುಷ್, ವಿಘ್ನೇಶ್ ಸಿವನ್ ಅವರಿಗೆ ನೋಟಿಸ್ ಕೊಟ್ಟಿದ್ದಾರೆ. ನಯನತಾರ ರೊಚ್ಚಿಗೆದ್ದಿದ್ದಾರೆ. ಧನುಷ್ ಅವರೇ ನಿಮಗೆ ನಿಮ್ಮ ತಂದೆ, ಸಹೋದರರ ಬೆಂಬಲವಿದೆ. ಅವರ ಬೆಂಬಲದಿಂದ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿದ್ದೀರಿ. ನನ್ನಂತಹವರು ಯಾರ ಬೆಂಬಲವೂ ಇಲ್ಲದೆ ಗಾಡ್ ಫಾದರ್ ಇಲ್ಲದೆ
ಬೆಳೆಯುವುದು ಎಷ್ಟು ಕಷ್ಟ ಎಂದು ಗೊತ್ತಿದೆ. ನನ್ನ ಡಾಕ್ಯುಮೆಂಟರಿ ರಿಲೀಸ್ ಆಗ್ತಿರೋದು ನನಗಷ್ಟೇ ಅಲ್ಲ, ನನ್ನ ಅಭಿಮಾನಿಗಳು, ಹಿತೈಷಿಗಳಿಗೆ ಖುಷಿ ಕೊಟ್ಟಿರೋ ವಿಷಯ. ಡಾಕ್ಯುಮೆಂಟರಿಯನ್ನು ಬಹಳ ಜನ ಕಷ್ಟಪಟ್ಟು ಮಾಡಿದ್ದಾರೆ. ಆ ಸಿನಿಮಾ ನಿಮ್ಮೊಬ್ಬರದ್ದೇ ಅಲ್ಲ, ನನ್ನ ಪತಿ ಮತ್ತು ನಾನು ಸೇರಿದಂತೆ ಹಲವರ ಶ್ರಮ ಆ ಸಿನಿಮಾಗೆ ಇದೆ. ಈ ಡಾಕ್ಯುಮೆಂಟರಿಯಲ್ಲಿ ನನ್ನ ಸಿನಿಮಾ, ನನ್ನ ಹಿತೈಷಿಗಳು, ನನ್ನ ಪ್ರೀತಿ, ನನ್ನ ಮದುವೆ ಎಲ್ಲವನ್ನೂ ಒಳಗೊಂಡಿದೆ. ಆದರೆ ಆ ಡಾಕ್ಯುಮೆಂಟರಿಯಲ್ಲಿ ನನ್ನ ವೃತ್ತಿ ಜೀವನದ ಬಹುಮುಖ್ಯ ಸಿನಿಮಾ ಆದ ನಾನುಂ ರೌಡಿದಾನ್ ಚಿತ್ರದ ಕುರಿತು ಪ್ರಸ್ತಾಪವೇ ಇಲ್ಲ. ಎರಡು ವರ್ಷಗಳಿಂದ ನಿಮ್ಮ ಬಳಿ ಎನ್ಒಸಿ ಪಡೆಯುವುದಕ್ಕೆ ಅಲೆಯುತ್ತಿದ್ದರೂ ನೀವು ಕೊಟ್ಟಿಲ್ಲ. ಹಾಗಾಗಿ ಅದನ್ನು ಡಾಕ್ಯುಮೆಂಟರಿಯಲ್ಲಿ ಕೈಬಿಟ್ಟಿದ್ದೇವೆ. ರೀ-ಎಡಿಟ್ ಮಾಡಿಸುತ್ತಿದ್ದೇವೆ. ಸಿನಿಮಾದ ದೃಶ್ಯಗಳನ್ನು ಬಿಡಿ, ಸಂಗೀತ, ಸಾಹಿತ್ಯವನ್ನು ಬಳಸುವುದಕ್ಕೂ ನೀವು ಅನುಮತಿ ಕೊಡಲಿಲ್ಲ ಎಂದು ಸುದೀರ್ಘ ಪತ್ರವನ್ನೇ ಬರೆದಿದ್ದಾರೆ.
ಈಗ ಬಿಡುಗಡೆಯಾಗಿರುವ ಟ್ರೇಲರಿನಲ್ಲಿ ಆ ಮ್ಯೂಸಿಕ್ ಬಳಕೆಯಾಗಿರುವುದು ಕೇವಲ 3 ಸೆಕೆಂಡ್. ಅದಕ್ಕೆ 10 ಕೋಟಿ ಕೇಳುತ್ತಿದ್ದೀರಿ. ಸಿನಿಮಾ ಆಗಿ 10 ವರ್ಷಗಳಾಗಿವೆ. ನೀವೇ ಪ್ರೊಡ್ಯೂಸರ್ ಆಗಿದ್ದರೂ ಸಿನಿಮಾ ಬಗ್ಗೆ ಎಷ್ಟು ಕೆಟ್ಟದಾಗಿ ಮಾತನಾಡಿದ್ದೀರಿ ಎಂದು ನನಗೆ ಗೊತ್ತಿದೆ. ಇನ್ನೂ ಅದನ್ನು ಮುಚ್ಚಿಡುವುದಕ್ಕೆ ಆಗುವುದಿಲ್ಲ. ನಿಮ್ಮ ನಿರೀಕ್ಷೆಯನ್ನೂ ಮೀರಿ ಸಿನಿಮಾ ಹಿಟ್ ಆಯ್ತು. ಅಷ್ಟಾದರೂ ನಿಮಗೆ ಅರ್ಥವಾಗಲಿಲ್ಲ. ಫಿಲ್ಮ್ಫೇರ್ ಅವಾರ್ಡ್ ಬಂದಾಗಲೂ ಸಿನಿಮಾ ಬಗ್ಗೆ ಒಳ್ಳೆಯ ಮಾತನಾಡಲಿಲ್ಲ ಎಂದು ಟೀಕೆ ಮಾಡಿರುವ ನಯನತಾರಾ, ಅಂತಿಮ ತೀರ್ಪು ದೇವರ ಕೋರ್ಟಿನಲ್ಲೇ ನಿರ್ಧಾರವಾಗಲಿ ಎಂದಿದ್ದಾರೆ. ನಯನತಾರ ಮತ್ತು ಧನುಷ್ ಜೋಡಿಯಾಗಿ ಯಾರದೀ ನೀ ಮೋಹಿನಿ ಚಿತ್ರದಲ್ಲಿ ನಟಿಸಿದ್ದಾರೆ. ಇನ್ನು ನಾನುಂ ರೌಡಿದಾಂ ಚಿತ್ರವನ್ನು ಧನುಷ್ ನಿರ್ಮಾಣ ಮಾಡಿದ್ದಾರೆ.