‘ಮಹಾನಟಿ’ಯಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿನ ಅಮೋಘ ಅಭಿನಯದಿಂದ ದಕ್ಷಿಣ ಚಿತ್ರರಂಗದಲ್ಲಿ ಜನಪ್ರಿಯರಾಗಿರುವ ನಟಿ ಕೀರ್ತಿ ಸುರೇಶ್ ಇಂದು ಪ್ರಸಿದ್ಧ ಧಾರ್ಮಿಕ ಕ್ಷೇತ್ರ ತಿರುಪತಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ತಮ್ಮ ಕುಟುಂಬಸ್ಥರೊಂದಿಗೆ ತಾರೆ, ದೇವರ ದರ್ಶನ ಪಡೆದರು.
ಈ ಸಂದರ್ಭದಲ್ಲಿ ತಮ್ಮ ಮದುವೆ ಕುರಿತ ವದಂತಿಗಳನ್ನು ದೃಢೀಕರಿಸಿದ ಕೀರ್ತಿ ಸುರೇಶ್, ಗೋವಾದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ನಡೆಯಲಿದೆ. ಮದುವೆ ಹಿನ್ನೆಲೆಯಲ್ಲಿ ದೇವರ ಆಶೀರ್ವಾದ ಪಡೆಯಲು ಬಂದೆ ಎಂದು ತಿಳಿಸಿದರು. ಬಹುಕಾಲದ ಗೆಳೆಯ, ಉದ್ಯಮಿ ಆಂಟೋನಿ ಥಟ್ಟಿಲ್ ಅವರೊಂದಿಗೆ ಡಿಸೆಂಬರ್ 11ರಂದು ನಟಿ ಮದುವೆಯಾಗಲಿದ್ದಾರೆ.
ಮದುವೆಗೆ ದಿನಗಣನೆ ಆರಂಭವಾಗಿದ್ದು, ಇತ್ತೀಚೆಗಷ್ಟೇ ಭಾವಿ ಪತಿ ಆಂಟೋನಿ ಥಟ್ಟಿಲ್ ಜೊತೆಗಿನ ಒಂದು ಸುಂದರ ಚಿತ್ರವನ್ನು ಹಂಚಿಕೊಂಡಿದ್ದರು. ಇದೀಗ ಪ್ರಸಿದ್ಧ ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದಾರೆ. ದೀಪಾವಳಿ ಸಂದರ್ಭ ಕ್ಲಿಕ್ಕಿಸಿದ ಫೋಟೋ, ಕೀರ್ತಿ ಮತ್ತು ಆಂಟೋನಿ ಹಬ್ಬದ ಉತ್ಸಾಹದಲ್ಲಿರೋದನ್ನು ತೋರಿಸಿದೆ. ಆಂಟೋನಿ ಪಟಾಕಿ ಹಿಡಿದಿದ್ದು, ಕೀರ್ತಿ ಪಕ್ಕದಲ್ಲಿ ನಿಂತಿದ್ದಾರೆ. ಭಾವಿ ಪತಿಯ ಭುಜದ ಮೇಲೆ ಕೈ ಇರಿಸಿ ಆ ಕ್ಷಣವನ್ನು ಆನಂದಿಸಿರುವುದು ಈ ಫೋಟೋದಲ್ಲಿ ಕಂಡುಬಂದಿದೆ. ಈ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ, ತಮ್ಮ 15 ವರ್ಷಗಳ ಸುದೀರ್ಘ ಸಂಬಂಧವನ್ನು ಉಲ್ಲೇಖಿಸಿದ್ದಾರೆ, “15 ವರ್ಷಗಳು… ಇದು ಎಂದೆಂದಿಗೂ..” ಎಂದು ಬರೆದುಕೊಂಡಿದ್ದಾರೆ.