ಡಾ.ರಾಜ್ ಕುಮಾರ್. ಅಭಿನಯದ ವಿಷ್ಯದಲ್ಲಿ ಅಣ್ಣಾವ್ರಿಗೆ ಸರಿಸಾಟಿಯೇ ಇಲ್ಲ ಬಿಡಿ. ಭಾರತಕ್ಕೊಬ್ಬರೇ ನಟಸಾರ್ವಭೌಮ. ಗಾಯನದ ವಿಷಯದಲ್ಲಿ ಗಾನಗಂಧರ್ವ. ಗಾನಕೋಗಿಲೆ ಅಂತೆಲ್ಲ ಕರೆಸಿಕೊಳ್ಳೋ ಡಾ.ರಾಜ್ ಕುಮಾರ್, ಹಾಡಿಗಾಗಿಯೇ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿರೋ ಏಕೈಕ ಕಲಾವಿದ. ಅಂತಹ ಗಾನಗಂಧರ್ವನ ಹಾಡು ಕೇಳೋದು ಅಂದ್ರೆ ಕರ್ಣ ಕಠೋರ ಅಂತಾ ಒಬ್ಬ ವ್ಯಕ್ತಿ ಟ್ವೀಟ್ ಮಾಡಿದ್ದಾನೆ. ಹಾಗೆ ಮಾಡಿರೋ ವ್ಯಕ್ತಿಯ ಹೆಸರು ಸಂಜಯ್ ನಾಗ್. ಆಮೇಲೆ ಕ್ಷಮೆಯನ್ನೂ ಕೇಳಿದ್ದಾಗಿದೆ.
ಇಲ್ಲಿ ನಾವು ಹೇಳುತ್ತಿರುವುದು ಡಾ.ರಾಜ್ ಕುಮಾರ್ ಅನ್ನೋ ಗಾನಗಂಧರ್ವ, ಸುಖಾಸುಮ್ಮನೆ ಏಕಾಏಕಿ ಸೃಷ್ಟಿ ಆದವರಲ್ಲ. ಸಂಗೀತ ಸರಸ್ವತಿಯ ಪುತ್ರನ ಗಾಯನ ಪ್ರತಿಭೆಗೆ ಇಡೀ ನಾದಲೋಕವೇ ಕೊಂಡಾಡುತ್ತದೆ. ಅವರು ಹಾಡಿರೋ ಹಾಡುಗಳು, ಆ ಹಾಡುಗಳಿಗೆ ಬಳಸಿರೋ ಶಾಸ್ತ್ರೀಯ ಸಂಗೀತದ ಸ್ವರ, ರಾಗಗಳು, ಆ ಹಾಡುಗಳನ್ನ ಶಾಸ್ತ್ರೀಯ ಸಂಗೀತ ಪ್ರವೀಣರೂ ಮೆಚ್ಚುವಂತೆ ಹಾಡಿದ್ದಾರೆ. ಅಂತಹ ಹಾಡುಗಳ ಒಂದು ಚಿಕ್ಕ ಪಟ್ಟಿ ಇಲ್ಲಿ ಕೊಡ್ತಾ ಇದ್ದೀವಿ. ಸಂಗೀತ ಜ್ಞಾನ ಇರುವವರ ಮಾಹಿತಿ ಅಧರಿಸಿ ನೀಡಿರುವ ಮಾಹಿತಿ ಇದು.
ನೀವು ಆಕಸ್ಮಿಕ ಸಿನಿಮಾ ನೋಡಿರ್ತೀರಲ್ಲ. ಆ ಸಿನಿಮಾದಲ್ಲಿ “ಅನುರಾಗದಾ ಭೋಗಾ.. ಸುಖದಾ..” ಹಾಡು ಇರುವುದು ಶುದ್ಧಸಾವೇರಿ ರಾಗದಲ್ಲಿ. ಇನ್ನು ಶ್ರಾವಣ ಬಂತು ಚಿತ್ರದಲ್ಲಿ ಬರುವ “ಇದೇ ರಾಗದಲ್ಲಿ, ಇದೇ ತಾಳದಲ್ಲಿ” ಹಾಡು ಕೂಡಾ ಶುದ್ಧಸಾವೇರಿ ರಾಗದಲ್ಲಿದ್ದರೆ, ಇದೇ ಚಿತ್ರದ “ಬಾನಿನ ಅಂಚಿಂದ ಬಂದೆ..” ಹಾಡು ಹಿಂದೋಳ ರಾಗದಲ್ಲಿದೆ. “ಹೊಸ ಬಾಳಿನ ಹೊಸಿಲಲಿ ನಿಂತಿರುವ“ ಹಾಡು ಕಲ್ಯಾಣಿ ರಾಗದಲ್ಲಿದೆ.
ಅತ್ತ ಪೌರಾಣಿಕ ಕ್ಲಾಸಿಕ್ ಸಿನಿಮಾ ಬಭ್ರುವಾಹನ ಚಿತ್ರದದಲ್ಲಿರುವ “ಆರಾಧಿಸುವೆ ಮದನಾರಿ.. ” ಹಾಡು ಖರಹರಪ್ರಿಯ ರಾಗದಲ್ಲಿದೆ. ಈ ಹಾಡಿನ ಇನ್ನೂ ಒಂದು ವಿಶೇಷ ಎಂದರೆ ಮದನಾರಿ ಹಾಗೂ ಮದನ ಅರಿ ಎಂಬ ಒಂದೇ ಪದವನ್ನು ಒಡೆಯುವ ತಂತ್ರವೂಇದೆ. ಅದು ಒಂದು ಕಡೆ ಮದನಾರಿಯೂ ಹೌದು ಮತ್ತೊಂದು ಕಡೆ ಮದನ ಅರಿ ಅಂದ್ರೆ ಶಿವ ಎಂಬ ಅರ್ಥವೂ ಹೌದು.
“ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ” ಹಾಡು ಕೇದಾರಗೌಳ ರಾಗದಲ್ಲಿದ್ದರೆ, “ಈ ಸಮಯ ಶೃಂಗಾರಮಯ.. ” ಹಾಡುಗಳಲ್ಲಿ ಮೂರು ರಾಗಗಳಿವೆ. ಇದನ್ನ ರಾಗಮಾಲಿಕೆ ಪ್ರಕಾರ ಎಂದು ಕರೆಯುತ್ತಾರಂತೆ. ಅಂದ್ರೆ, ಒಂದೇ ಹಾಡಲ್ಲಿ ಮೂರು ರಾಗಗಳನ್ನ ಸಂಯೋಜನೆ ಮಾಡಿರೋ ಹಾಡು. ಈ ಒಂದೇ ಹಾಡಿನಲ್ಲಿ ಕಲ್ಯಾಣಿ, ಬಹಾರ್ ಮತ್ತು ಬಾಗೇಶ್ರೀ ರಾಗಗಳಿವೆಯಂತೆ.
ಇನ್ನು ಅಣ್ಣಾವ್ರನ್ನ ಇಷ್ಟ ಪಡೋವ್ರು ಯಾರೂ ಕೂಡಾ ಕವಿರತ್ನ ಕಾಳಿದಾಸ ಚಿತ್ರವನ್ನ ಮರೆಯೋದೇ ಇಲ್ಲ. ಶತಪೆದ್ಧನಂತಿದ್ದ ಕುರಿ ಕಾಯುವ ಹುಡುಗ, ದೇವಿ ತ್ರಿಶೂಲದಲ್ಲಿ ಓಂ ಎಂದು ಬರೆದ ತಕ್ಷಣ ಬರುವ ಮುಖಭಾದಲ್ಲಿ ಪೆದ್ದನಾಗಿದ್ದವನು, ಪಂಡಿತನಾಗುವ ಪರಿಯನ್ನು ಕಣ್ಣಿನಲ್ಲೇ ಸಾಕ್ಷಾತ್ಕಾರ ಮಾಡಿಸಿ ಬಿಡುತ್ತಾರೆ ಡಾ.ರಾಜ್.
ಆ ಚಿತ್ರದಲ್ಲಿ “ಮಾಣಿಕ್ಯ ವೀಣಾ ಉಪಲಾಲಯಂತೀಂ .. ”ಶ್ಲೋಕದ ಹಾಡು ಇದ್ಯಲ್ಲ. ಇದೂ ಕೂಡಾ ರಾಗಮಾಲಿಕೆಯಂತೆ. ಕಲ್ಯಾಣಿ, ಹಂಸಧ್ವನಿ, ಹಿಂದೋಳ ರಾಗಗಳ ಸಂಯೋಜನೆ ಇದೆ. ಒಂದು ಹಾಡಲ್ಲಿ ಮೂರು ಶಾಸ್ತ್ರೀಯ ಪದ್ಧತಿಯ ಸ್ವರ ಸಂಯೋಜನೆ ಇದ್ಧಾಗ ಹಾಡೋದು ಅಷ್ಟು ಸುಲಭ ಅಲ್ಲ ಎನ್ನುವುದು ಶಾಸ್ತ್ರೀಯ ಸಂಗೀತದ ಜ್ಞಾನ ಇದ್ದವರ ಮಾತು.
ಇನ್ನೊಂದು ಸಿನಿಮಾ ಶ್ರೀನಿವಾಸ ಕಲ್ಯಾಣದಲ್ಲಿ. ಆ ಚಿತ್ರದಲ್ಲಿ ಬರುವ “ನಾನೇ ಭಾಗ್ಯವತಿ” ಹಾಡು ಕಾನಡ ರಾಗದದಲ್ಲಿದ್ದರೆ, ಚಲಿಸುವ ಮೋಡಗಳು ಚಿತ್ರದ “ಜೇನಿನ ಹೊಳೆಯೋ” ಹಾಡು ಮೋಹನ ರಾಗದಲ್ಲಿದೆ.
ಹೊಸಬೆಳಕು ಚಿತ್ರದಿಂದ “ಚೆಲುವೆಯೇ ನಿನ್ನ ನೋಡಲು.. ” ಹಾಡು ಅಭೇರಿ/ಭೀಮ್‍ಪಲಾಸ್ ರಾಗದಲ್ಲಿದ್ದರೆ, “ಕಣ್ಣೀರ ಧಾರೆ ಇದೇಕೆ ಇದೇಕೆ..” ಹಾಡು ಶುಭ ಪಂತುವರಾಳಿಲಲಿತ್ ರಾಗದಲ್ಲಿದೆ. ಇಲ್ಲಿ ಎರಡು ರಾಗಗಳನ್ನ ಸಂಯೋಜಿಸಿ ಹಾಡು ಬರಲಾಗಿದೆ.
ಜ್ವಾಲಾಮುಖಿ ಚಿತ್ರದಲ್ಲಿರೋ “ಹೇಳುವುದು ಒಂದು ಮಾಡುವುದು ಇನ್ನೊಂದು.. ” ಹಾಡು ಕೂಡಾ ಮುರು ರಾಗಗಳಲ್ಲಿದೆಯಂತೆ. ರಾಗಗಳ ಹೆಸರು (ಚಕ್ರವಾಕ/ಅಹಿರ್ ಭೈರವ್ ರಾಗಗಳು. ಶ್ರುತಿ ಸೇರಿದಾಗ ಚಿತ್ರದಲ್ಲಿನ “ಬೊಂಬೆಯಾಟವಯ್ಯಾ.. ” ಹಾಡು ಚಾರುಕೇಶಿ ರಾಗದಲ್ಲಿದ್ರೆ, “ಶ್ರುತಿ ಸೇರಿದೇ ಹಿತವಾಗಿದೆ.. ” ಹಾಡು ಬೇಹಾಗ್ ರಾಗದಲ್ಲಿದೆ.
ಅನುರಾಗ ಅರಳಿತು ಚಿತ್ರದ “ಶೀಕಂಠಾ ವಿಷಕಂಠ .. ”ಹಾಡು ಸಿಂಹೇಂದ್ರ ಮಧ್ಯಮ ರಾಗದಲ್ಲಿದ್ರೆ, ಕವಿರತ್ನ ಕಾಳಿದಾಸದ “ಸದಾ ಕಣ್ಣಲಿ ಪ್ರಣಯದ ಕವಿತೆ ಹಾಡುವೆ..” ಹಾಡಿದ್ಯಲ್ಲ, ಅದು ಬೃಂದಾವನ ಸಾರಂಗ ರಾಗದಲ್ಲಿದೆ.
ಧ್ರುವತಾರೆ ಚಿತ್ರದ “ಆ ರತಿಯೇ ಧರೆಗಿಳಿದಂತೆ.. ” ಶಿವರಂಜನಿ ರಾಗದಲ್ಲಿದ್ದರೆ, ಜೀವನ ಚೈತ್ರದ “ಲಕ್ಷ್ಮೀ ಬಾರಮ್ಮ ಭಾಗ್ಯ ಲಕ್ಷ್ಮಿ ಬಾರಮ್ಮ.. ” ಮೋಹನ ಕಲ್ಯಾಣಿರಾಗದಲ್ಲಿದೆ. ತಾಯಿಗೆ ತಕ್ಕ ಮಗದ “ವಿಶ್ವನಾಥನು ತಂದೆಯಾದರೆ.. ” ಹಿಂದೂಸ್ತಾನಯಲ್ಲಿದ್ರೆ, ಡಾ.ರಾಜ್ ಅವರಿಗೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟ “ನಾದಮಯ.. ” ಹಾಡು.. ತೋಡಿರಾಗದಲ್ಲಿದೆಯಂತೆ. ಈ ಹಾಡಿಗೆ ಸ್ವರ ಪ್ರಸ್ತಾರ ಮಾಡಿರೋದು ಸ್ವತಃ ಅಣ್ಣಾವ್ರು ಅನ್ನೋ ಒಂದು ಮಾತೂ ಇದೆ.
ಸಂಗೀತದಲ್ಲಿ ಇಷ್ಟೆಲ್ಲ ಪ್ರೌಢಿಮೆ ಇದ್ದ ಡಾ.ರಾಜ್ ಕುಮಾರ್, ತಮ್ಮ ವ್ಯಕ್ತಿತ್ವವನ್ನ ಮಾತ್ರ ಸರಳವಾಗಿಟ್ಟುಕೊಂಡಿದ್ರು.
ಇಷ್ಟೆಲ್ಲ ಆಗಿ ಅವರು ಎಂದೂ ಶಾಸ್ತ್ರೀಯ ಸಂಗೀತವನ್ನ, ಗುರುಗಳ ಹತ್ತಿರ ಹೋಗಿ ಕಲಿತವರಲ್ಲ ಅನ್ನೋದಿದ್ಯಲ್ಲ. ಅದಕ್ಕೇ ಅವರನ್ನ ವರನಟ ಅನ್ನೋದು. ಡಾ.ರಾಜ್ ಕುಮಾರ್ ಅವರ ಕಂಠದಲ್ಲಿ ಹಾಡು ಕೇಳೋದು ಕರ್ಣಕಠೋರ ಅನ್ನೋ ವಿಕೃತಿಗಳಿಗೆ ಇದೊಂದು ಪುಟ್ಟ ಸಾಧನೆಯ ಪಟ್ಟಿ. ಅಷ್ಟೇ.
ಹಾಡುಗಳಿಗೆ ನಿಮಗೆ ಗೊತ್ತಿರುವ ರಾಗ ಮಾಲಿಕೆಯ ಹಾಡುಗಳನ್ನೂ ಸೇರಿಸಿ. ಡಾ.ರಾಜ್ ಕುಮಾರ್ ಅನ್ನೋ ಪ್ರತಿಭೆ ಅಷ್ಟು ಸುಲಭಕ್ಕೆ ದಕ್ಕುವಂಥದ್ದಲ್ಲ. ಅದೊಂದು ಸಮುದ್ರ ಅಂತಾ ಹೇಳ್ಬಹುದು. ಡಾ.ರಾಜ್ ಅವರಿಗೆ ಕಲಾ ಸರಸ್ವತಿ ಸಂಪೂರ್ಣವಾಗಿ ಒಲಿದಿದ್ದಳು ಎನ್ನುವುದು ಸತ್ಯ.