ಬೆಂಗಳೂರು: ದುಬೈನಿಂದ 14 ಕೆಜಿ ಚಿನ್ನವನ್ನು ಕಳ್ಳಸಾಗಾಣಿಕೆ ಮಾಡಿದ ಆರೋಪದಲ್ಲಿ ನಟಿ ರನ್ಯಾರಾವ್ ಪ್ರಕರಣದ ತನಿಖೆ ಇನ್ನೂ ಹೆಚ್ಚು ಚುರುಕುಗೊಂಡಿದೆ. ಡಿ.ಆರ್.ಐ ಮತ್ತು ಸಿಬಿಐಯ ನಂತರ, ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದೇಶದ 8 ಸ್ಥಳಗಳಲ್ಲಿ ಏಕಕಾಲಿಕ ದಾಳಿ ನಡೆಸಿದ್ದಾರೆ.
ಯಾವ ಯಾವ ಸ್ಥಳಗಳಲ್ಲಿ ದಾಳಿ
ಬೆಂಗಳೂರು, ಮಹಾರಾಷ್ಟ್ರದ ಹಲವಾರು ಪ್ರದೇಶ ಹಾಗೂ ರನ್ಯಾರಾವ್ ಅವರ ಮನೆ, ಆಕೆಯ ಹಿಂದಿನ ಸಂಗಾತಿ ತರುಣ್ ರಾಜ್ ಮತ್ತು ಪತಿ ಜತಿನ್ ಹುಕ್ಕೇರಿಯ ಅಪಾರ್ಟ್ಮೆಂಟ್ ಸೇರಿ ವಿವಿಧ ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಹಣ ವರ್ಗಾವಣೆ ಮತ್ತು ಹವಾಲಾ ಲಿಂಕ್
ಇಡಿ ತನಿಖೆ ಪ್ರಕಾರ, ರನ್ಯಾರಾವ್ ಮತ್ತು ಸಂಬಂಧಿತರು ದೇಶದಿಂದ ಅಕ್ರಮವಾಗಿ ಹಣವನ್ನು ವಿದೇಶಕ್ಕೆ ವರ್ಗಾವಣೆ ಮಾಡಿರುವುದು ಮತ್ತು ಬಿಟ್ ಕಾಯಿನ್ ಮೂಲಕ ಹವಾಲಾ ವ್ಯವಹಾರ ನಡೆಸಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಆರೋಪಗಳನ್ನು ಪಿ.ಎಂ.ಎಲ್.ಎ ಕಾಯ್ದೆಯಡಿ ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆ ಮಾಡಲಾಗುತ್ತಿದೆ.
ರನ್ಯಾರಾವ್ ವಿಚಾರಣೆ
ಸದ್ಯ ಜೈಲಿನಲ್ಲಿ ಇರುವ ನಟಿ ರನ್ಯಾರಾವ್ ಅವರನ್ನು ಸಿಬಿಐ ಮತ್ತು ಇಡಿ ಪ್ರತ್ಯೇಕವಾಗಿ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಪತಿ ಜತಿನ್ ಹುಕ್ಕೇರಿ ಅವರ ಕ್ರೆಡಿಟ್ ಕಾರ್ಡ್ ಬಳಸಿ ರನ್ಯಾರಾವ್ ದುಬೈ ಪ್ರವಾಸದ ಟಿಕೆಟ್ ಕಾಯ್ದುಕೊಂಡಿದ್ದರು ಎಂಬ ಮಾಹಿತಿ ಹೊರಬಂದಿದ್ದು, ಇದರಿಂದ ಪತಿಗೂ ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಹಿರಿಯ ಪೊಲೀಸ್ ಅಧಿಕಾರಿಯ ಮೇಲೆ ಅನುಮಾನ
ರನ್ಯಾರಾವ್ ತಂದೆ, ಡಿಜಿಪಿ ರಾಮಚಂದ್ರರಾವ್ ಅವರ ಪ್ರೋಟೋ ಕಾಲ್ ಬಳಸಿ ವಿಮಾನ ನಿಲ್ದಾಣದ ತಪಾಸಣೆಯಿಂದ ತಪ್ಪಿಸಿಕೊಳ್ಳುತ್ತಿದ್ದರೆಂಬ ಆರೋಪವಿದೆ ಎಂದು ಹೇಳಲಾಗಿದೆ. ಈ ಕುರಿತು ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದು, ರಾಜ್ಯ ಸರ್ಕಾರ ಈ ಪ್ರಕರಣದ ತನಿಖೆಗೆ ಐಎಎಸ್ ಅಧಿಕಾರಿ ಗೌರವ ಗುಪ್ತಾ ನೇಮಿಸಿ, ಒಂದು ವಾರದೊಳಗೆ ವರದಿ ಸಲ್ಲಿಸಲು ಸೂಚನೆ ನೀಡಿದೆ. ಜೊತೆಗೆ, ತನಿಖೆ ಮುಗಿಯುವವರೆಗೆ ರಾಮಚಂದ್ರರಾವ್ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲು ಸರ್ಕಾರ ತಯಾರಿ ನಡೆಸುತ್ತಿದೆ ಎಂದು ವರದಿ ಮೂಲಗಳು ತಿಳಿಸಿವೆ.
ಇಡಿಯ ದಾಳಿ ಮತ್ತು ತನಿಖೆಯಿಂದ ರನ್ಯಾ ರಾವ್ ಅವರ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಮತ್ತಷ್ಟು ಹೊಸ ವಿಚಾರಗಳು ಬೆಳಕಿಗೆ ಬರುವ ಸಾಧ್ಯತೆ ಇದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡೀ ಚಿತ್ರರಂಗ ಮತ್ತು ರಾಜಕೀಯ ವಲಯದಿಂದಲೂ ಸ್ಪಂದನೆ ವ್ಯಕ್ತವಾಗುತ್ತಿದೆ.
ನಟಿ ರನ್ಯಾ ಕೇಸ್‌ನಲ್ಲಿ ದಿಢೀರ್ ತಿರುವು: CID ತನಿಖೆ ಆದೇಶ ಹಿಂಪಡೆದ ‘ರಾಜ್ಯ ಸರ್ಕಾರ’!
ರಾಜ್ಯ ಸರ್ಕಾರದಿಂದ ನಟಿ ರನ್ಯಾ ರಾವ್ ಅವರ ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ದಿಢೀರ್ ತಿರುವು ಕಂಡಿದೆ. ಈ ಪ್ರಕರಣದ ತನಿಖೆಯನ್ನು CIDಗೆ ವಹಿಸಿದ್ದ ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ಹಿಂತೆಗೆದುಕೊಂಡಿದೆ.
ರಾಜ್ಯ ಸರ್ಕಾರದಿಂದ ನಟಿ ರನ್ಯಾ ರಾವ್ ಸ್ಮಗ್ಲಿಂಗ್ ಪ್ರಕರಣದಲ್ಲಿ, ಈಗ ACS ಗೌರವ್ ಗುಪ್ತರ ನೇತೃತ್ವದಲ್ಲಿ ಪ್ರತ್ಯೇಕ ತನಿಖೆಗೆ ತಂಡವನ್ನು ರಚಿಸಲಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು ನಟಿ ರನ್ಯಾ ರಾವ್ ಅವರ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣವನ್ನು ಸಿಐಡಿ ತನಿಖೆ ವಹಿಸಿದ್ದನ್ನು ವಾಪಾಸ್ ಪಡೆದಿದೆ.