ಗೋಲ್ಡ್ ಸ್ಮಗ್ಲಿಂಗ್ ಕೇಸ್: ದುಬೈನಲ್ಲಿ ಕಂಪನಿ ತೆರೆದಿದ್ದ ನಟಿ ರನ್ಯಾ ರಾವ್

11 (4)

ಬೆಂಗಳೂರು, ಮಾರ್ಚ್ 17: ಚಿನ್ನ ಕಳ್ಳಸಾಗಾಣಿಕೆ (Gold Smuggling) ಪ್ರಕರಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ನಟಿ ರನ್ಯಾ ರಾವ್ (Ranya Rao) ಅವರನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಉದ್ಯಮಿ ಪುತ್ರ ತರುಣ್ ಅವರ ಹೆಸರು ಕೂಡ ಕೇಳಿಬಂದಿದ್ದು, ಡಿಆರ್‌ಐ ಅಧಿಕಾರಿಗಳು ಅವರನ್ನು ಕೂಡಾ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆಯ ಸಂದರ್ಭ ಹಲವು ಸ್ಫೋಟಕ ಮಾಹಿತಿಗಳು ಬಹಿರಂಗಗೊಂಡಿದ್ದು, ತನಿಖೆ ಮತ್ತಷ್ಟು ಚುರುಕಾಗಿದೆ.

ಅಕ್ರಮ ಚಿನ್ನ ವಹಿವಾಟಿನ ಆರೋಪ

ನಟಿ ರನ್ಯಾ ರಾವ್ ಮತ್ತು ತರುಣ್ ಅವರು 2023ರಲ್ಲಿ “ವೈರಾ ಡೈಮಂಡ್ಸ್ ಟ್ರೇಡಿಂಗ್” (Vaira Diamonds Trading) ಎಂಬ ಹೆಸರಿನಲ್ಲಿ ದುಬೈನಲ್ಲಿ ಕಂಪನಿ ಆರಂಭಿಸಿದ್ದರು. ಈ ಕಂಪನಿಯ ಮುಖಾಂತರ ಅಕ್ರಮವಾಗಿ ಚಿನ್ನ ಆಮದು ಮಾಡಿಕೊಳ್ಳಲಾಗುತ್ತಿತ್ತು. ಹವಾಲಾ ಪದ್ದತಿಯ ಮೂಲಕ ವಿದೇಶೀ ಕರೆನ್ಸಿಯಲ್ಲಿ ಹಣ ಪಾವತಿ ಮಾಡಲಾಗುತ್ತಿದ್ದು, ಈ ಹಣವನ್ನು ಸಕ್ರಮಗೊಳಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ADVERTISEMENT
ADVERTISEMENT

ಈ ಹಿನ್ನೆಲೆಯಲ್ಲಿ ಎನ್‌ಫೋರ್ಸ್‌ಮೆಂಟ್ ಡೈರೆಕ್ಟೊರೇಟ್ (ED) ಕೂಡ ಈ ಪ್ರಕರಣದ ತನಿಖೆ ನಡೆಸುತ್ತಿದೆ. ಇಡಿ ಅಧಿಕಾರಿಗಳು “ವೈರಾ ಡೈಮಂಡ್ಸ್ ಟ್ರೇಡಿಂಗ್” ಕಂಪನಿಯ ವಹಿವಾಟು ಹಾಗೂ ತರುಣ್ ರಾಜು ಅವರ ಬ್ಯಾಂಕ್ ಮಾಹಿತಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಹವಾಲಾ ಮೂಲಕ ಹಣ ವರ್ಗಾವಣೆ ಪ್ರಕರಣದಲ್ಲಿ ತಲುಪಿದ ಮಾಹಿತಿಯ ಆಧಾರದ ಮೇಲೆ ಇಡಿ (ED) ಇನ್ನಷ್ಟು ಆಳವಾದ ತನಿಖೆ ಮುಂದುವರಿಸುವ ಸಾಧ್ಯತೆ ಇದೆ.

ಸಿಬಿಐ ತನಿಖೆಯ ಸಂಕಷ್ಟ ಎದುರಿಸುತ್ತಿರುವ ರನ್ಯಾ ರಾವ್

ಈ ಪ್ರಕರಣದ ತನಿಖೆಯನ್ನು ಸಿಬಿಐ (CBI) ಕೂಡ ಚುರುಕುಗೊಳಿಸಿದೆ. ಸಿಬಿಐ ಈಗಾಗಲೇ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಅಧಿಕಾರಿಗಳಾದ ಪಿಎಸ್‌ಐ ಮತ್ತು ಇಬ್ಬರು ಕಾನ್ಸಟೇಬಲ್‌ಗಳ ಹೇಳಿಕೆ ದಾಖಲಿಸಿಕೊಂಡಿದೆ. ಅಲ್ಲದೆ, ವಿಮಾನ ನಿಲ್ದಾಣದಲ್ಲಿ ಮಹಜರು ನಡೆಸಿ ಹೆಚ್ಚಿನ ಮಾಹಿತಿ ಸಂಗ್ರಹಿಸಿದೆ.

ನಟಿ ರನ್ಯಾ ರಾವ್ ಅವರನ್ನು ಸಿಬಿಐ ತಮ್ಮ ಕಸ್ಟಡಿಗೆ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಿದ್ದು, ಇದಕ್ಕಾಗಿ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ಅನುಮತಿ ಪಡೆಯಲು ಸಿದ್ಧತೆ ನಡೆಸಲಾಗಿದೆ. ಈವರೆಗೂ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ  ಇದ್ದಾರೆ.

ಈ ಪ್ರಕರಣದ ಪ್ರಭಾವ

ಚಲನಚಿತ್ರ ನಟಿ ಹಾಗೂ ಉದ್ಯಮಿಗಳ ತಾಣವನ್ನೇ ಬೆಚ್ಚಿಬೀಳಿಸಿರುವ ಈ ಪ್ರಕರಣದ ತನಿಖೆ ಹಿನ್ನಲೆಯಲ್ಲಿ ಇತರ ಅನುಮಾನಾಸ್ಪದ ವ್ಯವಹಾರಗಳ ಮೇಲೂ ಇಡಿ ಮತ್ತು ಡಿಆರ್‌ಐ ಅಧಿಕಾರಿಗಳು ಕಣ್ಣು ಇಟ್ಟಿದ್ದಾರೆ.

ನಟಿ ರನ್ಯಾ ರಾವ್ ವಿರುದ್ಧ ಆರೋಪಗಳು ಇನ್ನಷ್ಟು ಗಂಭೀರವಾಗಬಹುದು ಎಂಬ ಅಂದಾಜು ಇದೆ. ಮುಂದಿನ ಹಂತಗಳಲ್ಲಿ ನಟಿ ರನ್ಯಾ ಹಾಗೂ ತರುಣ್‌ನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದು ದೀರ್ಘ ವಿಚಾರಣೆ ನಡೆಸಲು ಸಾಧ್ಯತೆ ಇದೆ.

Exit mobile version