ನಮ್ಮದು ವಿವಿಧತೆಯಲ್ಲಿ ಏಕತೆ ಸಾರುವ ದೇಶ. ಇಲ್ಲಿ ಹತ್ತಾರು ಭಾಷೆ, ಗಡಿ, ಪ್ರಾಂತ್ಯ, ಪಂಗಡ, ಜಾತಿ, ಧರ್ಮಗಳಿವೆ. ಆದರೂ ಸಹ ನಾವೆಲ್ಲಾ ಭಾರತೀಯರು ಅನ್ನೋದು ಕೂಡ ಅಷ್ಟೇ ಸ್ಪಷ್ಟ. ಯಾರಿಗೆ ತಾನೆ ಭಾಷಾ ಪ್ರೇಮ ಇರಲ್ಲ ಹೇಳಿ..? ಅದ್ರಲ್ಲೂ ಮಾತೃ ಭಾಷೆ ಅಂದಾಗ ಕೊಂಚ ಜಾಸ್ತಿನೇ ಪ್ರೀತಿ, ಗೌರವ. ಹಾಗಂತ ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲ. ಸಾಕಷ್ಟು ಮಂದಿಗೆ ಇದು ಗೊತ್ತೂ ಸಹ ಇಲ್ಲ. ಎಷ್ಟೋ ಮಂದಿ ಇಂದಿಗೂ ಹಿಂದಿ ನಮ್ಮ ರಾಷ್ಟ್ರ ಭಾಷೆ ಅಂದುಕೊಂಡಿದ್ದಾರೆ. ನಮ್ಮ ಕನ್ನಡ ಭಾಷೆಯಂತೆ ಅದು ಕೂಡ ಒಂದು ಭಾಷೆಯಷ್ಟೇ. ಒಮ್ಮೆ ಕೇಂದ್ರ ಸರ್ಕಾರ ಹಿಂದಿ ಹೇರಿಕೆಗೆ ಮುಂದಾದಾಗ ಎಲ್ಲರೂ ಸಿಡಿದೆದ್ದಿದ್ರು. ಅದ್ರಲ್ಲೂ ಹಿಂದಿಯನ್ನ ಮಾತೃಭಾಷೆ ಎಂದ ಅಜಯ್ ದೇವಗನ್ ಗೆ ಕಿಚ್ಚ ಸುದೀಪ್ ಸರಿಯಾಗಿ ಕ್ಲಾಸ್ ತಗೊಂಡಿದ್ರು.
ನಮ್ಮಂತೆ ಪಕ್ಕದ ತಮಿಳು ಮಂದಿಗೂ ಅವರ ಭಾಷೆ ಮೇಲೆ ಎಲ್ಲಿಲ್ಲದ ವ್ಯಾಮೋಹ. ಅದ್ರಲ್ಲೂ ಅಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಾಬಲ್ಯ ಸಾಧಿಸಿರೋದ್ರಿಂದ ಕೇಂದ್ರ ಸರ್ಕಾರವೇ ಅವರ ಮಾತು ಕೇಳುವಂತಾಗಿದೆ. ಈ ಮಧ್ಯೆ ತಮಿಳುನಾಡು ಸಿಎಂ ಸ್ಟಾಲಿನ್, ಸದ್ಯ ನಡೆಯುತ್ತಿರೋ ಸ್ಟೇಟ್ ಬಜೆಟ್ ಪುಸ್ತಕದಲ್ಲಿ ಹಿಂದಿ ಸಿಂಬಲ್ ಇರೋ ರೂ ಬದಲಿಗೆ ತಮಿಳು ರೂ ಇರೋ ಸಿಂಬಲ್ ಬಳಸಿ ಪ್ರಿಂಟ್ ಮಾಡಿಸಿದ್ದಾರೆ. ಅದೀಗ ಅತೀವ ಚರ್ಚೆಗೆ ಗ್ರಾಸವಾಗಿದೆ.
ಹಿಂದಿ ಹೇರಿಕೆ ಬೇಡ ಅಂತ ಸಿಎಂ ಸ್ಟಾಲಿನ್ ಹಾಗೂ ತಮಿಳು ಸರ್ಕಾರ ಈ ಬಗ್ಗೆ ಕೇಂದ್ರಕ್ಕೆ ಬಿಸಿ ಮುಟ್ಟಿಸಿದೆ. ಆದ್ರೆ NDA ಅಲೈನ್ಸ್ ನಲ್ಲಿರೋ ಜನಸೇನಾ ಪಕ್ಷದ ಮುಖ್ಯಸ್ಥ, ಸದ್ಯ ಆಂಧ್ರ ಡಿಸಿಎಂ ಕೂಡ ಆಗಿರೋ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ತಮಿಳುನಾಡು ಸಿಎಂಗೆ ಸ್ಟಾಲಿನ್ ವಿರುದ್ಧ ಕಿಡಿಕಾರಿದ್ದಾರೆ. ನಿಮ್ಮಗಳಿಗೆ ಸಿನಿಮಾ ಬ್ಯುಸಿನೆಸ್ ಗೆ ಹಿಂದಿ ಬೇಕು. ಇದಕ್ಕೆ ಬೇಡವಾ..? ಹಾಗಾದ್ರೆ ತಮಿಳು ಸಿನಿಮಾಗಳನ್ನ ಹಿಂದಿಗೆ ಏಕೆ ಡಬ್ ಮಾಡ್ತೀರಿ ಅಂತ ಧ್ವನಿ ಎತ್ತಿದ್ದಾರೆ.
ಇನ್ನು ಈ ಸಿಎಂ ಡಿಸಿಎಂ ನಡುವಿನ ಜಗಳಕ್ಕೆ ಬಹುಭಾಷಾ ನಟ ಪ್ರಕಾಶ್ ರೈ ಎಂಟ್ರಿ ಕೊಟ್ಟಿರೋದು ಇಂಟರೆಸ್ಟಿಂಗ್. ಜಸ್ಟ್ ಆಸ್ಕಿಂಗ್ ಹೆಸರಲ್ಲಿ ಪ್ರಶ್ನಿಸುವಂತೆ ಈ ಬಾರಿಯೂ ಕೂಡ ರೈ ತಮ್ಮ ಅಭಿಪ್ರಾಯವನ್ನು ಸೋಶಿಯಲ್ ಮೀಡಿಯಾ ಮೂಲಕ ಹೊರಹಾಕಿದ್ದಾರೆ. ಸಿಎಂ ಸ್ಟಾಲಿನ್ ಪರ ಬ್ಯಾಟ್ ಬೀಸಿರೋ ಪ್ರಕಾಶ್ ರೈ, ಡಿಸಿಎಂ ಪವನ್ ಕಲ್ಯಾಣ್ ವಿರುದ್ಧ ತಮ್ಮ ನಿಲುವನ್ನು ಮಂಡಿಸಿದ್ದಾರೆ.
‘ನಿಮ್ಮ ಹಿಂದಿ ಭಾಷೆಯನ್ನು ನಮ್ಮ ಮೇಲೆ ಹೇರಬೇಡಿ’ ಅಂತ ಹೇಳೋದು ಇನ್ನೊಂದು ಭಾಷೆಯನ್ನ ದ್ವೇಷಿಸುವುದಲ್ಲ. ‘ಸ್ವಾಭಿಮಾನದಿಂದ ನಮ್ಮ ಮಾತೃ ಭಾಷೆಯನ್ನು, ನಮ್ಮ ತಾಯಿಯನ್ನು ಕಾಪಾಡಿಕೊಳ್ಳುವುದು’. ಹೀಗಂತ ಪವನ್ ಕಲ್ಯಾಣ್ ಅವರಿಗೆ ಯಾರಾದ್ರೂ ಹೇಳಿ ಪ್ಲೀಸ್ ಅಂತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ ನಮ್ಮ ರೈ. ಆದ್ರೀಗ ರೈ ರೈಟಾ ಅಥ್ವಾ ಡಿಸಿಎಂ ಪವನ್ ಕಲ್ಯಾಣ್ ರೈಟಾ ಅಂತ ಸಾಕಷ್ಟು ಚರ್ಚೆಯಾಗ್ತಿದೆ. ನೆಟ್ಟಿಗರು ಒಂದಷ್ಟು ಮಂದಿ ಪವನ್ ಗೆ ಸಾಥ್ ಕೊಟ್ರೆ, ತಮಿಳು ಮಂದಿ ಮಾತ್ರ ಪ್ರಕಾಶ್ ರೈ ಪರ ನಿಲ್ತಿದೆ.
– ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್