ಕನ್ನಡ ಕಿರುತೆರೆಯ ಯುವ ಜೋಡಿಗಳ ಪೈಕಿ ಗಮನ ಸೆಳೆದಿದ್ದ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯ ನಟಿ ಪದ್ಮಿನಿ ದೇವನಹಳ್ಳಿ ಹಾಗೂ ‘ಲಕ್ಷ್ಮೀ ನಿವಾಸ’ ಧಾರಾವಾಹಿಯ ಪ್ರಖ್ಯಾತ ನಟ ಅಜಯ್ ರಾಜ್ ಈಗ ಪೋಷಕರಾಗಿದ್ದಾರೆ. ಏಪ್ರಿಲ್ 15, 2025 ರಂದು ಪದ್ಮಿನಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗುವಿನ ಆಗಮನದಿಂದಾಗಿ ಅವರ ಕುಟುಂಬದಲ್ಲಿ ಸಂತೋಷದ ವಾತಾವರಣವಿದೆ.
ಈ ಸಂತೋಷದ ಸುದ್ದಿಯನ್ನು ಅಜಯ್ ರಾಜ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರು ತಮ್ಮ ಹಾಗೂ ಪತ್ನಿ ಪದ್ಮಿನಿಯ ಪ್ರೆಗ್ನೆನ್ಸಿ ಫೋಟೋಶೂಟ್‌ನ ಚಿತ್ರವೊಂದನ್ನು ಶೇರ್ ಮಾಡಿ, ಇದಕ್ಕೆ “It’s a Boy” ಎಂದು ಬರೆದು ಕ್ಯಾಪ್ಷನ್‌ನಲ್ಲಿ “15th April 2025 💙🧿” ಎಂದು ಉಲ್ಲೇಖಿಸಿದ್ದಾರೆ. ಈ ಪೋಸ್ಟ್ ಕೆಲವು ಗಂಟೆಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು, ನಟ-ನಟಿಯರು ಹಾಗೂ ಧಾರಾವಾಹಿಗಳ ತಂಡದಿಂದ ಹಾರ್ದಿಕ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.
ಇತ್ತೀಚೆಗಷ್ಟೇ ಈ ಜೋಡಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡು, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಪದ್ಮಿನಿಯ ಸೀಮಂತದ ಫೋಟೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಪದ್ಮಿನಿ ದೇವನಹಳ್ಳಿ ಕಿರುತೆರೆಯ ಜನಪ್ರಿಯ ಧಾರವಾಹಿಗಳಾದ ‘ಮಹಾದೇವಿ’, ‘ಹಿಟ್ಲರ್ ಕಲ್ಯಾಣ’ ಮೂಲಕ ಖ್ಯಾತಿ ಪಡೆದ ಈ ನಟಿ, ಹಿರಿಯ ನಟ ಕಲಾಗಂಗೋತ್ರಿ ಮಂಜು ಅವರ ಪುತ್ರಿಯಾಗಿದ್ದಾರೆ. ಈಗ ‘ಸೀತಾರಾಮ’ ಧಾರಾವಾಹಿಯಲ್ಲಿ ಮಂಜು, ತಾತನ ಪಾತ್ರವನ್ನೂ ನಿರ್ವಹಿಸುತ್ತಿದ್ದಾರೆ.
ಇದರ ಜೊತೆಗೆ ಅಜಯ್ ರಾಜ್ ಬಾಲ ಕಲಾವಿದನಾಗಿ ಚಿತ್ರರಂಗಕ್ಕೆ ಪ್ರವೇಶಿಸಿ, ಹಲವಾರು ಸಿನಿಮಾಗಳಲ್ಲಿ ಮತ್ತು ಧಾರಾವಾಹಿಗಳಲ್ಲಿ ಪ್ರಭಾವಿ ಪಾತ್ರಗಳನ್ನು ನಿರ್ವಹಿಸಿದ್ದಾರೆ. ‘ಮುಕ್ತ’, ‘ಲಕ್ಷ್ಮೀ ನಿವಾಸ’ ಸೇರಿ ಅನೇಕ ಧಾರಾವಾಹಿಗಳಲ್ಲಿ ಅಜಯ್ ನಟಿಸಿರುವುದರಿಂದ ಅವರು ಮನೆಮಾತಾಗಿದ್ದಾರೆ.
ಪದ್ಮಿನಿ ಮತ್ತು ಅಜಯ್ 4 ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಅವರು ತಾಯಿ-ತಂದೆಯಾಗಿ ಹೊಸ ಜವಾಬ್ದಾರಿಯನ್ನು ಹೆಗಲಿಗೆ ತೆಗೆದುಕೊಂಡಿದ್ದಾರೆ. ಈ ತಾರಾ ಜೋಡಿಯ ಜೀವನದಲ್ಲಿ ಹೊಸ ಅಧ್ಯಾಯ ಶುರುವಾಗಿದೆ. ಈ ಸಂತಸದ ಕ್ಷಣದಲ್ಲಿ, ಹಿಟ್ಲರ್ ಕಲ್ಯಾಣ ಮತ್ತು ಲಕ್ಷ್ಮೀ ನಿವಾಸ ತಂಡದ ಸದಸ್ಯರು ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಈ ದಂಪತಿಗೆ ಶುಭಾಶಯಗಳ ಸುರಿಮಳೆ ನೀಡಿದ್ದಾರೆ.