ಬಾಲಿವುಡ್ ನಟಿ ದಿಶಾ ಪಟಾನಿ ಅವರ ಸಹೋದರಿ ಹಾಗೂ ಮಾಜಿ ಭಾರತೀಯ ಸೇನಾ ಅಧಿಕಾರಿ ಖುಷ್ಬೂ ಪಟಾನಿ ಅವರು ತಮ್ಮ ಮನೆಯ ಹಿಂಬದಿಯ ಪಾಳುಬಿದ್ದ ಕಟ್ಟಡದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಪುಟ್ಟ ಹೆಣ್ಣು ಮಗುವನ್ನು ರಕ್ಷಿಸಿದ್ದಾರೆ. ಈ ಮಾನವೀಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಶ್ಲಾಘನೆ ವ್ಯಕ್ತವಾಗುತ್ತಿದೆ. ಖುಷ್ಬೂ ಅವರು ಮಗುವನ್ನು ಆರೈಕೆ ಮಾಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ.
ಖುಷ್ಬೂ ಅವರ ತಾಯಿ ಪದ್ಮಾ ಪಟಾನಿ ಅವರು ಮನೆಯಲ್ಲಿ ಶುಚಿಗೊಳಿಸುವಾಗ ಮಗುವೊಂದು ಅಳುತ್ತಿರುವ ಶಬ್ದವನ್ನು ಕೇಳಿದ್ದಾರೆ. ಈ ಶಬ್ದದ ಮೂಲವನ್ನು ಕಂಡುಹಿಡಿಯಲು ಖುಷ್ಬೂ ಕೂಡಲೇ ಹೊರಟಿದ್ದಾರೆ. ತಮ್ಮ ಮನೆಯ ಹಿಂಬದಿಯ ಪಾಳುಬಿದ್ದ ಕಟ್ಟಡದಲ್ಲಿ ಸುಮಾರು 9-10 ತಿಂಗಳಿನ ಹೆಣ್ಣು ಮಗುವೊಂದು ಕೊಳಕಿನಲ್ಲಿ ಬಿದ್ದು, ಅಳುತ್ತಿರುವುದನ್ನು ಕಂಡಿದ್ದಾರೆ. ಖುಷ್ಬೂ ಗೋಡೆಯನ್ನು ದಾಟಿ ಮಗುವಿನ ಬಳಿಗೆ ತಲುಪಿ, ಅದನ್ನು ಎತ್ತಿಕೊಂಡು ತಮ್ಮ ಮನೆಗೆ ಕರೆತಂದು ಮೊದಲಿಗೆ ಆರೈಕೆ ಮಾಡಿದ್ದಾರೆ.
ಮಗುವನ್ನು ರಕ್ಷಿಸಿದ ನಂತರ, ಖುಷ್ಬೂ ಅವರ ಕುಟುಂಬವು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿತು. ಪೊಲೀಸರು ಮಗುವನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ಒಳಪಡಿಸಿದ್ದಾರೆ. ತನಿಖೆಯ ಸಂದರ್ಭದಲ್ಲಿ, ಮಗುವಿನ ತಾಯಿಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಮಗುವಿನ ತಾಯಿ ಬಿಹಾರ ಮೂಲದವರಾಗಿದ್ದು, ರೈಲ್ವೆ ಸ್ಟೇಷನ್‌ನಲ್ಲಿ ಮಗುವನ್ನು ಒಬ್ಬ ವ್ಯಕ್ತಿಗೆ ಒಪ್ಪಿಸಿದ್ದಾಗ ಆತ ಮಗುವನ್ನು ಕದ್ದುಕೊಂಡು ಪಾಳುಬಿದ್ದ ಕಟ್ಟಡದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಮಗುವಿನ ಹೆಸರು ಇನಾಯಕ್ ಎಂದು ಗುರುತಿಸಲಾಗಿದೆ.
ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಮಗುವನ್ನು ಕದ್ದವನನ್ನು ಪತ್ತೆಹಚ್ಚಲು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಮಗುವಿನ ತಂದೆ ಇನ್ನೂ ಗುರುತಾಗಿಲ್ಲ ಎಂದು ವರದಿಯಾಗಿದೆ.
ಖುಷ್ಬೂ ಪಟಾನಿ ಅವರು ಈ ಘಟನೆಯ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ, ಅವರು ಮಗುವನ್ನು ಎತ್ತಿಕೊಂಡು ಸಾಂತ್ವನ ಮಾಡುವ ದೃಶ್ಯಗಳಿವೆ. ಅವರು ಮಗುವಿಗೆ ‘ರಾಧಾ’ ಎಂದು ನಾಮಕರಣ ಮಾಡಿದ್ದಾರೆ ಮತ್ತು ಹೆಣ್ಣು ಮಕ್ಕಳ ರಕ್ಷಣೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂದು ಕರೆ ನೀಡಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮತ್ತು ಇತರ ಅಧಿಕಾರಿಗಳನ್ನು ಟ್ಯಾಗ್ ಮಾಡಿ, “ಜಾಕೋ ರಾಖೆ ಸೈಯಾನ್, ಮಾರ್ ಸಕೆ ನಾ ಕೋಯ್” ಎಂಬ ಸಾಲನ್ನು ಉಲ್ಲೇಖಿಸಿದ್ದಾರೆ. ಮಗುವಿನ ಭವಿಷ್ಯವನ್ನು ಸುರಕ್ಷಿತವಾಗಿಡಲು ತಾವು ಖಾತರಿಪಡಿಸುವುದಾಗಿ ಖುಷ್ಬೂ ಭರವಸೆ ನೀಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದಿಶಾ ಪಟಾನಿ, ಭೂಮಿ ಪೆಡ್ನೇಕರ್ ಸೇರಿದಂತೆ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಖುಷ್ಬೂ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ. ದಿಶಾ ತಮ್ಮ ಸಹೋದರಿಗೆ “ನೀವು ನಿಜವಾದ ಹೀರೋ” ಎಂದು ಕಾಮೆಂಟ್ ಮಾಡಿದ್ದಾರೆ.