ಕನ್ನಡ ಚಿತ್ರರಂಗದ ಸ್ಟಾರ್ ನಟ ಕಿಚ್ಚ ಸುದೀಪ್, ಇತ್ತೀಚಿಗೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣರಾಗಿದ್ದಾರೆ. ಕಲಾವಿದರ ನೆಟ್ಟು ಬೋಲ್ಟು ಟೈಟ್ ಮಾಡ್ತೇನೆ ಎಂದು ಚಿತ್ರೋತ್ಸವದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಘರ್ಜಿಸಿದ ಬೆನ್ನಲ್ಲೇ, ಸುದೀಪ್ ಅವರ ಹೆಸರೂ ಮುನ್ನಲೆಗೆ ಬಂದಿದೆ. ಆದರೆ, ಸುದೀಪ್ ಅವರ ವಿಚಾರದಲ್ಲಿ ಸುಖಾಸುಮ್ಮನೆ ದ್ವೇಷ ಸಾಧನೆ ಮಾಡಲಾಗ್ತಿದೆ ಎಂದು ಅವರ ಅಭಿಮಾನಿ ಬಳಗ ಆಕ್ರೋಶ ವ್ಯಕ್ತಪಡಿಸಿದೆ.
ಸುದೀಪ್ ಟಾರ್ಗೆಟ್ ಆಗಲು ಕಾರಣಗಳು ಏನಿರಬಹುದು?
ಕಾಂಗ್ರೆಸ್ ನಾಯಕರು ಸುದೀಪ್ ಅವರನ್ನು ಟಾರ್ಗೆಟ್ ಮಾಡಲು ಕಾರಣಗಳು ಏನಿರಬಹುದು ಎಂಬ ಚರ್ಚೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ನಡೀತಿದೆ. ಈ ಹಿಂದೆ ಸುದೀಪ್ ಪ್ರಶಸ್ತಿ ನಿರಾಕರಣೆ ಮಾಡಿದ್ದರು. ಇದೇ ಕಾರಣಕ್ಕೆ ಸುದೀಪ್ ಅವರನ್ನು ಟಾರ್ಗೆಟ್ ಮಾಡಲಾಗ್ತಿದೆಯಾ ಎಂಬ ಗುಮಾನಿಯೂ ಇದೆ. 2023ರ ವಿಧಾನಸಭಾ ಚುನಾವಣೆ ವೇಳೆ ಕಿಚ್ಚ ಸುದೀಪ್ ಅವರು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ಪ್ರಚಾರ ಮಾಡಿದ್ದರು. ಹೀಗಾಗಿ, ಸರ್ಕಾರದ ಕಣ್ಣುರಿಗೆ ಇದೇ ಮೂಲ ಕಾರಣ ಎಂದೂ ಹೇಳಲಾಗ್ತಿದೆ. ಅದೇನೇ ಇರಲಿ, ಸುದೀಪ್ ಅವರು ಕಳೆದ ಎರಡು ದಶಕಗಳಿಂದ ಸ್ವತಂತ್ರ ನಿಲುವುಗಳನ್ನೇ ಸಾರ್ವಜನಿಕ ಜೀವನದಲ್ಲಿ ಪ್ರದರ್ಶನ ಮಾಡುತ್ತಾ ಬಂದಿದ್ದಾರೆ.
ಪ್ರಶಸ್ತಿ ನಿರಾಕರಣೆ: ಸುದೀಪ್ ವೈಯಕ್ತಿಕ ನಿರ್ಧಾರವೇ ಸರ್ಕಾರಕ್ಕೆ ಸಮಸ್ಯೆ?
2004ರ ನಂತರ ಸುದೀಪ್ ಯಾವುದೇ ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದಿಲ್ಲ. ಗೌರವ ಡಾಕ್ಟರೇಟ್‌ಗಳನ್ನೂ ಸ್ವೀಕರಿಸಿಲ್ಲ. 2019ರಲ್ಲಿ ‘ಪೈಲ್ವಾನ್’ ಚಿತ್ರಕ್ಕೆ ಸಿಕ್ಕ ರಾಜ್ಯ ಪ್ರಶಸ್ತಿಯನ್ನು ಸಹ ನಯವಾಗಿಯೇ ನಿರಾಕರಿಸಿದ್ದರು. ಇತ್ತೀಚೆಗೆ ತುಮಕೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಪ್ರಸ್ತಾಪವನ್ನು ನಿರಾಕರಿಸಿದ್ದರು. ಸುದೀಪ್ ಅವರ ಈ ನಿಲುವುಗಳೇ ಕಾಂಗ್ರೆಸ್ ನಾಯಕರ ಕೋಪಕ್ಕೆ ಕಾರಣವಾಗಿರಬಹುದೇ ಎಂಬ ಪ್ರಶ್ನೆಗಳೂ ಇವೆ.
‘ಮುಸ್ಸಂಜೆ ಮಾತು’ ಅವಮಾನದಿಂದ ನಿಲುವು ಬದಲಿಸಿದ್ರಾ ಸುದೀಪ್?
ಸುದೀಪ್ ಅವರ ‘ಮುಸ್ಸಂಜೆ ಮಾತು’ (2008) ಚಿತ್ರಕ್ಕೆ ಯಾವುದೇ ಪ್ರಶಸ್ತಿ ಸಿಕ್ಕಿರಲಿಲ್ಲ. ‘ರಂಗ SSLC’ (2007) ಹಾಗೂ ‘ಜಸ್ಟ್ ಮಾತ್ ಮಾತಲ್ಲಿ’ (2013) ಚಿತ್ರಗಳ ಸಮಯದಲ್ಲೂ ಅವರು ಅವಮಾನ ಎದುರಿಸಿದ್ದರು. ಪ್ರಶಸ್ತಿಯ ಪಟ್ಟಿಯಲ್ಲಿ ಹೆಸರಿತ್ತು, ಕರೆಯೂ ಬಂದಿತ್ತು. ಆದರೆ ಪ್ರಶಸ್ತಿ ಮಾತ್ರ ಸಿಗಲಿಲ್ಲ! ಕೊನೆಯ ಕ್ಷಣದಲ್ಲಿ ಆದ ಈ ಬದಲಾವಣೆಗಳೇ ಸುದೀಪ್ ಅವರು ಪ್ರಶಸ್ತಿ ಕುರಿತಾಗಿ ವೈರಾಗ್ಯ ಬೆಳೆಸಿಕೊಳ್ಳಲು ಕಾರಣವಾಯ್ತು ಅನ್ನೋದು ಅವರ ಅಭಿಮಾನಿಗಳ ವಾದ.