ಕನ್ನಡದಲ್ಲಿ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿರುವ ಪಿ.ಸಿ.ಶೇಖರ್ ನಿರ್ದೇಶನದ, ಪ್ರತಿಷ್ಠಿತ ಅಲೆಯನ್ಸ್ ಯೂನಿವರ್ಸಿಟಿ ವಿದ್ಯಾ ಸಂಸ್ಥೆಯ ಸಹಯೋಗದೊಂದಿಗೆ ಆಕಾಶ್ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಅವರು ನಿರ್ಮಿಸುತ್ತಿರುವ ನೂತನ ಚಿತ್ರಕ್ಕೆ “ಮಹಾನ್” ಎಂದು ಹೆಸರಿಡಲಾಗಿದೆ. “ಚಿನ್ನಾರಿಮುತ್ತ” ವಿಜಯ ರಾಘವೇಂದ್ರ ಈ ಚಿತ್ರದ ನಾಯಕರಾಗಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಶೀರ್ಷಿಕೆಯನ್ನು ಯುಗಾದಿ ಹಬ್ಬದ ಸಂದರ್ಭದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅನಾವರಣ ಮಾಡಿದರು.
ಶೀರ್ಷಿಕೆ ಅನಾವರಣ ಮಾಡಿ ಮಾತನಾಡಿರುವ ನಟ ಶಿವರಾಜಕುಮಾರ್, ಮಹಾನ್ ಚಿತ್ರದ ಸಣ್ಣ ಗ್ಲಿಂಪ್ಸ್ ಕೇಳಿದೆ. ತುಂಬಾ ಚೆನ್ನಾಗಿದೆ. ಶೀರ್ಷಿಕೆ ಸಹ ಎಲ್ಲರ ಮನಸ್ಸಿಗೂ ಹತ್ತಿರವಾಗಲಿದೆ. ಚಿತ್ರ ಯಶಸ್ವಿಯಾಗಲೆಂದು ಹಾರೈಸಿದ್ದಾರೆ.
ಮೊದಲಿಗೆ, ನಮ್ಮ ಕನ್ನಡ ಚಿತ್ರರಂಗದ ಹೆಮ್ಮೆಯ ಹೀರೋ, ನಮ್ಮ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರಿಗೆ ನಮ್ಮ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿಕೊಟ್ಟಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು. “ಮಹಾನ್” ಚಿತ್ರ ನಮ್ಮ ಭೂಮಿಯ, ನಮ್ಮ ರೈತರ, ಅವರ ಹೋರಾಟದ ಪ್ರತಿಬಿಂಬ. ಈ ಚಿತ್ರ ನಮ್ಮ ಪಾಲಿಗೆ ಕೇವಲ ಒಂದು ಸಿನೆಮಾ ಅಲ್ಲ, ಇದು ನಮ್ಮ ರೈತರಿಗೆ ಅರ್ಪಿಸುವ ಗೌರವ. ಇನ್ನು, ನಾನು ಹೆಮ್ಮೆಯಿಂದ ಹೇಳಬೇಕಾದುದು, ಈ ಚಿತ್ರವನ್ನು ನಿರ್ದೇಶಿಸುತ್ತಿರುವ ನಮ್ಮ ಪ್ರತಿಭಾವಂತ ನಿರ್ದೇಶಕ ಪಿ.ಸಿ. ಶೇಖರ್ ಅವರ ಬಗ್ಗೆ. ಅವರ ಕಲ್ಪನಾಶಕ್ತಿ ಹಾಗೂ ಕಥಾನಾಯಕತ್ವ ಈ ಚಿತ್ರದ ಶಕ್ತಿ ಮತ್ತು ನಮ್ಮ ಚಿತ್ರದ ನಾಯಕ “ಚಿನ್ನಾರಿ ಮುತ್ತ” ವಿಜಯ್ ರಾಘವೇಂದ್ರ—ಈ ಪಾತ್ರಕ್ಕೆ ಇವರಿಗಿಂತ ಹೆಚ್ಚು ಸೂಕ್ತ ವ್ಯಕ್ತಿ ಯಾರೂ ಇರಲಾರರು. ಅವರ ಅಭಿನಯ, ಅವರ ಕನ್ನಡಿಗರ ಜೊತೆಗೆ ಇರುವ ಆತ್ಮೀಯತೆಯು ಈ ಪಾತ್ರಕ್ಕೆ ಜೀವ ತುಂಬಲಿದೆ ಎಂದು ನಿರ್ಮಾಪಕ ಪ್ರಕಾಶ್ ತಿಳಿಸಿದ್ದಾರೆ.
ಆಕಾಶ್ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಅವರು ನಿರ್ಮಾಣ ಮಾಡುತ್ತಿರುವ ಈ ಚಿತ್ರದ ನಾಯಕರಾಗಿ ವಿಜಯ ರಾಘವೇಂದ್ರ ಅಭಿನಯಿಸುತ್ತಿದ್ದು, ಇದು ದೇಶಕ್ಕೆ ಅನ್ನ ನೀಡುವ ಅನ್ನದಾತನಾದ ರೈತನ ಕುರಿತಾದ ಕಥೆ. ಹಾಗಾಗಿ ಚಿತ್ರಕ್ಕೆ “ಮಹಾನ್” ಎಂದು ಹೆಸರಿಡಲಾಗಿದೆ. “ಮಹಾನ್” ಎಂದರೆ ಪ್ರಮುಖ, ಶ್ರೇಷ್ಠ ಎಂಬ ಅರ್ಥಗಳು ಬರುತ್ತದೆ. ಹೌದು. ಅನ್ನ ನೀಡುವ ರೈತ ಎಲ್ಲರಿಗಿಂತ ದೊಡ್ಡವನು ಎಂದು ಎಲ್ಲರಿಗೂ ತಿಳಿದ ವಿಷಯ. ಹಾಗಾಗಿ ನಮ್ಮ ಚಿತ್ರಕ್ಕೆ “ಮಹಾನ್” ಎಂದು ಹೆಸರಿಡಲಾಗಿದೆ. ಈ ಚಿತ್ರದ ಶೀರ್ಷಿಕೆಯನ್ನು ಚಿತ್ರರಂಗದ “ಮಹಾನ್” ವ್ಯಕ್ತಿ ಶಿವರಾಜಕುಮಾರ್ ಬಿಡುಗಡೆ ಮಾಡಿಕೊಟ್ಟಿರುವುದು ತುಂಬಾ ಸಂತೋಷವಾಗಿದೆ. ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ಚಿತ್ರದಲ್ಲಿ ಇನ್ನೂ ಪ್ರಮುಖ ಕಲಾವಿದರು ಅಭಿನಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡುವುದಾಗಿ ನಿರ್ದೇಶಕ ಪಿ.ಸಿ
ಶೇಖರ್ ತಿಳಿಸಿದ್ದಾರೆ.
“ಮಹಾನ್” ಚಿತ್ರವನ್ನು ಪ್ರಕಾಶ್ ಅವರು ನಿರ್ಮಾಣ ಮಾಡುತ್ತಿದ್ದು, ಪಿ.ಸಿ.ಶೇಖರ್ ನಿರ್ದೇಶಿಸುತ್ತಿದ್ದಾರೆ. ನಮ್ಮೆಲ್ಲರ ಮೆಚ್ಚಿನ ಶಿವಣ್ಣ ಶೀರ್ಷಿಕೆ ಅನಾವರಣ ಮಾಡಿಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಮನೋರಂಜನೆ ಇದೆ. ಮನೋರಂಜನೆಯ ಹಿಂದೆ ಒಂದು ಸಂದೇಶವಿದೆ. ನಿಜಕ್ಕೂ ಆ ಸಂದೇಶ “ಮಹಾನ್” ಸಂದೇಶವಾಗಿರಲಿದೆ ಎನ್ನುತ್ತಾರೆ ನಾಯಕ ವಿಜಯ ರಾಘವೇಂದ್ರ.