ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ನಡೆದ ಭೀಕರ ಘಟನೆ ದೇಶದ್ಯಾಂತ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಗೆ ಅನೇಕ ಗಣ್ಯರು ತಮ್ಮ ಬೇಸರ ವ್ಯಕ್ತಪಡಿಸುತ್ತಿದ್ದು, ಇದೀಗ ನಟ ಅನಿರುದ್ಧ ಪ್ರತಿಕ್ರಿಯಿಸಿದ್ದು, ಭಾರತದಲ್ಲಿ ನಡೆದ ಉಗ್ರ ದಾಳಿ ನನ್ನ ಹೃದಯವನ್ನು ನೋಯಿಸಿದೆ. ನಾನು ಈ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಹೇಳಿದ್ದಾರೆ.
ಭಾರತವು “ವಸುಧೈವ ಕುಟುಂಬಕಂ” ಎಂಬ ಮಹೋನ್ನತ ತತ್ತ್ವವನ್ನು ನಂಬಿದ ದೇಶ. ಜಗತ್ತನ್ನೇ ಒಂದು ಕುಟುಂಬವೆಂದು ಪರಿಗಣಿಸುವ ನಂಬಿಕೆಯಿಂದಲೇ ನಾವು ಬೆಳದಿರುವ ಜನಾಂಗ. ಆದರೆ, ಈ ಸತ್ಯವನ್ನು ಇನ್ನೂ ಕೆಲವರು ಅರ್ಥಮಾಡಿಕೊಳ್ಳದೆ, ನಿಷ್ಠುರತೆಯಿಂದ ನಿಷ್ಶಸ್ತ್ರ ನಾಗರಿಕರ ಮೇಲೆ ಹಲ್ಲೆ ನಡೆಸುತ್ತಿರುವುದು ಅತ್ಯಂತ ದುಃಖಕರವಾಗಿದೆ ಎಂದು ಭಾವುಕರಾಗಿ ಹೇಳಿದ್ದಾರೆ.
ನಿಜವಾದ ಧೈರ್ಯ ಯಾರಿಗಿದ್ದರೆ, ಅವರು ನೇರವಾಗಿ ಸಮರಭೂಮಿಗೆ ಬರಬಹುದು. ನಿರಪರಾಧ ಮಹಿಳೆಯರು, ಮಕ್ಕಳು, ಹಿರಿಯರು ಮತ್ತು ಪರಿಷ್ಕೃತ ನಾಗರಿಕರ ಮೇಲೆ ದಾಳಿ ಮಾಡುವುದರಿಂದ ಯಾವುದೇ ಧೈರ್ಯ ಸಾಬೀತುಮಾಡುವುದಿಲ್ಲ. ಇದು ಕೇವಲ ಬಲಹೀನತೆ ಮತ್ತು ಹೀನ ಕೃತ್ಯದ ಸೂಚನೆ ಎಂದು ತೀವ್ರವಾಗಿ ಖಂಡಿಸಿದರು.
ಈ ದಾಳಿಯ ಹಿಂದಿರುವ ದುಷ್ಕರ್ಮಿಗಳು ಶೀಘ್ರದಲ್ಲೇ ಬಂಧಿತರಾಗಿ, ಕಾನೂನಾತ್ಮಕ ರೀತಿಯಲ್ಲಿ ಶಿಕ್ಷೆಗೆ ಒಳಗಾಗಲಿದ್ದಾರೆ ಎಂಬ ವಿಶ್ವಾಸವನ್ನು ನಾನು ವ್ಯಕ್ತಪಡಿಸುತ್ತೇನೆ. ಭಾರತ ಸರ್ಕಾರ ಈ ಸಂಬಂಧದಲ್ಲಿ ತ್ವರಿತ ಮತ್ತು ಕ್ರಮ ಕೈಗೊಳ್ಳಬೇಕಾಗಿದೆ. ಇಂತಹ ಅಂಶಗಳನ್ನು ಬೆಂಬಲಿಸುತ್ತಿರುವ ವ್ಯಕ್ತಿಗಳು ಮತ್ತು ಸಂಘಟನೆಗಳ ಬಗ್ಗೆ ತನಿಖೆ ನಡೆಯಬೇಕು ಎಂದರು.
ನಮ್ಮ ಹಿಂದೂ ಧರ್ಮವು ಜೀವನದ ಸದುದ್ದೇಶವನ್ನು, ಶಾಂತಿಯ ಶಕ್ತಿಯನ್ನು ಪ್ರತಿಪಾದಿಸುತ್ತದೆ. ನಾವು ಒಂದು ಕೈಯಲ್ಲಿ ಗುಲಾಬಿಯನ್ನು ಹಿಡಿದು ಪ್ರೀತಿಯನ್ನು ನೀಡುತ್ತೇವೆ. ಆದರೆ, ನಾವು ಬೇರೆಯ ಕೈಯಲ್ಲಿ ಆಯುಧವನ್ನೂ ಇಡುತ್ತೇವೆ ಅದು ನಮ್ಮ ಜನರ, ದೇಶದ ರಕ್ಷಣೆಗಾಗಿ. ಪ್ರೀತಿ ಮತ್ತು ಶಕ್ತಿಯ ಈ ಸಮತೋಲನವೇ ನಿಜವಾದ ಧರ್ಮದ ಸಾರ ಎಂದು ಹೇಳಿದ್ದಾರೆ.
ಕಾಶ್ಮೀರ ಒಂದು ಶಾಂತ, ಸೌಂದರ್ಯಪೂರ್ಣ ಪ್ರದೇಶ. ಆ ಭಾಗದ ಸಹೋದರರು ಮತ್ತು ಸಹೋದರಿಯರಿಗೂ ನನ್ನ ಮನ್ನಣೆ. ಈ ಪುಣ್ಯಭೂಮಿಗೆ ಉಗ್ರರು ಹೇಗೆ ಪ್ರವೇಶಿಸಿದರು ಎಂಬುದು ಗಂಭೀರ ಪ್ರಶ್ನೆ. ಅವರಿಗೆ ಸ್ಥಳೀಯ ಮಟ್ಟದಲ್ಲೇ ಬೆಂಬಲ ದೊರೆತಿದೆಯೆ? ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಎಲ್ಲಿ ಕೊರತೆ ಉಂಟಾಯಿತು? ಎಂದು ಪ್ರಶ್ನಿಸಿದರು.
ಈ ಘಟನೆಯ ಪರಿಣಾಮವಾಗಿ ಒಂದು ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ತಮ್ಮ ಕಾಶ್ಮೀರ ಭೇಟಿಯನ್ನು ರದ್ದುಗೊಳಿಸಿದ್ದಾರೆ. ಮುಂದೆ ಇನ್ನೂ ಹಲವರು ಹೆದರಿ ಹಿಂತಿರುಗುವ ಸಾಧ್ಯತೆ ಇದೆ. ಇದರಿಂದ ನಷ್ಟವಾಗುವುದು ಯಾರು? ಕಾಶ್ಮೀರದ ಜನತೆಗೆ. ಅವರನ್ನು ಪ್ರೀತಿಸುವ ಜನರಿಗೆ. ಅಲ್ಲಿಯ ಆರ್ಥಿಕತೆಗೆ ಎಂದರು.
ಈ ಘಟನೆಗಳು ನಮಗೆ ಹಿಂದಿನ ಇತಿಹಾಸವನ್ನು ನೆನಪಿಸುತ್ತವೆ. 1947ರ ವಿಭಜನೆಯ ದುರಂತವನ್ನು ನಾವು ಈಗಾಗಲೇ ಅನುಭವಿಸಿದ್ದೇವೆ. ಮಾನವನ ವಿರುದ್ಧ ಮಾನವನೇ ದಾಳಿ ನಡೆಸಿದ ಆ ದಿನಗಳ ನೆನಪು ಇನ್ನೂ ಮರೆತಿಲ್ಲ. ಇತಿಹಾಸದಿಂದ ಪಾಠ ಕಲಿಯೋಣ. ಭಿನ್ನಮತವನ್ನು ಗೌರವಿಸೋಣ. ಶಾಂತಿಯನ್ನು ಬೆಳೆಸೋಣ. ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು, ಧರ್ಮ, ಜಾತಿ ಅಥವಾ ಭಾಷೆಯಿಂದ ಬೇರ್ಪಡಿಸಿಕೊಳ್ಳಬಾರದು ಎಂದು ಹೇಳಿದರು.
ಅಲ್ಲದೇ ಭಾರತವು ಶಕ್ತಿ, ಶಾಂತಿ ಮತ್ತು ಸಹಿಷ್ಣುತೆಗಳ ಭೂಮಿ. ನಾವೆಲ್ಲರೂ ಒಂದು ಕುಟುಂಬದವರಂತೆ ಬದುಕೋಣ. ಇಂತಹ ದುಷ್ಕರ್ಮಿಗಳಿಗೆ ನಮ್ಮ ನಡುವೆ ಯಾವ ಸ್ಥಳವೂ ಇಲ್ಲ. ನಾವು ಎಲ್ಲರೂ ಏಕತೆಯೊಂದಿಗೆ, ಬುದ್ಧಿವಂತಿಕೆಯಿಂದ ಮತ್ತು ಶಕ್ತಿಯಿಂದ ಇಂತಹ ಶಕ್ತಿಗಳಿಗೆ ತಡೆಯೋಣ ಎಂದು ನಟ ಅನಿರುದ್ಧ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.