ಸ್ಯಾಂಡಲ್‌ವುಡ್‌ನ ಪುನೀತ್ ರಾಜ್ ಕುಮಾರ್ ಅವರ 50ನೇ ವರ್ಷದ ಜನ್ಮದಿನ. ರಾಜ್ಯಾದ್ಯಂತ ಅಪ್ಪು ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಪುನೀತ್ ಹುಟ್ಟುಹಬ್ಬದ ಹಿನ್ನೆಲೆ ಬೆಂಗಳೂರಿನ ಕಂಠೀರವ ಸ್ಟುಡಿಯೋಗೆ ಅಭಿಮಾನಿಗಳು ಭೇಟಿ ನೀಡುತ್ತಿದ್ದಾರೆ. ಸಾವಿರಾರು ಅಭಿಮಾನಿಗಳು ಅಪ್ಪು ಅವರ ಸಮಾಧಿಗೆ ಭೇಟಿ ನೀಡಲು ಮುಂಚಿನ ದಿನವೇ ಕ್ಯೂನಲ್ಲಿ ನಿಂತಿದ್ದು, ಅವರ ಹಾಡುಗಳನ್ನು ಹಾಡುತ್ತಾ, ಜೈಕಾರ ಹಾಕುತ್ತಾ ಹೊರನಡೆಯುತ್ತಿರುವ ದೃಶ್ಯ ಕಂಡುಬಂದಿದೆ.
1975ರ ಮಾರ್ಚ್ 17ರಂದು ಪುನೀತ್ ರಾಜ್ ಕುಮಾರ್ ಜನಿಸಿದ್ದು, 2021ರ ಅಕ್ಟೋಬರ್ 29ರಂದು ಹೃದಯಾಘಾತದಿಂದ ನಿಧನರಾದರು. ಇಂದು (ಮಾ. 17) ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳು ಕಂಠೀರವ ಸ್ಟುಡಿಯೋಗೆ ಮುಂಜಾನೆ 6 ಗಂಟೆಯಿಂದಲೇ ಭೇಟಿ ನೀಡುತ್ತಿದ್ದಾರೆ. ಅಪ್ಪು ಅವರ ಸಮಾಧಿಯ ದರ್ಶನ ಮಾಡಿರುವ ಕೆಲವರು ರಾಜ್ ಕುಟುಂಬದ ಹಿರಿಯರಾದ ಡಾ. ರಾಜ್ ಕುಮಾರ್, ಪಾರ್ವತಮ್ಮ ಮತ್ತು ಅಂಬರೀಷ್ ಅವರ ಸಮಾಧಿಗಳಿಗೂ ನಮಸ್ಕಾರ ಸಲ್ಲಿಸಿದರು.
ಕುಟುಂಬಸ್ಥರಿಂದ ವಿಶೇಷ ಪೂಜೆ
ಕುಟುಂಬಸ್ಥರು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ಬೆಳಗ್ಗೆ 9 ಗಂಟೆಯ ನಂತರ ಪುನೀತ್ ಪತ್ನಿ ಅಶ್ವಿನಿ ಪುನೀತ್, ಪುತ್ರಿಯರಾದ ಧ್ರುತಿ ಹಾಗೂ ವಂದಿತಾ, ಸಹೋದರರಾದ ವಿನಯ್ ರಾಜ್ ಕುಮಾರ್, ಯುವರಾಜ್, ರಾಘವೇಂದ್ರ ರಾಜ್ ಕುಮಾರ್, ಮಂಗಳ, ಲಕ್ಷ್ಮಿ, ಷಣ್ಮುಖ, ಗೋವಿಂದರಾಜು, ಧನ್ಯ ರಾಮಕುಮಾರ್, ಧೀರನ್ ರಾಮಕುಮಾರ್ ಅವರು ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ.
ಅಪ್ಪು ಅವರ ಹುಟ್ಟುಹಬ್ಬದ ಪ್ರಯುಕ್ತ ಹಲವು ಸಮಾಜಮುಖಿ ಕಾರ್ಯಕ್ರಮಗಳು ಆಯೋಜನೆಯಾಗಿವೆ. ರಾಜ್ ಕುಟುಂಬಸ್ಥರು ಪೂಜೆ ಬಳಿಕ ಅನ್ನದಾಸೋಹಕ್ಕೆ ಚಾಲನೆ ನೀಡಲಿದ್ದು, ರಕ್ತದಾನ ಶಿಬಿರ, ದರಿದ್ರರಿಗೆ ಉಚಿತ ಆಹಾರ ವಿತರಣೆ ಸೇರಿದಂತೆ ವಿವಿಧ ಸೇವಾ ಕಾರ್ಯಗಳು ನಡೆಯಲಿವೆ. ಅಲ್ಲದೆ, ನಟಿ ಹಾಗೂ ನಿರೂಪಕಿ ಅನುಶ್ರೀ ಮಧ್ಯಾಹ್ನದ ನಂತರ ಪುನೀತ್ ಪುಣ್ಯಭೂಮಿಗೆ ಭೇಟಿ ನೀಡಲಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರ ಜನ್ಮದಿನದ ಪ್ರಯುಕ್ತ ಅವರ ಸೂಪರ್ ಹಿಟ್ ಸಿನಿಮಾ ‘ಅಪ್ಪು’ ಮತ್ತೊಮ್ಮೆ ರೀಲೀಸ್ ಆಗಿದ್ದು, ಇದು ಈಗಾಗಲೇ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಕರ್ನಾಟಕದ ಅನೇಕ ಚಿತ್ರಮಂದಿರಗಳಲ್ಲಿ ಈ ಸಿನಿಮಾಗೆ ಅಪಾರ ಕ್ರೇಜ್ ಇರುವುದರಿಂದ, ಅಭಿಮಾನಿಗಳು ಥಿಯೇಟರ್‌ಗಳಿಗೆ ಬಂದು ಅಪ್ಪು ನೆನಪಿನಲ್ಲಿ ಸಂಭ್ರಮಿಸುತ್ತಿದ್ದಾರೆ.